ವಿದೇಶಿ ನೆಲದಲ್ಲಿ ನಿಂತು ಸ್ವದೇಶದ ಕ್ರಾಂತಿಕಾರಿಗಳಿಗೆ ಆಸರೆಯಾಗಿ ನಿಂತು ಸ್ವಾತಂತ್ರ‍್ಯ ಸಮರದಲ್ಲಿ ಕೊಡುಗೆ ಕೊಟ್ಟವರು ಪಂಡಿತ್ ಶ್ಯಾಮಜೀ ಕೃಷ್ಣ ವರ್ಮ. ಸೀ ಸಿಕ್ನೆಸ್ (seasickness) ಗೆ ಹೆದರದೆ, ಸಾಗರಗಳನ್ನು ದಾಟಿ; ತಮ್ಮ ವಸಾಹತುಗಳ ಹವೆಗೆ ಒಗ್ಗಿಸಿಕೊಂಡು; ಲಂಡನ್ನಿನ ಅಭಿವೃದ್ಧಿಗಾಗಿ ತಾಯಿ ಭಾರತಿಯ ಸಂಪತ್ತನ್ನು ಲೂಟಿಗೈಯುವವರನ್ನು ಸದೆಬಡೆಯುವ ಕ್ರಾಂತಿಕಾರಿಗಳಿಗೆ ಆಸರೆ ನೀಡಿದ ಶ್ಯಾಮಜೀ ಕೃಷ್ಣ ವರ್ಮ ಭಾರತದಲ್ಲಿ ಹಲವು ಸಂಸ್ಥಾನಗಳಿಗೆ ದಿವಾನರಾಗಿ ದುಡಿದಿದ್ದರು. ಕೆಲಕಾಲ ದಿವಾನರಾಗಿ ದುಡಿದ ಬಳಿಕ ಸಂಸಾರ ಸಮೇತ ಲಂಡನ್ನಿಗೆ ಬಂದು ನೆಲೆಸಿದ ಶ್ಯಾಮಜೀ ಅಲ್ಲಿ ಪ್ರತಿಷ್ಠಿತ ಇನ್ನರ್ ಟೆಂಪಲ್ ವಕೀಲರಾಗುತ್ತಾರೆ.
ವಿದೇಶಿ ನೆಲದಲ್ಲಿ ಬಂದು ನೆಲೆಸಿದರೂ, ಸ್ವದೇಶಿ ನೆಲದ ಸ್ಥಿತಿಗತಿಗಳನ್ನು ತಿಳಿಯುವಾಗ ಶ್ಯಾಮಜೀ ಅವರ ಮುಖದಲ್ಲಿ ನೋವಿನ ಗೆರೆಗಳು ಕಾಣಿಸಿಕೊಳ್ಳುತ್ತಿದ್ದವು. ಬ್ರಿಟಿಷರ ವಿರುದ್ಧ ಸೆಟೆದು ನಿಂತು ದೇಶಭ್ರಷ್ಟರೆಂದು ಕರೆಸಿಕೊಳ್ಳುತ್ತಿದ್ದ ದೇಶಭಕ್ತರನ್ನು ಒಗ್ಗೂಡಿಸಲು ಅವರು ಪ್ರಾರಂಭಿಸಿದುದು ಭಾರತ ಭವನ (India House) ವನ್ನು. ಅಲ್ಲಿ ರಾಷ್ಟ್ರೀಯತೆ ಸಂಬಂಧಿಸಿದ ಪುಸ್ತಕಗಳಿರುವ ಗ್ರಂಥಾಲಯ ಮತ್ತು ಯುವಕರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ವ್ಯಾಯಾಮ ಶಾಲೆಯ ವ್ಯವಸ್ಥೆಯೂ ಆಗುತ್ತದೆ. ದೇಶಕ್ಕಾಗಿ ಬದುಕು ಮೀಸಲಿಟ್ಟ ರಾಷ್ಟ್ರೀಯವಾದಿ ಯುವಕರಿಗಾಗಿ ಶಿವಾಜಿಯ ಹೆಸರಿನಲ್ಲಿ ಶಿಷ್ಯವೇತನವನ್ನೂ ಪ್ರಾರಂಭಿಸಿದ ಶ್ಯಾಮಜೀ ವೀರ ಸಾವರ್ಕರ್, ಮೇಡಂ ಕಾಮಾ, ಲಾಲಾ ಹರ್ ದಯಾಳ್ ಅಂತಹ ಕ್ರಾಂತಿಕಾರಿಗಳ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ.
೧೯೦೯ರಲ್ಲಿ ಮದನ್ ಲಾಲ್ ಧಿಂಗ್ರಾ ಕರ್ಜನ್ ವಾಯಿಲಿ ಎಂಬ ಬ್ರಿಟಿಷ್ ರಕ್ಕಸನ ಸಂಹಾರ ಮಾಡಿದ ಮೇಲೆ ಭಾರತಭವನ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುತ್ತದೆ. ಕ್ರಾಂತಿಯ ಜ್ವಾಲೆಗೆ ತುಪ್ಪ ಸುರಿಯುವ ಇಂಡಿಯನ್ ಸೋಷಿಯಾಲಜಿಸ್ಟ್ ಪತ್ರಿಕೆ ಮೇಲೆ ಬ್ರಿಟಿಷರು ನಿಷೇಧ ಹೇರುತ್ತಾರೆ, ಜೊತೆಗೆ ಭಾರತಭವನದ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಾರೆ. ಭಾರತ ಭವನದಲ್ಲಿದ್ದ ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಗಿದೆ ಎಂದರಿತ ಶ್ಯಾಮಜೀ ಕೃಷ್ಣ ವರ್ಮ, ಭಾರತಭವನವನ್ನು ಮಾರಿ ಬಿಡುತ್ತಾರೆ. ಭಾರತ ಭವನದಿಂದ ಹೊರ ಬಂದ ದೇಶಭಕ್ತರ ಅಂತಃಶಕ್ತಿಯೇ ಬಲಗೊಂಡಿರುವಾಗ, ಆ ಕಟ್ಟಡ ಇಲ್ಲದಾದರೂ ಕ್ರಾಂತಿಕಾರಿ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗದು ಎಂಬ ವಾಸ್ತವದ ಅರಿವಾದಾಗ ಶ್ಯಾಮಜೀ ಪೋಲೀಸರಿಂದ ಬಂಧಿಸಲ್ಪಡುವ ಮೊದಲೇ ಪ್ಯಾರಿಸ್‌ಗೆ ಪರಾರಿಯಾಗಿ, ಅಲ್ಲಿಂದ ಸ್ವಿಟ್ಜರ್ಲ್ಯಾಂಡನ್ನು ಸೇರುತ್ತಾರೆ.
ಜೀವನದ ಕೊನೆಯ ದಿನಗಳಲ್ಲಿ ಕೊನೆಯ ಆಸೆ ಏನೆಂದು ಅವರು ಸೈಂಟ್ ಜಾರ್ಜ್ ಸ್ಮಶಾನದ ಅಧಿಕಾರಿಗಳ ಬಳಿ ತೋಡಿಕೊಳ್ಳುತ್ತಾರೆ. ತಾವು ಸತ್ತ ಕೂಡಲೇ ತಮ್ಮ ಚಿತಾಭಸ್ಮವನ್ನು ಭಾರತಕ್ಕೆ ಕಳುಹಿಸಕೂಡದು, ಬದಲಾಗಿ ಸ್ವಾತಂತ್ರ‍್ಯ ಸಿಕ್ಕಾಗ ಚಿತಾಭಸ್ಮವನ್ನು ಸ್ವದೇಶಕ್ಕೆ ಕಳುಹಿಸಿಕೊಡಬೇಕೆಂಬುದು ಅವರ ಇಚ್ಛೆಯಾಗಿತ್ತು. ಬದುಕಿನ ಅವಧಿಯಲ್ಲಿ ಸ್ವದೇಶ ಸ್ವತಂತ್ರವಾಗದಿದ್ದರೂ, ದೇಶದ ಸ್ವಾತಂತ್ರ‍್ಯ ಮತ್ತು ಪರಮಾಧಿಕಾರಕ್ಕೆ ತಮ್ಮ ಚಿತಾಭಸ್ಮ ಸಾಕ್ಷಿಯಾಗಬೇಕೆಂಬ ಅವರ ಆಸೆ ಈಡೇರಿದ್ದು ೨೦೦೩ರಲ್ಲಿ ಅಂದರೆ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕು ೫೬ ವರ್ಷಗಳಾದ ಬಳಿಕ. ಆ ಪುಣ್ಯ ಕಾರ್ಯವನ್ನು ಮಾಡಿದ ವ್ಯಕ್ತಿ ಇನ್ನಾರೂ ಅಲ್ಲ, ನಮ್ಮ ದೇಶದ ಇಂದಿನ ಪ್ರಧಾನಿ!
ಶ್ಯಾಮಜೀ ಕೃಷ್ಣ ವರ್ಮ ಅವರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಿ ೨೦೧೦ರಲ್ಲಿ ಅವರ ಜನ್ಮಸ್ಥಳದಲ್ಲಿ ಕ್ರಾಂತಿತೀರ್ಥ ವರ್ಮ ಸ್ಮಾರಕವನ್ನು ಸ್ಥಾಪಿಸಲಾಯಿತು. ೧೯೦೯ರಲ್ಲಿ ಬ್ರಿಟಿಷರು ರದ್ದು ಮಾಡಿದ್ದ ಶ್ಯಾಮಜೀ ಅವರ ವಕೀಲಿಕೆ ಪರವಾನಗಿಯನ್ನು ೨೦೧೫ರಲ್ಲಿ ಪುನಃ ಸ್ಥಾಪಿಸಲಾಯಿತು.
ದೇಶದ ಹಿತಕ್ಕಾಗಿ ಶ್ರಮಿಸಿದ ಶ್ಯಾಮಜೀ ಕೃಷ್ಣ ವರ್ಮ ಅವರು ಇಹ ತ್ಯಜಿಸಿ, ಇಂದಿಗೆ ೯೪ ವರ್ಷಗಳೇ ಕಳೆದು ಹೋದವು. ಆಗೊಮ್ಮೆ, ಈಗೊಮ್ಮೆ ಸ್ವಾತಂತ್ರ‍್ಯ ವೀರ ಸಾವರ್ಕರರಂತಹ ಕ್ರಾಂತಿಕಾರಿ ಪುಟಗಳನ್ನು ತಿರುವಿ ಹಾಕಿದಾಗ ಶ್ಯಾಮಜೀ ಎಂಬ ರಾಷ್ಟçವಾದಿ ನೆನಪಾಗುತ್ತಾರೆ.