ನಮ್ಮನ್ನು ಅನುಸರಿಸಿ: Facebook Twitter Instagram YouTube

ಪದ್ಮವಿಭೂಷಣ ಪ್ರೊ. ಸತೀಶ್ ಧವನ್

ಅಪ್‌ಲೋಡ್ ಮಾಡಿದ ದಿನಾಂಕ: 13-12-2025 07:13

ಪದ್ಮವಿಭೂಷಣ ಪ್ರೊ. ಸತೀಶ್ ಧವನ್

ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯಲ್ಲಿ ಶ್ರಮವಹಿಸಿದ ಮಹಾನ್ ವಿಜ್ಞಾನಿ ಸತೀಶ್ ಧವನ್. ಇವರು 1920ರ ಸೆಪ್ಟೆಂಬರ್ 25ರಂದು ಶ್ರಿನಗರದಲ್ಲಿ ಜನಿಸಿದರು. ಭೌತಶಾಸ್ತ್ರ ಮತ್ತು ಗಣಿತಶಾಸ್ತçದಲ್ಲಿ ವಿಜ್ಞಾನ ಪದವಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಕಲಾ ಸ್ನಾತಕೋತ್ತರ ಪದವಿಯನ್ನು ಪಡೆದರು. 1947ರಲ್ಲಿ, ಅವರು ಮಿನ್ನಿಯಾಪೋಲಿಸ್‌ನ ಮಿನ್ನೇಸೋಟ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಅಮೆರಿಕದ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮತ್ತು ಏರೋನಾಟಿಕ್ಸ್ನಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದರು. 1972ರಲ್ಲಿ ಇವರು ಇಸ್ರೋ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೊಸ ದಿಕ್ಕನ್ನು ಸೃಷ್ಟಿಸುತ್ತಾರೆ.

ಇವರ ನೇತೃತ್ವದಲ್ಲಿ ಭಾಸ್ಕರ ಉಪಗ್ರಹ, ಆರ್ಯಭಟ ಉಪಗ್ರಹ ಸೇರಿದಂತೆ ಹಲವು ಯಶಸ್ವಿ ಉಪಗ್ರಹಗಳನ್ನು ಉಡಾಯಿಸಲಾಯಿತು. ಸತೀಶ್ ಧವನ್ ಅವರು ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಗ್ರಾಮೀಣ ಅಭಿವೃದ್ಧಿಯೊಂದಿಗೆ ಹೊಂದಿಸಬೇಕು ಎಂಬ ದೃಷ್ಟಿಕೋನ ಹೊಂದಿದ್ದರು. ಇದರಿಂದ ದೂರದರ್ಶನದ ಮೂಲಕ ಗ್ರಾಮೀಣ ಶಿಕ್ಷಣ ಮತ್ತು ಮಾಹಿತಿ ಹಂಚಿಕೆಗೆ ಪೂರಕವಾದ ಸೈಟ್ (Satellite Instructional Television Experiment) ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರುತ್ತಾರೆ.

ಹಾಗೆಯೇ ದ್ರವಗತಿಯಶಾಸ್ತ್ರ, ಗಾಳಿಯುಂಡೆಗಳ ಅಧ್ಯಯನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿರುತ್ತಾರೆ. ವೈಜ್ಞಾನಿಕ ಸಾಧನೆಗಳೊಂದಿಗೆ ಇವರು ಪ್ರಾಮಾಣಿಕತೆ, ಶಿಸ್ತು, ಮತ್ತು ಜನಮೆಚ್ಚುಗೆಯ ನಾಯಕತ್ವಕ್ಕಾಗಿ ಹೆಸರಾಗಿದ್ದರು. ತಮ್ಮ ಸೇವೆಯ ಅವಧಿಯಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಟ್ಟು ತಮ್ಮ ಜ್ಞಾನವನ್ನು ಜಗತ್ತಿಗೇ ಸಾರಿದ್ದಾರೆ. ಹೀಗೆ ತಮ್ಮದೇ ದೃಷ್ಟಿಕೋನದಿಂದ ಸಾಧನೆಗಳನ್ನು ಮೆರೆದ ಸತೀಶ್ ಧವನ್ ಅವರಿಗೆ ಭಾರತ ಸರ್ಕಾರವು 1971ರಲ್ಲಿ ಪದ್ಮಭೂಷಣ ಮತ್ತು 1981ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುತ್ತಾರೆ.

ಇಂದು ಇಸ್ರೋ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸತೀಶ್ ಧವನ್ ಅವರ ದೂರದೃಷ್ಟಿ ಮತ್ತು ದೃಢನಂಬಿಕೆ ಅಳವಡಿಕೆಗೊಂಡಿರುವುದು ಗಮನಾರ್ಹವಾಗಿದೆ. ಇವರನ್ನು ಭಾರತದಲ್ಲಿ ಪ್ರಾಯೋಗಿಕ ದ್ರವ ಚಲನಶಾಸ್ತç ಸಂಶೋಧನೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ತಮ್ಮ ಜ್ಞಾನದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನೆಯಲ್ಲಿ ತಮ್ಮದೇ ನಾಯಕತ್ವವನ್ನು ಹೊಂದಿದ್ದಾರೆ. ಇವರು ಜನವರಿ 3, 2002 ರಂದು ಎಲ್ಲರನ್ನೂ ಅಗಲುತ್ತಾರೆ. ಅವರ ಸ್ಮರಣಾರ್ಥವಾಗಿ ಇಸ್ರೋದ ಶ್ರೀಹರಿಕೋಟ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರ ಎಂದು 5 ಸೆಪ್ಟೆಂಬರ್ 2002ರಲ್ಲಿ ಹೆಸರಿಡಲಾಗುತ್ತದೆ. ಇವರು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಇಂದಿಗೂ ಶಾಶ್ವತವಾಗಿದೆ.  

⬅ ಮುಖಪುಟ