ದತ್ತೋಪಂತ್ ಬಾಪೂ ರಾವ್ ಠೇಂಗಡಿ ಅವರು ಜೀವನವೀಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಕಾರ್ಯನಿರ್ವಹಿಸಿದರು. ಈ ರಾಷ್ಟ್ರಕಂಡಂತಹ ಪ್ರಮುಖ ಸಾಮಾಜಿಕ ಕಾರ್ಯಕರ್ತರು. ಇವರು ಸ್ವದೇಶೀ ಜಾಗರಣ್ ಮಂಚ್, ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ್ ಸಂಘಗಳ ಸಂಸ್ಥಾಪಕರು. ಇವರು ದೇಶದ ದುಡಿಯುವ ಸಮುದಾಯದ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ಹಗಲಿರಳು ಶ್ರಮಿಸಿದ್ದಾರೆ. ನವೆಂಬರ್ 10ರಂದು ಅವರ ಜಯಂತಿ.
ಪರಿಚಯ: ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರು ನವೆಂಬರ್ 10, 1920ರಂದು ಮಹಾರಾಷ್ಟ್ರದ ವಾರ್ಧಾದ ಅರವಿ ಎಂಬಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ವಾರ್ಧದಲ್ಲಿ ಮುಗಿಸಿದರು. ನಂತರ ಅವರು ನಾಗಪುರದ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಅಧ್ಯಯನ ಮಾಡಿದರು. ಮೋರಿಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಎಲ್‌ಎಲ್‌ಎಮ್ ಮುಗಿಸಿದರು. 15ನೇ ವಯಸ್ಸಿನಲ್ಲಿ ಅವರು ಅರವಿಯ ಮುನ್ಸಿಪಲ್ ಹೈಸ್ಕೂಲ್ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ಮತ್ತು 1936-38ರವರೆಗೆ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಸದಸ್ಯರಾಗಿದ್ದರು. ಭಾರತ ರಾಷ್ಟ್ರೀಯ ಟ್ರೇಡ್ ಯೂನಿಯನ್‌ಗೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಅವರು ನಂತರದ ಸಮಯದಲ್ಲಿ ಸಮಾಜಕಾರ್ಯಗಳಲ್ಲಿ ತೊಡಗಿಕೊಂಡರು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು.
ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರ ನೇತೃತ್ವದಲ್ಲಿ ಅನೇಕ ಸಂಘ ಸಂಸ್ಥೆಗಳನ್ನು ಸ್ಥಾಪನೆಗೊಂಡವು. 1955ರಲ್ಲಿ ಭಾರತೀಯ ಮಜ್ದೂರ್ ಸಂಘ, 1979ರಲ್ಲಿ ಭಾರತೀಯ ಕಿಸಾನ್ ಸಂಘ, 1991ರಲ್ಲಿ ಸ್ವದೇಶೀ ಜಾಗರಣ್ ಮಂಚ್, ಸಾಮಾಜಿಕ್ ಸಮರಸತಾ ಮಂಚ್, ಸರ್ವ ಪಂಥ್ ಸಮದಾರ್ ಮಂಚ್, ಪರ್ಯಾವರಣ್ ಮಂಚ್ ಸೇರಿದಂತೆ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು. ಅಷ್ಟೆ ಅಲ್ಲದೆ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಅಖಿಲ ಭಾರತೀಯ ಅಧಿವಕ್ತಾ ಪರಿಷತ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮತ್ತು ಭಾರತೀಯ ವಿಚಾರ ಕೇಂದ್ರ ಸಂಸ್ಥೆಗಳಿಗೆ ಸ್ಥಾಪಕ ಸದಸ್ಯರಾಗಿದ್ದರು.
1964ರಿಂದ 1976ರ ವರೆಗೆ ಎರಡು ಅವಧಿಗಳ ಕಾಲ ರಾಜ್ಯಸಭೆಯ ಸದಸ್ಯರಾಗಿದ್ದರು. ಹಾಗೆಯೇ 1968-1970ರವರೆಗೆ ಅದರ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 1975ರಲ್ಲಿ, ತುರ್ತು ಪರಿಸ್ಥಿತಿಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳನ್ನು ಏಕಾಭಿಪ್ರಾಯಕ್ಕೆ ತರುವುದರಲ್ಲಿ ವರ್ಣನಾತೀತವಾದ ನಾಯಕತ್ವ ಪ್ರತಿಭೆಯನ್ನು ತೋರಿದರು. ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರು ಭಾರತದಾದ್ಯಂತ ಪ್ರವಾಸ ಕೈಗೊಂಡಿದ್ದರು. 1979ರಲ್ಲಿ 2ನೇ ಅಂತಾರಾಷ್ಟ್ರೀಯ ವರ್ಣಭೇದ ವಿರೋಧ ಸಭೆಗಾಗಿ ಸ್ವಿಜರ್ಲ್ಯಾಂಡ್ನ ಜೆನೀವಾ ನಗರಕ್ಕೆ ಪ್ರವಾಸ ಮಾಡಿದರು. ಅಮೆರಿಕಾ, ಕೆನಡಾ, ಬ್ರಿಟನ್, ಯುಗೋಸ್ಲೇವಿಯಾ ದೇಶಗಳಿಗೂ ಭೇಟಿ ನೀಡಿದ್ದರು.
ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರು ಸಾಹಿತ್ಯದ ಕ್ಷೇತ್ರಕ್ಕೂ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ದ ಥರ್ಡ್ ವೇ, ಮೋರ್ಡ್ರನೈಜೆಷನ್ ವಿತೌಟ್ ವೆಸ್ಟೆರ್ನೈಜೆಷನ್, ಅವರ್ ನೇಷನಲ್ ರೆನೈಸೆನ್ಸ್, ಇಟ್ಸ್ ಡೈರಕ್ಷನ್ಸ್ ಅನ್ಡ್ ಡೆಸ್ಟಿನೇಷನ್ಸ್, ನೇಷನಲ್ ಪರ್ಸ್ಯೂಟ್, ದ ಗ್ರೇಟ್ ಸೆನ್ತಿನಲ್ ಅನ್ಡ್ ಪ್ರೆಸ್ಪೆಕ್ಟಿವ್ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಯಿತು. ಆದರೆ ಅವರು ಅದನ್ನು ತಿರಸ್ಕರಿಸಿದರು.
ದತ್ತೋಪಂತ್ ಬಾಪೂರಾವ್ ಠೇಂಗಡಿ ಅವರು ಅಕ್ಟೋಬರ್ 14, 2004ರಂದು ಮೆದುಳಿನ ರಕ್ತಸ್ರಾವದಿಂದ ನಿಧನರಾದರು.