ಹಿಂದೂ ದರ್ಶನದಲ್ಲಿ ಶಾಸ್ತçಕಾರರು ಶಿವನ ಅನುಗ್ರಹ ಪಡೆಯಲು ಅನೇಕ ಮಾರ್ಗಗಳನ್ನು ಅವಲಂಬಿಸಿದ್ದು, ಅವುಗಳಲ್ಲಿ ಭಕ್ತಿ ಮಾರ್ಗ ಶ್ರೇಷ್ಠ. ಪಂಡಿತ ಪಾಮರರೆಲ್ಲ ಈ ಮಾರ್ಗವನ್ನು ಸುಲಭವಾಗಿ ಅನುಸರಿಸಬಹುದು. ಈ ಭಕ್ತಿಯ ಶ್ರೇಷ್ಠತೆಯನ್ನು ನಾರದೀಯ ಸೂತ್ರ, ಭಗವದ್ಗೀತೆ, ಶಿವರಹಸ್ಯ ಮೊದಲಾದ ಗ್ರಂಥಗಳಲ್ಲಿ ಬಹಳ ಸ್ವಾರಸ್ಯಕರವಾಗಿ ವರ್ಣಿಸಿದ್ದು, ಶಿವಶರಣರೂ ತಮ್ಮ ವಚನಗಳಲ್ಲಿ ಪರಿಪರಿಯಾಗಿ ವಿವರಿಸಿದ್ದಾರೆ. ಹೀಗೆ ಭಕ್ತಿಯ ಮಾರ್ಗವನ್ನು ಪ್ರಚಾರಮಾಡಿದವರಲ್ಲಿ ಬಸವಣ್ಣನವರು ಪ್ರಮುಖರು. ಅವರ ಕಾರ್ಯಗಳಲ್ಲಿ ಭಕ್ತಿಯೇ ಪ್ರಧಾನ, ಆದ್ದರಿಂದಲೇ ಅವರು ಭಕ್ತಿ ಭಂಡಾರಿ ಎಂಬ ಬಿರುದನ್ನು ಪಡೆದರು.
ಸಕ್ಕರೆಯ ಕೊಡನ ತುಂಬಿ ಹೊರಗೆ ಸವಿದರೆ ರುಚಿಯುಂಟೆ? ತಕ್ಕೆöÊಸಿ ಭುಜತುಂಬಿ ಲಿಂಗಸ್ಪರ್ಶನವ ಮಾಡದೆ ಅಕ್ಕಟಾ! ಸಂಸಾರ ವೃಥಾ ಹೋಯಿತ್ತಲ್ಲಾ! ಅದೇತರ ಭಕ್ತಿ? ಅದೇತರ ಯುಕ್ತಿ? ಕೂಡಿಕೋ, ಕೂಡಲಸಂಗಮದೇವಾ. ಎನ್ನುವಲ್ಲಿಗೆ ಸಿಹಿಯ ಸವಿ ಸೇವಿಸದ ಹೊರತು ತಿಳಿಯದು, ಅಲೌಕಿಕವು ಅನುಭವಿಸದೇ ಅರಿವಿಗೆ ಬಾರದು. ಭಕ್ತಿ ಮಾಡಿ, ಭಗವಂತನಲ್ಲಿ ಒಂದಾಗುವAತೆ ಕರೆ ನೀಡಿದ್ದಾರೆ.
“ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ, ರುದ್ರಪದವಿಯನೊಲ್ಲೆ: ನಾನು ಮತ್ತಾವ ಪದವಿಯನೊಲ್ಲೆನಯ್ಯಾ! ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ” ಎಂದ ಬಸವಣ್ಣನವರ ಭಕ್ತಿಯ ಉತ್ಕಟತೆ ಎಷ್ಟಿತ್ತೆಂದರೆ, ಸ್ವತಃ ಮಂತ್ರಿಯಾಗಿದ್ದ ಬಸವಣ್ಣ ಎಲ್ಲವನ್ನೂ ತೊರೆದು, ಕೇವಲ ಭಗವಂತನಲ್ಲಿ ತಮ್ಮ ಮನವನ್ನು ಸ್ಥಿರವಾಗಿಸಿದವರ ಪಾದದ ಸಾಂಗತ್ಯ ಸಾಕೆಂದು ನುಡಿದರು. ಬರೀ ನುಡಿದದ್ದಲ್ಲ, ಹಾಗೆ ಬದುಕಿದ್ದಾರೆ ಕೂಡಾ. ಎಲ್ಲ ಸುಖಭೋಗಗಳನ್ನು ಅನುಭವಿಸಬಹುದಾದ ಸ್ಥಾನದಲ್ಲಿದ್ದರೂ ಯಾವುದಕ್ಕೂ ಅಂಟಿಕೊಳ್ಳದವರು. ಸಂಸಾರಿಯಾಗಿದ್ದರೂ ಸಂನ್ಯಾಸಿಯಂತೆ ಕೊಳೆ ಅಂಟಿಸಿಕೊಳ್ಳದೇ, ಭವದ ಭಾರ ನೂಕಿದವರು.
ಬಸವಣ್ಣನವರು ಯಾವ ಕಾರ್ಯವನ್ನು ಮಾಡಿದರೂ ಭಕ್ತಿಯಿಂದಲೇ ಮಾಡಿರುತ್ತಾರೆ. ಅವರ ವಚನಗಳನ್ನು ನೋಡಿದರೆ ಈ ಮಾತು ಸ್ಪಷ್ಟವಾಗಿ ತೋರುತ್ತದೆ. ಕೂಡಲಸಂಗನ ಭಕ್ತಿಯಿಲ್ಲದೆ ಅವರ ಯಾವ ವ್ಯವಹಾರವೂ ಇರುವದಿಲ್ಲ ಎಂದು ಬಸವಣ್ಣನವರ ಭಕ್ತಿಯ ಪ್ರಭಾವಾತಿಶಯವನ್ನು ಅವರ ಕಾಲದ ಶರಣರೂ, ವೀರಶೈವ ಕವಿಗಳೂ ಪರಿಪರಿಯಾಗಿ ಕೊಂಡಾಡಿದ್ದಾರೆ.
ಇಂಥ ಬಸವಣ್ಣನವರ ಭಕ್ತಿ ಪರಾಕಾಷ್ಠೆಯ ಬಗ್ಗೆ, ಅಗಣಿತ ವ್ಯಕ್ತಿತ್ವದ ಬಗ್ಗೆ ಅಕ್ಕ ನಾಗಲಾಂಬಿಕೆ, "ಆಚಾರವೆಂಬುದು ಆಗೋಚರ ನೋಡಯ್ಯಾ, ಆರಿಗೆಯೂ ಸಾಧ್ಯವಲ್ಲ. ಮರ್ತ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು ಬಸವಣ್ಣ ಬಂದು ಭಕ್ತಿಸ್ಥಲವ ಹರಹಿದ.”ಎಂದು ಬಸವಣ್ಣನೊಡನೆ ಭಕ್ತಿ ಬಂದಿತ್ತು, ಅವನಿಂದ ಜಗದೆಲ್ಲೆಡೆ ಪಸರಿಸಿತ್ತು, ಅವನು ಹೊರಟೊಡನೆ ಭಕ್ತಿಯೂ ಹೊರಟು ಹೋಗಿತ್ತು ಎಂದು ಜಗದ ಗುರುವಾದ ಬಸವಣ್ಣನವರ ಭಕ್ತಿಯ ಉತ್ಕಟತೆಯನ್ನೂ, ಭಕ್ತಿಯನ್ನು ಬಿತ್ತಿ ಬೆಳೆಯಲೆಂದೇ ಅವರು ಮರ್ತ್ಯಕ್ಕೆ ಬಂದಿದ್ದರೆAದೂ, ಭಕ್ತಿಯಲ್ಲದೇ ಇನ್ನೇನನ್ನೂ ಮಾಡಲಿಲ್ಲವೆಂದು, ಉಳಿದೆಲ್ಲವೂ ಭಕ್ತಿಯ ಪ್ರಸರಣಕ್ಕೆ ಮಾಡಿದ ಮಹತ್ಕಾರ್ಯಗಳೆಂದೂ, ಆತ್ಮಸಾಕ್ಷಾತ್ಕಾರದ ಮಾರ್ಗವೊಂದೇ ಸತ್ಯವೆಂದು ಅಕ್ಕ ನಾಗಲಾಂಬಿಕೆ ನಂಬಿದ್ದಾಳೆ.
ಸರಸಕವಿಸಾರ್ವಭೌಮನೂ, ವೀರಶೈವರ ಆದ್ಯಕವಿಯೂ ಆದ ಹರೀಶ್ವರನು ‘ಸದ್ಭಕ್ತಿ ಸೂರೆಗಾರಂ’, ‘ಭಕ್ತ ಕುಲತಿಲಕಂ’ ಎಂದು ತನ್ನ ಬಸವರಾಜದೇವರ ರಗಳೆಯಲ್ಲಿ ಹೇಳಿದ್ದಾನೆ. ಶರಣರು ಬಸವಣ್ಣನವರ ಮನೆಯಲ್ಲಿ ಲಿಂಗಾರ್ಚನೆಯನ್ನು ಮಾಡುವ ಕಾಲದಲ್ಲಿ ತಮತಮಗೆ ಬೇಕಾದ ಪದಾರ್ಥಗಳನ್ನು ಬೇಡಿದರೂ "ಇಲ್ಲೆನ್ನದಚಳ" ಭಕ್ತಿ ಸಾಮ್ರಾಜ್ಯ ಚಕ್ರವರ್ತಿಯಾದ ಬಸವಣ್ಣ ಎಂದು ಸಂಬೋಧಿಸಿದ್ದಾನೆ.
ಬಸವಣ್ಣನವರು ಆಚರಿಸುತ್ತಿದ್ದ ಭಕ್ತಿಯನ್ನು ಶಿಂಗಿರಾಜ ಪುರಾಣ ವಿಜಯದಲ್ಲಿ "ದಾಸೋಹಕ್ಕೆ ಕಲ್ಪವೃಕ್ಷ, ಶರಣರು ಕಾಮಿಸಿದ್ದನ್ನು ಕೊಡುವುದಕ್ಕೆ ಕಾಮಧೇನು, ಶರಣರು ಚಿಂತಿಸಿದ್ದನ್ನು ಕೊಡುವುದಕ್ಕೆ ಚಿಂತಾರತ್ನವು, ಜಗತ್ತಿನ ಅಶುದ್ಧವನ್ನು ಶುದ್ಧ ಮಾಡುವದಕ್ಕೆ ಸಿದ್ಧರಸ, ಪುರುಷಾಕಾರವನ್ನು ಹೊಂದಿದ ಪರುಷವು" ಎಂದು ಬಣ್ಣಿಸಿದ್ದಾನೆ ಶಿಂಗಿರಾಜ.
ಈ ಕಾಲಕ್ಕೆ ಬಸವಣ್ಣನವರನ್ನು ಕ್ರಾಂತಿಕಾರಿ ಎಂದು ಅನೇಕರು ಹೇಳುವುದುಂಟು. ಆದರೆ, ಬಸವಣ್ಣನೊಬ್ಬ ಭಕ್ತಿಭಂಡಾರಿ, ಜಗತ್ತಿಗೆ ಭಕ್ತಿಯ ಬೆಳಕನ್ನು ಬೀರಿದ ಮಹಾಯೋಗಿ, ವಿಶ್ವದೆಲ್ಲೆಡೆ ಶಿವತ್ವವನ್ನು ಪಸರಿಸಿದ ಪ್ರಚಾರಕ, ಭಗವಂತನಲ್ಲಿ ಶ್ರದ್ಧೆ ಜಾಗೃತಗೊಳಿಸಿದ ವಿಶ್ವಗುರು, ಜಗಕೆ ಕಾಯಕದ ಮಹತ್ವವನ್ನು, ಮುಕ್ತಿಯ ತತ್ವವನ್ನು, ಆಧ್ಯಾತ್ಮದ ಸತ್ವವನ್ನು ತೋರಿದ ಜಗಜ್ಯೋತಿ. ಬಸವಣ್ಣನ ಭಕ್ತಿ ನಮಗೆಲ್ಲ ಜೀವನ್ಮುಕ್ತಿಯ ಮಾರ್ಗವಾಗಲಿ.