ನಮ್ಮನ್ನು ಅನುಸರಿಸಿ: Facebook Twitter Instagram YouTube

ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತ

ಅಪ್‌ಲೋಡ್ ಮಾಡಿದ ದಿನಾಂಕ: 07-12-2025 15:49

ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತ
ಆಧುನಿಕ ಹಿಂದಿ ಕವಿಗಳಲ್ಲಿ ಪ್ರಮುಖರಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತ. ರಾಷ್ಟ್ರಕವಿ ಎಂಬ ಅಭಿದಾನಕ್ಕೆ ಅನ್ವರ್ಥವಾಗಿ ರಾಷ್ಟ್ರೀಯತೆಯ ಕುರಿತಾದ ಮತ್ತು ದೇಶಭಕ್ತಿಯನ್ನು ಮೂಡಿಸುವ ಕವನಗಳನ್ನು ಬರೆಯುತ್ತಿದ್ದರು. ಸಾಹಿತ್ಯ ಕ್ಷೇತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಛಾಪುಮೂಡಿಸಿದ ಗುಪ್ತರು ಹಿಂದಿಯ ಖಾರಿ ಬೋಲಿ ಎಂಬ ಆಡುಭಾಷೆಯಲ್ಲಿ ಕವನಗಳನ್ನು ಬರೆದ ಮೊದಲಿಗರು. ಮೈಥಿಲಿ ಶರಣ್ ಗುಪ್ತ ಅವರು ಆಗಸ್ಟ್ 3, 1886ರಂದು ಉತ್ತರ ಪ್ರದೇಶದ ಝಾನ್ಸಿಯ ಚಿರ್ಗಾಂವ್ ಗ್ರಾಮದಲ್ಲಿ ಜನಿಸಿದವರು. ಅವರ ತಂದೆ ಹೆಸರು ಸೇಥ್ ರಾಮಚರಣ್, ಅವರ ತಾಯಿ ಕಾಶಿ ಬಾಯಿ. ತಮ್ಮ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಅವರು ನಂತರ ಝಾನ್ಸಿಯ ಮ್ಯಾಕ್ ಡೊನಾಲ್ಡ್ ಹೈಸ್ಕೂಲ್‌ನಲ್ಲಿ ಓದಿದ್ದರು. ಅವರು ರಾಮ್ ಸ್ವರೂಪ್ ಶಾಸ್ತ್ರೀ ಮತ್ತು ದುರ್ಗಾದತ್ ಪಂತ್ ಸೇರಿದಂತೆ ಹಿಂದಿ, ಬಾಂಗ್ಲಾ ಹಾಗೂ ಸಂಸ್ಕೃತ ಭಾಷೆಯಲ್ಲಿ ಅಧ್ಯಯನ ನಡೆಸಿದ್ದರು. ಅಷ್ಟೇ ಅಲ್ಲದೆ ಅವರು ಮುನ್ಸಿ ಅಜೇರಿ ಪ್ರೇಮ್ ಅವರಿಂದ ಸ್ಪೂರ್ತಿ ಪಡೆದು ಆನೇಕ ಪತ್ರಿಕೆಗಳಿಗೆ ಕವನಗಳನ್ನು ಬರೆಯುತ್ತಿದ್ದರು. ನಂತರ ಅವರು ಬಹುತೇಕ ಕಾವ್ಯಾತ್ಮಕ ಪುಸ್ತಕಗಳನ್ನು ರಚಿಸಿದ್ದರು. ಕೃತಿಗಳು: 1910ರಲ್ಲಿ ಅವರ ಮೊದಲ ಪ್ರಮುಖ ಕೃತಿ ರಂಗ್ ಮೇ ಭಂಗ್ ಇಂಡಿಯಾನ್ ಪ್ರೆಸ್‌ನಿಂದ ಪ್ರಕಟವಾಗಿತ್ತು. ಆಧ್ಯಾತ್ಮಿಕ ಗುರುಗಳು, ಐತಿಹಾಸಿಕ ಪಾತ್ರಗಳು, ಮಹಿಳಾ ಸಬಲೀಕರಣ, ದೇಶಭಕ್ತಿಯ ವಿಷಯಗಳ ಮೇಲೆ ಅವರ ಬರವಣಿಗೆ ಕೇಂದ್ರೀಕೃತವಾಗಿತ್ತು. ಅವರು 1910ರಲ್ಲಿ ಜಯದ್ರತ್ ವಥ್ ಮತ್ತು 1931ರಲ್ಲಿ ಸಾಕೇತ್ ಸೇರಿದಂತೆ ರಾಮಾಯಣ, ಮಹಾಭಾರತ, ಬೌದ್ಧ ಕತೆಗಳಾಧಾರಿತ ಆನೇಕ ಕವನ ಸಂಕಲನಗಳನ್ನು, ನಾಟಕಗಳನ್ನು ರಚಿಸಿದ್ದಾರೆ. 1912ರಲ್ಲಿ ಬಿಡುಗಡೆಯಾದ ಅವರ ಭಾರತ ಭಾರತಿ ಪುಸ್ತಕವು ಭಾರತೀಯ ಜನಸಾಮಾನ್ಯರಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಪ್ಲಾಸಿ ಕಾ ಯುದ್ಧ, ಭಾರತ ಭಾರತಿ, ಪಂಚವಟಿ ಸೇರಿದಂತೆ ಅನೇಕ ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದರು. ಯಶೋಧರ, ಅರ್ಜನ್ ಔರ್ ವಿಸರ್ಜನ್, ಜಯಭಾರತ್, ದ್ವಾಪರ, ವಿಶ್ವರಾಜ್ಯ, ಕಿರಣೊ ಕಾ ಕೇಲ್, ಮಾನವತಾ ಮುಂತಾದವು ಅವರ ಪ್ರಮುಖ ಕೃತಿಗಳು. ರಾಷ್ಟ್ರಕವಿ ಅಭಿದಾನ: ಏಪ್ರಿಲ್ 5 1932ರಲ್ಲಿ ಅವರು ಮಹಾತ್ಮ ಗಾಂಧಿಯವರಿAದ ಒಂದು ಪತ್ರವನ್ನು ಸ್ವೀಕರಿಸಿದ್ದು, ಅವರು ತಮ್ಮ ಸಾಕೇತ್ ಕೃತಿಗಳನ್ನು ಶ್ಲಾಘಿಸಿದರು. 1936ರಲ್ಲಿ ಕಾಶಿಯಲ್ಲಿ ನಡೆದ ಸಮಾರಂಭದಲ್ಲಿ ಮಹಾತ್ಮ ಗಾಂಧಿಯವರು ಮೈಥಿಲಿ ಶರಣ್ ಗುಪ್ತ ಅವರನ್ನು ರಾಷ್ಟ್ರಕವಿ ಎಂದು ಘೋಷಿಸಿದ್ದರು. ರಾಜಕೀಯ ಜೀವನ: ಸ್ವಾತಂತ್ರ‍್ಯಾನAತರ 1952 ಮಾರ್ಚ 12 ರಂದು ಅವರು ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಗೊಳ್ಳುತ್ತಾರೆ. 1958ರಲ್ಲಿ ಅವರು ಎರಡನೇ ಬಾರಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಒಟ್ಟು 15 ವರ್ಷಗಳ ಕಾಲ ರಾಜ್ಯಸಭೆಯ ಗೌರವ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಶಸ್ತಿಗಳು: 1941ರಲ್ಲಿ ವಾರಣಾಸಿಯ ನಗರಿ ಪ್ರಚಾರಿಣಿ ಸಭಾದಿಂದ ಸುಧಾಕರ ಪದಕ ಪಡೆದಿದ್ದಾರೆ. 1946ರಲ್ಲಿ ಕರಾಚಿಯಲ್ಲಿ ಹಿಂದಿ ಸಾಹಿತ್ಯ ಸಂಘದಿAದ ಸಾಹಿತ್ಯ ವಾಚಸ್ಪತಿ, 1948ರಲ್ಲಿ ಆಗ್ರಾ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಹಾಗೆಯೇ ಅವರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ 1954ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದ ಅತ್ಯುನ್ನತ ನಾಗರರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮೈಥಿಲಿ ಶರಣ್ ಗುಪ್ತ ಅವರು ಡಿಸೆಂಬರ್ 12, 1964 ರಂದು ತಮ್ಮ 78ನೇ ವಯಸ್ಸಿನಲ್ಲಿ ಝಾನ್ಸಿಯಾ ಚಿರ್ಗಾಂವ್ ಗ್ರಾಮದ ಸ್ವಗೃಹದಲ್ಲಿ ನಿಧನರಾದರು.
⬅ ಮುಖಪುಟ