"ಸಂಪತ್ತಿಗೆ ಸೊಕ್ಕಬೇಡಿ, ಸಿರಿ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನಧರ್ಮ ಮಾಡುವುದರ ಮೂಲಕ ತನ್ನ ಬಳಗದವರು ದಾನಗುಣವನ್ನು ಬೆಳೆಸಿಕೊಳ್ಳಬೇಕು" ಎಂದು ವಚನಗಳ ಮೂಲಕ ಮಾತ್ರವಲ್ಲದೆ, ಸ್ವತಃ ಮಾಡಿ ತೋರಿಸಿದ ವಚನಗಾರ್ತಿ, ಪ್ರೇರಣಾದಾಯಿ ವ್ಯಕ್ತಿತ್ವ ಹೇಮರೆಡ್ಡಿ ಮಲ್ಲಮ್ಮ.
೧೨ನೇ ಶತಮಾನದಲ್ಲಿ ನಡೆದ ವಚನ ಕ್ರಾಂತಿಯ ನಂತರ ಭಕ್ತಿ ಪರಂಪರೆ ಮುಂದುವರೆಸಿಕೊಂಡು ಹೋದ ಕೀರ್ತಿ ಅವರಿಗೆ ಸಲ್ಲುತ್ತದೆ. ವಚನಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಮಲ್ಲಮ್ಮ ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಪುರದವರು. ರಾಮರೆಡ್ಡಿ-ಗೌರಮ್ಮ ದಂಪತಿಗಳಿಗೆ ಜನಿಸಿದರು. ಶ್ರೀಶೈಲ ಚನ್ನಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದ ಇವರು ಚಿಕ್ಕಂದಿನಿಂದಲೂ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧನೆ ಮಾಡುತ್ತಿದ್ದರು.
ಹೇಮರೆಡ್ಡಿ ಮಲ್ಲಮ್ಮ ಅವರನ್ನು ಸಿದ್ದಾಪುರದ ಕುಮಾರಗಿರಿ ವೇಮರೆಡ್ಡಿಯ ಮಗ ಭರಮರೆಡ್ಡಿ ಎಂಬವರಿಗೆ ಮದುವೆ ಮಾಡಿಕೊಡುತ್ತಾರೆ. ಭರಮರೆಡ್ಡಿಯನ್ನು ಎಲ್ಲರೂ ಹುಚ್ಚ, ಬುದ್ಧಿಮಾಂದ್ಯ ಎಂದು ಹೇಳುತ್ತಿದ್ದರೂ, ಮಲ್ಲಮ್ಮ ಗಂಡನಲ್ಲಿದ್ದ ಮುಗ್ಧತೆಯನ್ನು ಆರಾಧಿಸುತ್ತಾರೆ. ತಮ್ಮ ಪತಿಯನ್ನು ಮಹಾದೇವನೆಂದು ಪರಿಗಣಿಸುತ್ತಿದ್ದರು. ತಮ್ಮ ಜೀವನದಲ್ಲಿ ಅದೆಷ್ಟೇ ಕಷ್ಟವಿದ್ದರೂ, ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೆ ಮಲ್ಲಮ್ಮ ಹಿಂದೆ ಮುಂದೆ ನೋಡುತ್ತಿರಲಿಲ್ಲ.
"ಶಿವ ಕರೆದ ಕಾಲಕ್ಕೆ ಮ್ಯಾಲಕ ಹೋಗಾಗ, ನಾಕು ಮಂದಿ ಕಳುಸಾಕ ಬರುವಂಗ ಇರಬೇಕು" ಎನ್ನುತ್ತಿದ್ದ ಹೇಮಾ ರೆಡ್ಡಿ ಮಲ್ಲಮ್ಮಳನ್ನು ಅವರ ಅತ್ತೆ ಆಕೆಗೆ ಉಣ್ಣುವುದಕ್ಕೆ, ಉಡುವುದಕ್ಕೆ ಸರಿಯಾಗಿ ಕೊಡದೆ, ಅವಳನ್ನು ಅಡವಿಗೆ ನೂಕಿ ಸಂಕಷ್ಟಗಳ ಸಂಕೋಲೆಗೆ ಸಿಗಿಸುವಳು. ಆದರೂ ಹೇಮರೆಡ್ಡಿ ಮಲ್ಲಮ್ಮ ನೊಂದುಕೊಳ್ಳದೆ ಮಲ್ಲಿಕಾರ್ಜುನನ ಪೂಜೆ ಮತ್ತು ಆರಾಧನೆ ಮಾಡುವುದರಲ್ಲಿ ಮಗ್ನಳಾಗಿರುತ್ತಿದ್ದರು. ಅದೊಂದು ಸಲ ಮಲ್ಲಮ್ಮನಿಗೆ ಬುದ್ಧಿ ಕಲಿಸಲು ಅವಳ ಅತ್ತೆ ಮನೆಯ ಮುಂದೆ ಭಿಕ್ಷುಕ ಬಂದಾಗ ಸಿಟ್ಟುಗೊಂಡು ಒಲೆಯಲ್ಲಿನ ಕೆಂಡವನ್ನು ಅವಳ ಕೈಗೆ ನೀಡಿ ಬಾಗಿಲಲ್ಲಿ ನಿಂತಿದ್ದ ಭಿಕ್ಷುಕನಿಗೆ ನೀಡಲು ಹೇಳಿದಾಗ, ಮಲ್ಲಮ್ಮ ಅತ್ತೆ ಕೊಟ್ಟ ಕೆಂಡವನ್ನು ಸ್ವೀಕರಿಸಿ ಮನದಲ್ಲಿ ಮಲ್ಲಿಕಾರ್ಜುನನನ್ನು ನೆನೆದು ಭಿಕ್ಷಾರ್ಥಿಯ ಜೋಳಿಗೆಗೆ ಅದನ್ನೇ ನೀಡುತ್ತಾರೆ. ಆಗ ಅದು ಧಾನ್ಯವಾಗಿ ಮಾರ್ಪಡುತ್ತದೆ. ಅಂದಿನಿAದ ಮಲ್ಲಮ್ಮನ ಹೆಸರು ಬೆಂಕಿದಾನದ ಮಲ್ಲಮ್ಮ ಎಂದಾಯಿತು ಎಂಬ ಕಥೆ ಇದೆ.
ಶಿವಶರಣರಲ್ಲಿ ಅಚಲವಾದ ದೈವಭಕ್ತಿ, ಕಾಯಕ ನಿಷ್ಠೆ, ದಾನ ಧರ್ಮದಿಂದ, ಆದರ್ಶ ಗೃಹಿಣಿಯಾಗುವ ಮೂಲಕ ಪ್ರಸಿದ್ಧಿ ಪಡೆದಿದ್ದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನ ಜೀವನಗಾಥೆಯನ್ನು ಚಲನಚಿತ್ರವಾಗಿ ಮಾಡಲಾಗಿದೆ. ಎಸ್.ಸೌಂದರ್ಯರಾಜನ್ ಮತ್ತು ಜತಿನ್ ಬ್ಯಾನರ್ಜಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಹುಚ್ಚನಾದ ಗಂಡನ ಸೇವೆಯನ್ನು ಮಾಡುತ್ತಾ ಅತ್ತೆ ನೀಡಿದ ಕಷ್ಟ-ಕಾರ್ಪಣ್ಯಗಳನ್ನು ಸಹಿಸುತ್ತಾ, ಶಿವನ ಆರಾಧನೆ ಮಾಡುತ್ತಾ ಜೀವನ ಸಾಗಿಸುತ್ತಿರುತ್ತಿದ್ದ ಮಲ್ಲಮ್ಮನ ಬದುಕು ಶಿವನ ಕರುಣೆಯಿಂದ ಬದಲಾಗುತ್ತದೆ. ಗಂಡ ಬುದ್ಧಿಮಾಂದ್ಯತೆ ಇಲ್ಲದಾಗುವುದಲ್ಲದೆ, ಅತ್ತೆಗೆ ಜ್ಞಾನೋದಯ ಆಗುತ್ತದೆ ಎಂಬ ರೀತಿಯಲ್ಲಿ ಚಿತ್ರವು ಪೂರ್ಣಗೊಳ್ಳುತ್ತದೆ.