ಶ್ರೀಮಾತೆ ಶಾರದಾದೇವಿ ಹುಟ್ಟಿದ್ದು 22ನೇ ಡಿಸೆಂಬರ್ 1853, ಪಶ್ಚಿಬಂಗಾಳದ ಜಯರಾಂಬಾಟಿಯಲ್ಲಿ. ತಂದೆ ರಾಮಚಂದ್ರ ಮುಖರ್ಜಿ, ತಾಯಿ ಶ್ಯಾಮಸುಂದರಿದೇವಿ. ಐದನೇ ವಯಸ್ಸಿಗೆ ರಾಮಕೃಷ್ಣರೊಡನೆ ವಿವಾಹ! ಕಾಮುಕತೆಯ ಕಿಲುಬೇ ಇಲ್ಲದ ದಾಂಪತ್ಯದ ಆದರ್ಶ ತೋರಲೆಂದೇ ಅವತರಿಸಿ, ಒಬ್ಬರಿಗೊಬ್ಬರು ಒರೆಸಿದಂತಿತ್ತು ಈ ಜೋಡಿ. ಇಲ್ಲಿ ಪತಿಯೇ ಗುರುವಾಗಿ ಸತಿಗೆ ಆಧ್ಯಾತ್ಮಿಕ ಅನುಭವಗಳನ್ನು ಧಾರೆ ಎರೆಯುತ್ತಾನೆ. ತತ್ಪರಿಣಾಮ ಆಕೆ ಪರಿಪೂರ್ಣತೆ ಸಾಧಿಸಿ ಪತಿಯಂತೆ ದಿವ್ಯ ಜೀವನ ತತ್ತ್ವಗಳನ್ನು ಜಗತ್ತಿಗೆ ಧಾರೆಯೆರೆಯುತ್ತಾಳೆ. ತನ್ನ ಸೂನುಗಳ ತಾಯಿಯಾಗಬೇಕಿದ್ದವಳು ಜಗಜ್ಜನನಿ, ಲೋಕಮಾತೆ, ಆದ್ಯಾಶಕ್ತಿ ಶ್ರೀಮಾತೆ ಎಂದೆಲ್ಲಾ ಜಗದ ಜನರೆದುರು ಶೋಭಿಸುತ್ತಾಳೆ.
ಶ್ರೀರಾಮಕೃಷ್ಣರು ದಾಂಪತ್ಯದ ಕರ್ತವ್ಯ ತಿಳಿದಿದ್ದರು. ಮಡದಿ ಇಚ್ಛಿಸಿದರೆ ತಮ್ಮ ಜೀವನದ ಆದರ್ಶ ಭಗವದ್‌ಪ್ರಾಪ್ತಿಯನ್ನು ತ್ಯಾಗಮಾಡಲು ಸಿದ್ಧರಾಗಿದ್ದರು. ಆದರೆ ಶ್ರೀಮಾತೆ ಕೂಡಾ ತಮ್ಮಿಂದ ಪತಿಯ ಋಷಿಸದೃಶ ದೈವೀ ಜೀವನವನ್ನು ಸಂಸಾರಗೋಜಲುಗೆಳೆಯಲು ಸ್ವಲ್ಪವೂ ಇಷ್ಟವಿರಲಿಲ್ಲ. ಶಾರದಾ ಮಾತೆ ಪರಿಶುದ್ಧರೂ, ಮಹಿಮಾವಂತರೂ, ಉದಾತ್ತ ಮನೋಭಾವದವರೂ ಆಗಿದ್ದರು. ಪತಿಯ ಸೇವೆ ಹಾಗೂ ಅವರ ಆಣತಿಯಂತೆ ತಮ್ಮ ಜೀವನೋದ್ಧಾರ ಮಾಡಿಕೊಳ್ಳುವುದಷ್ಟೇ ಶಾರದಾ ಮಾತೆ ಬಯಸಿದ್ದರು. ಅದರಂತೆ ಶ್ರೀರಾಮಕೃಷ್ಣರು ಅಧ್ಯಾತ್ಮಿಕ ಹಾಗೂ ಅಲೌಕಿಕ ಉನ್ನತ ಜ್ಞಾನವನ್ನು ಅವರಿಗೆ ಧಾರೆಯೆರೆದರು.
ಮಂದಿರದಲ್ಲಿದ್ದ ಭವತಾರಿಣಿ ಹಾಗೂ ಬಳಿಗಿದ್ದ ಶಾರದಾಮಣಿ ಇಬ್ಬರೂ ಒಂದೇ ಎಂದು ಭಾವಿಸಿದ್ದ ರಾಮಕೃಷ್ಣರು ಆಕೆಯನ್ನು ಸಾಕ್ಷಾತ್ ಜಗನ್ಮಾತೆಯ ಮೂರ್ತ ಸ್ವರೂಪವೆಂದು ಹೇಳುತ್ತಿದ್ದರು. ಷೋಡಶಿ ಪೂಜಾ ಉತ್ಸವದಂದು ಶಾರದಾ ಮಾತೆಯಲ್ಲಿ ಕಾಳಿಯನ್ನು ಆವಾಹಿಸಿ ಪೂಜೆಗೈದರು. ಕ್ರಮಬದ್ಧ ಪೂಜೆಗೈಯ್ಯುತ್ತಿದ ರಾಮಕೃಷ್ಣರು ಭಾವಸಮಾಧಿಗೇರಿದರೆ, ಪೂಜೆಗೊಳ್ಳುತ್ತಿದ್ದ ಶಾರದಾ ಮಾತೆಯೂ ಸಮಾಧಿಸ್ಥಿತಿ ತಲುಪಿದ್ದರು! ಪೂಜೆಗಯ್ಯುತ್ತಿದ್ದವರು ಹಾಗೂ ಪೂಜೆಗೊಳ್ಳುತ್ತಿದ್ದವರಿಬ್ಬರೂ ಅನಂತತೆಯಲ್ಲಿ, ಬ್ರಹ್ಮಭಾವದಲ್ಲಿ ಒಂದಾಗಿದ್ದರು! ಅನಂತರ ತಮ್ಮ ಉಪಾಸನೆಯ ಪೂರ್ಣಫಲವನ್ನು ಜಗದ್ಧಾತ್ರಿ ಕಾಳೀಮಾತೆಗೆ ಸಮರ್ಪಿಸಿದ ರಾಮಕೃಷ್ಣರಿಗೆ ಅದುವೇ ಪರಿಪೂರ್ಣತೆಯ ಘಟ್ಟವಾಗಿತ್ತು, ಅದನ್ನು ತಲುಪಲು ಶಾರದಾ ಮಾತೆಯೇ ಮಹಾಮಾರ್ಗವಾಗಿದ್ದರು.
ಶ್ರೀರಾಮಕೃಷ್ಣರ ದೇಹತ್ಯಾಗದ ನಂತರ ಅವರ ಶಿಷ್ಯಕೋಟಿಗೆಲ್ಲಾ ದಾರಿ ತೋರಿದ್ದೂ ಶ್ರೀಮಾತೆಯವರೆ! ಮೊದಮೊದಲು ಕೆಲಭಕ್ತರು ಶ್ರೀಮಾತೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರಲಿಲ್ಲವಾದರೂ ನಂತರದ ದಿನಗಳಲ್ಲಿ ಅವರ ಆದ್ಯಾಶಕ್ತಿ ಪ್ರಕಟವಾಗುತ್ತಿರುವುದನ್ನು ಕಂಡು ರಾಮಕೃಷ್ಣರಲ್ಲಿಯ ಭಾವವನ್ನೇ ತಳೆದರು. ಅವರ ಬಳಿ ಮಾರ್ಗದರ್ಶನಕ್ಕಾಗಿ, ಸಾಂತ್ವನಕ್ಕಾಗಿ, ಅಧ್ಯಾತ್ಮಿಕ ವಿಚಾರಗಳಿಗಾಗಿ, ಮಂತ್ರದೀಕ್ಷೆಗಾಗಿ ಎಲ್ಲಕಡೆಯಿಂದ ಜನರು ಬರುತ್ತಿದ್ದರು. ಇದಕ್ಕೆಲ್ಲಾ ರಾಮಕೃಷ್ಣರಿರುವಾಗಲೇ ಅವರನ್ನು ಈ ನಿಟ್ಟಿನಲ್ಲಿ ಸಾಕಷ್ಟು ತಯಾರಿ ಮಾಡಿ ಹೋಗಿದ್ದರು. ರಾಮಕೃಷ್ಣರ ಸಂನ್ಯಾಸಿ ಶಿಷ್ಯರೆಲ್ಲ ಶ್ರೀಮಾತೆಯನ್ನು ಆಳವಾಗಿ ಅನುಸರಿಸುತ್ತಿದ್ದರು, ಗೌರವಿಸುತ್ತಿದ್ದರು ಮತ್ತು ಪಾಲಿಸುತ್ತಿದ್ದರು. ವಿಶ್ವವನ್ನೇ ಜಯಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದರೂ ಅವರ ಶ್ರೀರಕ್ಷೆಯಲ್ಲಿಯೇ ಪಶ್ಚಿಮಕ್ಕೆ ಧರ್ಮಪ್ರಸಾರ ಮಾಡಲು ಹೋಗಿದ್ದರು. ಶ್ರೀಮಾತೆಯವರ ಮಹಿಮೆ ಎಷ್ಟು ಅಪಾರವಾದದ್ದು ಎಂದರೆ ಸಾವಿರಾರು ಜನ ಅಕ್ಷರಶಃ ಅವರನ್ನು ನಿಜವಾಗಿಯೂ ಪೂಜಿಸುತ್ತಿದ್ದರು. ಆದರೂ ಅವರು ಸ್ವಲ್ಪವೂ ಅಹಂಕಾರ ಹೊಂದದೆ ನಿರ್ಮಮ, ನಿರಹಂಕಾರದಿAದ ಇದ್ದರು! ನಿಜಕ್ಕೂ ಇದು ಸಾಮಾನ್ಯ ಮನುಷ್ಯರಿಂದ ಸಾಧ್ಯವಾಗದು, ಇದೆಲ್ಲಾ ಅವರ ದಿವ್ಯತೆಯಿಂದ ಆದದ್ದು!
ಕಳೆದ ಶತಮಾನದ ಮಧ್ಯೆ ಭಾರತದ ಸ್ತ್ರೀತ್ವಕ್ಕೆ ಒಂದು ದುರ್ಭರ ಸಮಸ್ಯೆ ಎದುರಾಗಿತ್ತು. ಪಾಶ್ಚಾತ್ಯ ನಾಗರಿಕತೆಯ ಪ್ರಬಲ ಅಲೆಯೊಂದು ಹಬ್ಬಿ ಸಮಗ್ರ ಭಾರತವನ್ನೇ ಬುಡಮೇಲಾಗಿಸುವುದರಲ್ಲಿತ್ತು. ಅಂದು ಜನತೆಯಲ್ಲಿ, ಭಾರತದ ಭವ್ಯ ಸಂಪ್ರದಾಯಗಳನ್ನೇ ಬಲಿತೆತ್ತು ಪಾಶ್ಚಾತ್ಯರನ್ನು ಅನುಕರಿಸುವ ಹುಚ್ಚು ಬೆಳೆದಿತ್ತು. ಭಾರತೀಯ ಪರಂಪರೆ ಎತ್ತಿಹಿಡಿಯುವುದು ಉದಾತ್ತ ಅಂಶಗಳಾದ ಸ್ತ್ರೀಯ ಪಾವಿತ್ರ‍್ಯ, ಅವಳ ಮಾತೃತ್ವ. ಇದಕ್ಕೆ ಕಾರಣವೇನೆಂದರೆ, ಮುಕ್ತಿ, ಆತ್ಮಾನುಭವ - ಇವೇ ಭಾರತದ ಆದರ್ಶ. ಈ ಆದರ್ಶವನ್ನು ಸಾಧಿಸಲು ಆತ್ಮಸಂಯಮ, ಇಂದ್ರಿಯನಿಗ್ರಹ ಅನಿವಾರ್ಯ. ಭೋಗವಾದವನ್ನು ಅನುಸರಿಸಿದಲ್ಲಿ ಈ ಆದರ್ಶದ ಸಿದ್ಧಿ ಸಾಧ್ಯವಿಲ್ಲ. ಆದ್ದರಿಂದಲೇ ಭಾರತದಲ್ಲಿ ಸ್ತ್ರೀಯರ ಕುರಿತಾದ ದೃಷ್ಟಿಕೋನ ಸಂಪೂರ್ಣ ವಿಭಿನ್ನ. ಸ್ವಾಮಿ ವಿವೇಕಾನಂದರು ಹೇಳಿದಂತೆ, ಭಾರತದ ಆದರ್ಶ ಸ್ತ್ರೀಯರೆಂದರೆ ಸೀತಾ-ಸಾವಿತ್ರೀ-ದಮಯಂತಿಯರು. ಹೀಗೆ, ಪಾಶ್ಚಾತ್ಯ ಹಾಗೂ ಭಾರತೀಯ ದೃಷ್ಟಿಕೋನಗಳು ಪರಸ್ಪರ ವಿರುದ್ಧ, ಮುಂಬರುವ ಜನಾಂಗ ಇವುಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ; ಇಲ್ಲವೆ ಇವೆರಡರ ನಡುವೆ ವಿವೇಕಪೂರ್ಣವಾದ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಸತ್ಯಕಾಲದ ಈ ಜನಾಂಗಕ್ಕೆ ಸಾಕ್ಷ್ಯಚಿತ್ರದಂತೆ ತಿಳಿಪಡಿಸಲು ಅವತರಿಸಿ ಬಂದವಳೇ ಭವತಾರಿಣಿ ರೂಪಿ, ಆದ್ಯಾಶಕ್ತಿ ಸ್ವರೂಪಿ ಶಾರದಾದೇವಿ.