22ನೆಯ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹೊರಟವರು ಸೂರ್ಯನಾರಾಯಣರಾವ್. 20ನೇ ಆಗಸ್ಟ್ 1924ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ಜನಿಸಿದ ಸೂರೂಜೀಯವರು ಸಂಘದ ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ನಿರಂತರ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂಸೇವಕರನ್ನು ಸೇವೆಯೊಂದಿಗೆ ಜೋಡಿಸಿದ್ದಲ್ಲದೆ, ಇಡೀ ದೇಶದಲ್ಲಿ ಸೇವಾ ಕಾರ್ಯಗಳ ಯೋಜನೆಗಳನ್ನು ತಯಾರಿಸಿದರು. ಸೂರೂಜೀ ಅವರಿಗೆ ಬಾಲ್ಯದಲ್ಲೇ ಸಂಘದ ದ್ವಿತೀಯ ಸರಸಂಘಚಾಲಕರಾದ ಗೋಳ್ವಲ್ಕರ್ ಗುರೂಜಿಯವರ ಸಾನ್ನಿಧ್ಯ ದೊರೆಯಿತು. ಗುರೂಜಿಯವರು ಪ್ರವಾಸದ ನಿಮಿತ್ತ ಕರ್ನಾಟಕಕ್ಕೆ ಯಾವಾಗ ಬಂದರೂ ಇವರ ಮನೆಯಲ್ಲಿ ತಂಗುವುದು ಸಾಮಾನ್ಯವಾಗಿತ್ತು. ಸೂರೂಜಿಯವರು ಗಣಿತದಲ್ಲಿ ಆನರ್ಸ್ ಓದಿ, ಪ್ರಚಾರಕರಾಗಿ ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಂಡರು. ತಮ್ಮ ಪ್ರಚಾರಕ ಜೀವನದಲ್ಲಿ ಸೂರೂಜೀಯವರು ಬೇರೆ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿದರು.
1972ರಲ್ಲಿ ಸೂರೂಜೀಯವರಿಗೆ ತಮಿಳುನಾಡು ಪ್ರಾಂತ ಪ್ರಚಾರಕ್ ಜವಾಬ್ದಾರಿಯನ್ನು ವಹಿಸಲಾಯಿತು. ಆಗ ಆ ಪ್ರಾಂತದಲ್ಲಿ ಭಾಷಾ ಪ್ರತ್ಯೇಕತಾವಾದಗಳು ಉತ್ತುಂಗದಲ್ಲಿದ್ದವು. ಅವರಿಗೆ ತಮಿಳು ಬರುತ್ತಿರಲಿಲ್ಲ, ಆದರೆ ಅವರು ತಮಿಳು ಭಾಷೆಯನ್ನು ಕಲಿತು ಸಮಾಜದ ಎಲ್ಲ ವರ್ಗಗಳನ್ನೂ ಸಂಘ ಕಾರ್ಯದ ಜೊತೆ ಜೋಡಿಸಲು ಪಣತೊಟ್ಟರು. ನಿರಂತರವಾಗಿ 13 ವರ್ಷಗಳ ಕಾಲ ಅಂದರೆ 1984ರ ತನಕ ಅವರು ತಮಿಳುನಾಡಿನ ಪ್ರಾಂತ ಪ್ರಚಾರಕರಾಗಿ ಯುವಕರಲ್ಲಿ ರಾಷ್ಟ್ರಭಕ್ತಿ, ಉತ್ಸಾಹವನ್ನು ತುಂಬುವುದರ ಜೊತೆಗೆ, ಸಾಮಾಜಿಕ ಸಾಮರಸ್ಯವನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದರು.
ಸೂರೂಜೀ ಅವರ ಜೀವನದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರಗಳು ಬಹಳ ಗಾಢ ಪರಿಣಾಮ ಬೀರಿದ್ದವು. ವಿವೇಕಾನಂದರ ವಿಚಾರ "ನರಸೇವೆಯೇ ನಾರಾಯಣ ಸೇವೆ" ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟುಕೊAಡು ಅವರು ಸ್ವಯಂಸೇವಕರಿಗೆ ಹೇಳುತ್ತಿದ್ದರು…"ಯಾರಿಗಾದರೂ ಸರಿ ಭೌತಿಕ ಮಟ್ಟದಲ್ಲಿ ಅನುಕೂಲಗಳನ್ನು ಮಾಡಿಕೊಡುವುದು ಒಂದು ಸಣ್ಣ ಮಟ್ಟದ ಸೇವೆಯೇ ಹೌದು. ಆದರೂ ಅವರಿಗೆ ಯೋಗ್ಯ ಗೌರವ ನೀಡಿ ಅವರು ಭಗವಂತನೆಂದೇ ಭಾವಿಸಿ ಸೇವೆಯನ್ನು ಮಾಡುವುದೇ ಶ್ರೇಷ್ಠ. ಪ್ರತಿಯೊಬ್ಬ ಸ್ವಯಂಸೇವಕನೂ ತಾನು ಸೇವೆಗೆಂದೇ ಮೀಸಲು ಎಂದು ಭಾವಿಸುವುದೇ ಒಂದು ನಿಜವಾದ ಸೇವೆಯಾಗಿದೆ.” ತನ್ನ ಸರಳ ಸ್ವಭಾವದಿಂದಾಗಿ ಅವರು ಪ್ರತಿಯೊಬ್ಬ ಕಾರ್ಯಕರ್ತನಿಗೂ ಇವರು ತಮ್ಮವರೇ ಎನಿಸುತ್ತಿದ್ದರು. ಹಾಗಾಗಿಯೇ ಅವರ ವಿಚಾರಗಳು ಸ್ವಯಂಸೇವಕರ ಮನಸ್ಸು, ಬುದ್ಧಿಗಳೆರಡರಲ್ಲೂ ಉಳಿಯುವಂತಾಯಿತು.
1990ರಲ್ಲಿ ಸೂರ್ಯನಾರಾಯಣರಾವ್ ಅವರು ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ಜವಾಬ್ದಾರಿಯನ್ನು ವಹಿಸಿಕೊಂಡಾಗ ಸೇವಾ ವಿಭಾಗವು ಸಂಘದಲ್ಲಿ ಒಂದು ಹೊಸ ಪ್ರಯೋಗವಾಗಿತ್ತು. ಯಾವುದೇ ವಿಷಯವೇ ಆಗಿರಲಿ, ಪ್ರಯೋಗಶೀಲತೆಯು ಒಂದು ಸವಾಲೇ ಆಗಿತ್ತು. ಆ ಸವಾಲನ್ನು ಸ್ವೀಕರಿಸಿ ಪೂರ್ಣಗೊಳಿಸುವ ಸ್ವಭಾವ ಸೂರೂಜೀ ಅವರದಾಗಿತ್ತು. ಅವರು ಕಾರ್ಯಕರ್ತರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಸ್ವಾತಂತ್ರ‍್ಯವನ್ನು ಕೊಟ್ಟರು. ಬಹುಶಃ ಹಾಗಾಗಿಯೇ ಸಂಘದ ಪ್ರಥಮ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ಅವರ ಕಾಲದಲ್ಲಿ ಸೇವಾ ವಿಭಾಗದ ಕಾರ್ಯಗಳಿಗೆ ಒಂದು ವಿಶೇಷವಾದ ವೇಗ ಸಿಕ್ಕಿತು. ಸಂಸ್ಕಾರ ಕೇಂದ್ರವು ಸಂಪೂರ್ಣ ಸೇವಾಬಸ್ತಿಯ ಪರಿವರ್ತನೆಯ ವಾಹಕವಾಯಿತು.
1989ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಆದ್ಯ ಸರಸಂಘಚಾಲಕ ಡಾ. ಹೆಡಗೇವಾರರ ಜನ್ಮಶತಾಬ್ದಿಯನ್ನು ಆಚರಿಸಲು ಯೋಜನೆಯನ್ನು ರೂಪಿಸಿತು. ಆಗ ಮೊಟ್ಟಮೊದಲಿಗೆ ಈ ಬೃಹತ್ ಕಾರ್ಯಕ್ಕೋಸ್ಕರ ಆರ್ಥಿಕ ವ್ಯವಸ್ಥೆಯನ್ನು ಮಾಡಬೇಕೆಂಬ ಅವಶ್ಯಕತೆಯ ಅರಿವಾಯಿತು. ಸೇವಾ ಕಾರ್ಯಗಳ ಕಾರ್ಯವಿಸ್ತಾರದ ಸಲುವಾಗಿ ಆರ್ಥಿಕ ವ್ಯವಸ್ಥೆ ಮಾಡುವುದು, ಅದನ್ನು ಕಾನೂನಿನ ಚೌಕಟ್ಟಿನಲ್ಲಿ ತರುವುದು, ಈ ಮಹತ್ಕಾರ್ಯಕ್ಕೋಸ್ಕರ ಒಂದು ಟ್ರಸ್ಟ್ ಮಾಡಬೇಕು ಎಂದು ಸೂರೂಜಿಯವರ ಮನಸ್ಸಿನಲ್ಲಿ ಬಂದ ಕೂಡಲೇ 2003 ರಲ್ಲಿ ರಾಷ್ಟ್ರೀಯ ಸೇವಾ ಭಾರತೀ ಎಂಬ ಸಂಸ್ಥೆಯು ಜನ್ಮ ತಾಳಿತು. ಇಷ್ಟೇ ಅಲ್ಲ, ಈ ಹಣದ ಉಪಯೋಗ ಎಲ್ಲಿ ಹೇಗೆ ಆಗುತ್ತಿದೆ ಮತ್ತು ಅದರ ಪರಿಣಾಮ ಏನು, ಈ ಮಾಹಿತಿಯನ್ನು ಇಡೀ ಸಮಾಜಕ್ಕೆ ನೀಡಲು ಗುರೂಜಿಯವರ ಪ್ರೇರಣೆಯಿಂದಲೇ ಸೇವಾ-ದಿಶಾ ಪತ್ರಿಕೆಯ ಪ್ರಕಾಶನವು ಆರಂಭವಾಯಿತು.
ಕಾಲ ಕಳೆದಂತೆ ಸೇವಾ ವಿಭಾಗದ ಆಗುಹೋಗುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ನಂಬಿದವರು. ಸೂರೂಜೀಯವರು ತಮ್ಮ 75 ನೇ ವಯಸ್ಸಿನಲ್ಲಿ ಸ್ವತ: ಜವಾಬ್ದಾರಿಯಿಂದ ಮುಕ್ತರಾಗಲು ಬಯಸಿದರು, ಒಬ್ಬ ಮಹಾನ್ ಸಂಘಟಕ, ಒಬ್ಬ ಶಕ್ತಿಶಾಲಿ ವಿಚಾರವಂತ, ಒಬ್ಬ ಅಸಾಮಾನ್ಯ ಸಂಚಾರಿ ಮತ್ತು ಒಬ್ಬ ಪಕ್ವವಾದ ಗುಂಪಿನ ನಾಯಕ, ಹೀಗೆ ಹಲವು ರೀತಿಯ ವೈಶಿಷ್ಟö್ಯಗಳನ್ನು ಹೊಂದಿದ ಮಾನ್ಯ ಸೂರ್ಯನಾರಾಯಣರಾವ್ ಅವರು ಸಂಘದ ವಿವಿಧ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿದರು. ಅವರು ತಮ್ಮ ಸಾವಿನ ಕೆಲವು ವರ್ಷಗಳ ತನಕವೂ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಟೋಳಿಯ ಸದಸ್ಯರಾಗಿದ್ದರು. ಆರೋಗ್ಯ ಸ್ಥಿರವಾಗಿರುವ ತನಕ ದಕ್ಷಿಣ ಭಾರತದ ಪ್ರತಿಯೊಂದು ಸಂಘ ಶಿಕ್ಷಾ ವರ್ಗಗಳಿಗೆ ಹೋಗಿ ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಇವರು 2016ರ ನವೆಂಬರ್ 19 ರಂದು ವಿಧಿವಶರಾದರು.