ಸಿಖ್ ಮತದ ಸಂಸ್ಥಾಪಕ ಗುರುನಾನಕ್ ಅವರು ಸಾಮಾಜಿಕ ಮತ್ತು ಆಧ್ಯಾತ್ಮಿಕತೆ ಹೆಚ್ಚು ಹೆಸರುವಾಸಿಯಾಗಿದ್ದರು. ಇವರು ಸಮಾನತೆ, ಭ್ರಾತೃತ್ವ, ನಮ್ರತೆ, ಸೇವೆ ಮತ್ತು ಸದ್ಗುಣಭರಿತ ಜೀವನದ ಸಂದೇಶವನ್ನು ಜಗದಗಲಕ್ಕೆ ಸಾರಿದವರು. ಗುರು ನಾನಕ್ ದೇವ್ ಅವರು ಸಿಖ್ ಮತದ ಮೊದಲ ಗುರು. ಈ ಕಾರಣಕ್ಕಾಗಿ ಇವರನ್ನು ಸ್ಮರಿಸುವ ಸಲುವಾಗಿ ಅವರ ಜಯಂತಿಯನ್ನು ಪ್ರಕಾಶ ಪರ್ವ ಅಥವಾ ಗುರು ಪುರಬ್ ಎಂದೂ ಆಚರಿಸಲಾಗುತ್ತದೆ.
ಪರಿಚಯ: ಗುರುನಾನಕ್ ಅವರು ಏಪ್ರಿಲ್ 15, 1469 ರಂದು ಪಂಜಾಬ್‌ನ ನನಕಾನಾ ಎಂಬಲ್ಲಿ ಜನಿಸಿದರು. ಇವರ ತಂದೆ ಮೆಹ್ತಾ ಕಲು ಮತ್ತು ತಾಯಿ ತ್ರಿಪ್ತಾ. ಗುರುನಾನಕ್ ಅವರು ಬಾಲ್ಯದಿಂದಲೇ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಅಪಾರವಾದ ಜ್ಞಾನವನ್ನು ಹೊಂದಿದ್ದರು. ತಮ್ಮ ೧೬ನೇ ವಯಸ್ಸಿನಲ್ಲಿ ಅವರು ಸಂಸ್ಕೃತ, ಪರ್ಷಿಯನ್, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪರಿಣಿತಿ ಹೊಂದಿದರು.
ಗುರುನಾನಕ್ 16 ವಯಸ್ಸಿಗೆ ತಲುಪುತ್ತಿದ್ದಂತೆ ಇವರ ಸಹೋದರಿ ಸುಲ್ತಾನ್ ಪುರದಲ್ಲಿ ಕೆಲಸಕ್ಕಾಗಿ ಕಳುಹಿಸುತ್ತಾರೆ. ದೆಹಲಿ ಸುಲ್ತಾನರ ಲೆಕ್ಕಾಚಾರವನ್ನು ಲಾಹೋರ್‌ನಲ್ಲಿ ಗಮನಿಸುವ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ. ಕಾಲಾಂತರದಲ್ಲಿ ಗುರುನಾನಕರ ಮೇಲೆ ವ್ಯವಹಾರದಲ್ಲಿ ಕಳ್ಳತನದ ಆರೋಪವನ್ನು ಹಾಕಲಾಗುತ್ತದೆ. ಇದರಿಂದ ತೀವ್ರವಾಗಿ ನೊಂದ ನಾನಕರು ಲೌಕಿಕ ಜೀವನವನ್ನು ತೊರೆಯಲು ನಿರ್ಧರಿಸಿ ಇದ್ದಕ್ಕಿದ್ದಂತೆ ಒಂದು ದಿನ ಸಂಜೆ ಊರ ಕೆರೆಯ ಬಳಿ ಕಾಣ್ಮರೆಯಾಗುತ್ತಾರೆ. ಗುರುನಾನಕರ ಅಲಭ್ಯತೆಯಿಂದ ಮನೆಯವರಿಗೆ ಗಾಬರಿಯಾಗುತ್ತದೆ. ಆದರೆ ಅಚ್ಚರಿ ಎಂಬಂತೆ ಗುರುನಾನಕರು ಮೂರು ದಿನಗಳ ನಂತರ ಅದೇ ಸ್ಥಳದಲ್ಲಿ ಪ್ರತ್ಯಕ್ಷರಾಗುತ್ತಾರೆ. ನೋಡಲು ಅತ್ಯಂತ ತೇಜೋಮಯರಾಗಿ ಪರಿವರ್ತನೆಗೊಂಡಿರುತ್ತಾರೆ. ತನಗಾದ ದಿವ್ಯದರ್ಶನದ ಸಾರವನ್ನು ನಾನಕರು ಸಮಾಜಕ್ಕೆ ತಿಳಿಸಲು ಮುಂದಾಗುತ್ತಾರೆ. ಕಲಿಯುವುದಕ್ಕೆ ಹಿಂದುಸ್ತಾನಿ ಭಾಷೆಯಲ್ಲಿ ಸೀಕ್ ಎನ್ನುತ್ತಾರೆ. ಇವರ ಬೋಧನೆಗಳನ್ನು ಅರಿಯಲು ಬಂದ ವಿದ್ಯಾರ್ಥಿಗಳು ಮುಂದೆ ಸಿಖ್ಖರಾಗುತ್ತಾರೆ.
ನಂತರದ ಕಾಲಘಟ್ಟದಲ್ಲಿ ಸಮಾಜದಲ್ಲಿರುವ ಕಳಂಕಗಳನ್ನು ವಿರೋಧಿಸಿ ಸಮಾನತೆಯ ಸಂದೇಶವನ್ನು ಸಾರುತ್ತಾರೆ. ದೇವರು ಒಬ್ಬನೇ ಅವನು ನಿರ್ಗುಣ, ನಿರಾಕಾರ. ಆತ ಪ್ರತಿ ವಸ್ತುವಿನಲ್ಲೂ ಇದ್ದಾನೆ ಎಂಬುದನ್ನು ಸಮಾಜಕ್ಕೆ ಬೋಧಿಸುತ್ತಾರೆ. ಇವರ ಬೋಧನೆಗಳಿಗೆ ಆಕರ್ಷಿತರಾಗಿ ಇವರಿಗೆ ಮೊದಲ ಶಿಷ್ಯನಾಗಿ ದೊರೆತದ್ದು ಬಡಗಿ ಲಾಲ. ಮುಂದೆ ಸಂಪೂರ್ಣ ರಾಷ್ಟ್ರದಲ್ಲಿ ಸಂಚರಿಸಿ ತಮ್ಮ ಚಿಂತನೆಯನ್ನು ಹರಡುತ್ತಾರೆ. ಭಾರತ ಮಾತ್ರವಲ್ಲದೆ ದೂರದ ಅರೇಬಿಯಾ, ಸಿರಿಯ, ಟಿಬೆಟ್ ದಕ್ಷಿಣ ಏಷ್ಯಾದ ಪ್ರವಾಸವನ್ನು ಕೈಗೊಳ್ಳುತ್ತಾರೆ. ಇವರ ಬೋಧನೆಗಳಿಗೆ ಆಕರ್ಷಿತರಾಗಿ ವಿಶ್ವದಾದ್ಯಂತ ಇವರ ಶಿಷ್ಯರ ಸಂಖ್ಯೆ ಏರುತ್ತಾ ಹೋಗುತ್ತದೆ. ನಂತರದ ಸಮಯದಲ್ಲಿ ಕರ್ತಾರ್ ಪುರದಲ್ಲಿ ರೈತನಾಗಿ ನೆಲೆಯೂರಿ ಜಾತಿ, ಧರ್ಮ, ಲಿಂಗವನ್ನು ಮೀರಿದ ಸಾಮೂಹಿಕ ಸಹಭೋಜನವನ್ನು ಪ್ರಾರಂಭಿಸುತ್ತಾರೆ. ಇವರ ಜೀವನದ ಪ್ರತಿ ಹಂತದಲ್ಲೂ ಸಾಮರಸ್ಯವನ್ನು ಸಾರಲು ಶ್ರಮವಹಿಸುತ್ತಾರೆ.
ಗುರುನಾನಕರು ಒಬ್ಬ ಶ್ರೇಷ್ಠ ಕವಿಯು ಹೌದು. ಇವರು ತಮ್ಮ ಬೋಧನೆಗಳನ್ನು 974 ಭಜನೆಗಳ ರೂಪದಲ್ಲಿ ಬರೆದಿಟ್ಟಿದ್ದರು. ಇದುವೇ ಮುಂದೆ ಸಿಕ್ಕರ ಪವಿತ್ರ ಗ್ರಂಥ ಗುರುಗ್ರಂಥ ಸಾಹೇಬ್ ಆಗುತ್ತದೆ. ಸಮಾಜದಲ್ಲಿ ಸಮಾನತೆಯ ಜ್ಯೋತಿಯನ್ನು ಬೆಳಗಿಸಲು ಶ್ರಮಿಸಿದ, ಕ್ಷಾತ್ರ ಪರಂಪರೆಗೆ ಹೆಸರುವಾಸಿಯಾಗಿರುವ ಸಿಖ್ ಪಂತವನ್ನು ಸ್ಥಾಪಿಸಿದ ಗುರುನಾನಕ್ 22 ಸೆಪ್ಟೆಂಬರ್ 1539 ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ದೈವಾಧೀನರಾಗುತ್ತಾರೆ.