ನಮ್ಮನ್ನು ಅನುಸರಿಸಿ: Facebook Twitter Instagram YouTube

ತಿರುವಳ್ಳುವರ್

ಅಪ್‌ಲೋಡ್ ಮಾಡಿದ ದಿನಾಂಕ: 13-06-2026 15:28

ತಿರುವಳ್ಳುವರ್
ತಮಿಳುನಾಡಿನ ಪ್ರಖ್ಯಾತ ಕವಿ ತಿರುವಳ್ಳುವರ್. ತಮಿಳು ಭಾಷೆಯಲ್ಲಿ ತಿರುಕ್ಕುರಳ್ ಎಂಬ ಪದ್ಯಗಳ ಮೂಲಕ, ತಮಿಳುನಾಡಿನ ಜನಸಾಮಾನ್ಯರಿಗೂ ಸಹಾ ಮೌಲ್ಯಗಳನ್ನು ಸಾಹಿತ್ಯದ ಮೂಲಕ ತಿಳಿಯುವಂತೆ ಬರೆದರು. ಅದರ ಪರಿಣಾಮವಾಗಿ ತಮಿಳುನಾಡಿನ ಸಾಮಾನ್ಯ ಜನರಿಗೂ ಸಹಾ ಹತ್ತಾರು ತಿರುಕ್ಕುರುಳ್ ಗಳು ಕಂಠಪಾಠವಾಗುವಷ್ಟು ಪ್ರಸಿದ್ಧಿಯಾಗಿದ್ದು ಆ ಸಾಹಿತ್ಯ ಜನಪ್ರಿಯವಾದ ಪರಿಯನ್ನು ಹೇಳುತ್ತದೆ.

ತಿರುವಳ್ಳುವರ್ ಅವರ ಹುಟ್ಟು ಮತ್ತು ಬದುಕಿನ ಬಗ್ಗೆಯೂ ಅನೇಕ ಜಿಜ್ಞಾಸೆಗಳಿವೆ. ಅವುಗಳಲ್ಲಿ ಒಂದು ಅಭಿಪ್ರಾಯದ ಪ್ರಕಾರ ನೇಕಾರವೃತ್ತಿಯ ಜೊತೆಗೆ ತಿರುವಳ್ಳುವರ್ ತಮ್ಮ ಜೀವನದ ಕೆಲವು ಸಮಯವನ್ನು ಮಧುರೈನ ಪಾಂಡ್ಯ ವಂಶದ ರಾಜನ ಆಸ್ಥಾನದಲ್ಲಿ ಕವಿಯಾಗಿದ್ದರು ಎನ್ನಲಾಗುತ್ತದೆ.

ತಿರುಕ್ಕುರಲ್ ಗ್ರಂಥವನ್ನು 3 ಮುಖ್ಯ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮೊದಲನೆಯದು ಅರಮ್ ವಿಭಾಗದಲ್ಲಿ 38 ಅಧ್ಯಾಯಗಳಿದ್ದರೆ , ಎರಡನೆಯದು ಪೊರಲ್ ವಿಭಾಗದಲ್ಲಿ 70 ಅಧ್ಯಾಯಗಳಿದ್ದು, ಕೊನೆಯ ವಿಭಾಗವಾದ ಕಾಮಮ್ ನಲ್ಲಿ ವಿಭಾಗದಲ್ಲಿ 25 ಅಧ್ಯಾಯಗಳಿವೆ. ಪ್ರತೀ ಅಧ್ಯಾಯದಲ್ಲೂ 10 ದ್ವಿಪದಿಗಳನ್ನು (ಕುರಳ್‌) ಒಳಗೊಂಡಿದ್ದು, ಒಟ್ಟು 133 ಅಧ್ಯಾಯಗಳನ್ನು ಒಳಗೊಂಡ 1333 ಸಣ್ಣ ಸಣ್ಣ ದ್ವಿಪದಿಗಳು ತಿರುಕ್ಕುರಳ್ ಕೃತಿಯಲ್ಲಿದೆ. ಮೊದಲನೆಯ ಅರಮ್ ಭಾಗದಲ್ಲಿ ಆತ್ಮಸಾಕ್ಷಿ, ಗೌರವ ಮತ್ತು ಉತ್ತಮ ನಡುವಳಿಕೆಗಳ ಜೊತೆ ಮನುಷ್ಯನ ಸದ್ಗುಣಗಳ ಬಗ್ಗೆ ಸವಿವರವಾಗಿ ವಿವರಿಸಿದ್ದಾರೆ. ಎರಡನೆಯ ಪೊರಲ್ ಭಾಗವು ಅತ್ಯಂತ ದೊಡ್ಡ ಭಾಗವಾಗಿದ್ದು, ಇದರಲ್ಲಿ ಲೌಕಿಕ ವ್ಯವಹಾರಗಳಲ್ಲಿ ಅನುಸರಿಸಬೇಕಾದ ಮಾರ್ಗ ಮತ್ತು ಸೂಚನೆಗಳನ್ನು ನೀಡಿರುವುದಲ್ಲದೇ, ರಾಜ್ಯವನ್ನಾಳುವ ರಾಜ ಮತ್ತು ಮಂತ್ರಿಗಳು ರಾಜ್ಯವನ್ನು ಹೇಗೆ ನಿರ್ವಹಿಸಬೇಕು ಎಂಬುದರ ವಿವರಣೆ ಇದೆ. ಇದರ ಜೊತೆಯಲ್ಲೇ ಸಂವಿಧಾನ, ಕಾನೂನು ಪರಿಪಾಲನೆ, ಆಹಾರ ವಿತರಣೆ, ಜನ ಸಾಮಾನ್ಯರ ಯೋಗಕ್ಷೇಮಗಳ ಕುರಿತಾಗಿಯೂ ಸವಿವರವಾಗಿದೆ. ಅದೇ ರೀತಿ ಮೂರನೇ ಕಾಮಮ್ ವಿಭಾಗದಲ್ಲಿ ಹೆಣ್ಣು ಮತ್ತು ಗಂಡಿನ ನಡುವೆ ಇರಬೇಕಾದ ಪರಸ್ಪರ ಪ್ರೀತಿ ಮತ್ತು ನಂಬಿಕೆಗಳ ಬಗ್ಗೆ ತಿಳಿಸುತ್ತದೆ.

ತಿರುವಳ್ಳುವರ್ ಅವರು ಬರೆದಿರುವ ಈ ತಿರುಕ್ಕುರಳ್ ಕೃತಿಯು ತಮಿಳು ಭಾಷೆಯ ಅತ್ಯಂತ ಪೂಜ್ಯ ಮತ್ತು ಪ್ರಾಚೀನ ಕೃತಿಗಳಲ್ಲಿ ಒಂದಾಗಿದ್ದು, ಜೀವನದಲ್ಲಿ ನೀತಿ ಮತ್ತು ಸುಧಾರಣೆ ಹೊಂದಲು ಒಂದು ಸೂಕ್ತವಾದ ಮಾರ್ಗದರ್ಶಿಯಾಗಿರುವ ಕಾರಣ, ಇದು ತಮಿಳುನಾಡಿನ ಜನಸಾಮಾನ್ಯರಲ್ಲಿ ಹಾಸು ಹೊಕ್ಕಾಗಿದೆ. ಇಂತಹ ಅದ್ಭುತವಾದ ತಿರುಕ್ಕುರಳ್ ಕೃತಿಯು ಭಾರತದ ಇತರೇ ಭಾಷೆಗಳಲ್ಲದೇ ಅನೇಕ ವಿದೇಶೀ ಭಾಷೆಗಳಿಗೂ ಅನುವಾದಗೊಂಡಿದೆ. 1730ರಲ್ಲಿ ಕಾನ್ಸ್ಟಂಟೈನ್ ಜೋಸೆಫ್ ಬೆಸ್ಚೀರವರು ಈ ತಿರುಕ್ಕುರಳ್ ಕೃತಿಯನ್ನು ಲ್ಯಾಟಿನ್ ಭಾಷೆಗೆ ಅನುವಾದಮಾಡುವ ಮೂಲಕ ದಕ್ಷಿಣ ಭಾರತದ ಈ ತತ್ತ್ವಜ್ಞಾನಿಯನ್ನು ಯೂರೋಪಿಯನ್ನರಿಗೂ ಪರಿಚಯಿಸಿದ್ದದ್ದು ಅತ್ಯಂತ ಅಭಿನಂದನಾರ್ಹವಾಗಿದೆ.

ತಿರುವಳ್ಳುವರ್ ಅವರು ಈ ತಿರುಕ್ಕುರಳ್ ಅಲ್ಲದೇ ಜ್ಞಾನ ವೆಟ್ಟಿಯಾನ್ ಮತ್ತು ಪಂಚರತ್ನಮ್ ಎಂಬ ಇನ್ನೆರಡು ಕೃತಿಗಳನ್ನು ರಚಿಸಿದ್ದು ಅದರಲ್ಲಿ ಔಷಧಿಗಳಿಗೆ ಸಂಬಂಧ ಪಟ್ಟ ಕೃತಿಗಳಾಗಿದ್ದು, ವಿಜ್ಞಾನ, ಸಾಹಿತ್ಯ, ಆರ್ಯುವೇದ ಮತ್ತು ಔಷಧಕ್ಕೆ ಈ ಗ್ರಂಥದ ಕೊಡುಗೆ ಅಪಾರವಾಗಿದೆ.

ತಮಿಳರ ಮನೆ ಮತ್ತು ಮನಗಳಲ್ಲಿ ಹಾಸು ಹೊಕ್ಕಾಗಿರುವ ತಿರುವಳ್ಳುವರ್ ಅವರ ಜ್ಞಾಪಕಾರ್ಥವಾಗಿ ಚೆನೈನಲ್ಲಿ 1976ರಲ್ಲಿ ವಳ್ಳುವರ್ ಕೋಟ್ಟಮ್ ಎಂಬ ಸ್ಮಾರಕವನ್ನು ನಿರ್ಮಿಸಲಾಗಿದೆ. ದ್ರಾವಿಡ ಶೈಲಿಯ ಕೆತ್ತನೆಯನ್ನು ಒಳಗೊಂಡಿದೆ ಈ ಸ್ಮಾರಕದ ಪಕ್ಕದಲ್ಲೇ ಸುಮಾರು 4000 ಸಾವಿರ ಆಸನಗಳ ವ್ಯವಸ್ಥೆಗಳುಳ್ಳ ಸಭಾಂಗಣವೊಂದಿದ್ದು ಅದು ಏಷ್ಯಾದಲ್ಲೇ ಅತಿ ದೊಡ್ದ ಸಭಾಂಗಣವಾಗಿದೆ ಎನ್ನುವುದು ವಿಶೇಷವಾಗಿದೆ.

1962ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮಶನಮಾನೋತ್ಸವದ ಸಂದರ್ಭದಲ್ಲಿ ತಮಿಳುನಾಡಿನ ಕನ್ಯಾಕುಮಾರಿ ಕಡಲತಡಿಯಲ್ಲಿ ವಿವೇಕಾನಂದರು ತಪಸ್ಸು ಮಾಡಿ ಜ್ಞಾನೋದಯ ಪಡೆದ ಸ್ಥಳದಲ್ಲಿ ವಿವೇಕಾನಂದ ಸ್ಮಾರಕ ಕೇಂದ್ರವನ್ನು ನಿರ್ಮಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀ ಏಕನಾಥ್ ರಾನಡೆಯವರು ಮುಂದಾದಾಗ, ಅದಕ್ಕೆ ಬಾರಿ ಪ್ರತಿಭಟನೆಯಾಗಿ ನಂತರದ ದಿನಗಳಲ್ಲಿ 323 ಸಂಸದರ ಅನುಮೋದನಾ ಪತ್ರದಿಂದ 1970ರಲ್ಲಿ ವಿವೇಕಾನಂದ ಸ್ಮಾರಕ ಉದ್ಘಾಟನೆಗೊಂಡಾಗ ಸ್ಥಳೀಯರು ಆ ಪ್ರದೇಶದಲ್ಲಿ ತಿರುವಳ್ಳುವರ್ ಅವರ ಪ್ರತಿಮೆಯನ್ನೂ ಸಹ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದ ಪರಿಣಾಮ, ಜನವರಿ 1, 2000 ರಂದು ಅದೇ ವಿವೇಕಾನಂದ ಸ್ಮಾರಕದ ಮತ್ತೊಂದು ಬದಿಯಲ್ಲಿ ಸುಮಾರು 133 ಅಡಿ ಎತ್ತರದ (40.6 ಮೀಟರ್) ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಪ್ರತಿಮೆ ಮತ್ತು ಪೀಠದ ಸಂಯೋಜಿತ ಎತ್ತರ ತಿರುಕ್ಕುರಳ್ 133 ಅಧ್ಯಾಯಗಳು ಸೂಚಿಸುವ 133 ಅಡಿ ಆಗಿದೆ. ಇದು 7000 ಟನ್ ಒಟ್ಟು ತೂಕವನ್ನು ಹೊಂದಿದೆ. ಅದೇ ರೀತಿಯಾಗಿ ಲಂಡನ್ನಿನ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ ಸ್ಕೂಲ್ ಹೊರಗೆಯೂ ಸಹಾ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಕರ್ನಾಟಕ ಮತ್ತು ತಮಿಳುನಾಡಿನ ಈ ಎರಡೂ ರಾಜ್ಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವ ಸಾಂಕೇತಿಕ ಪ್ರಯತ್ನವಾಗಿ ಕನ್ನಡದ ಕವಿ ಸರ್ವಜ್ಞನ ಪ್ರತಿಮೆ ತಮಿಳುನಾಡಿನಲ್ಲೂ ಮತ್ತು ತಮಿಳುನಾಡಿನ ತಿರುವಳ್ಳುವರ್ ಅವರ ಪ್ರತಿಮೆಯನ್ನು ಕರ್ನಾಟಕದಲ್ಲಿ ನಿರ್ಮಿಸಲು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ತೀರ್ಮಾನಿಸಿ ಪ್ರತಿಮೆಗಳನ್ನು ನಿರ್ಮಾಣ ಮಾಡಿದರೂ ಅದರ ಅನಾವರಣ ಕುರಿತಾಗಿ ಭಾರೀ ಪ್ರತಿಭಟನೆಗಳು ನಡೆದು ಅಂತಿಮವಾಗಿ ಆಗಸ್ಟ್ 2009ರಲ್ಲಿ ಎರಡೂ ಪ್ರತಿಮೆಗಳನ್ನೂ ಅನಾವರಣಗೊಳಿಸಲಾಯಿತು. ಇದು ಎರಡೂ ರಾಜ್ಯಗಳ ನಡುವೆ ಭಾವೈಕ್ಯತೆಯನ್ನು ತರಲು ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ. ಒಳ್ಳೆಯ ವಿಷಯಗಳು ಯಾವುದೇ ಭಾಷೆಯಲ್ಲಿ ಯಾರೇ ಬರೆದಿದ್ದರೂ ಅದನ್ನು ಓದಿ ಅರ್ಥೈಸಿಕೊಂಡು ಅದರ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮವಾದ ಮಾರ್ಗವೆನ್ನುವುದು ಭಾರತೀಯ ಚಿಂತನೆ.

⬅ ಮುಖಪುಟ