ನಮ್ಮನ್ನು ಅನುಸರಿಸಿ: Facebook Twitter Instagram YouTube

ಲಾಲಾ ಲಜಪತ್ ರಾಯ್ (೨೮ ಜನವರಿ ೧೮೬೫ – ೨೭ ನವೆಂಬರ್, ೧೯೨೮)

ಅಪ್‌ಲೋಡ್ ಮಾಡಿದ ದಿನಾಂಕ: 12-06-2026 06:36

ಲಾಲಾ ಲಜಪತ್ ರಾಯ್ (೨೮ ಜನವರಿ ೧೮೬೫ – ೨೭ ನವೆಂಬರ್, ೧೯೨೮)
ಭಾರತದ ಸ್ವಾತಂತ್ಯ ಸಂಗ್ರಾಮ ಹಲವಾರು ಧೀರರನ್ನು ಪರಿಚಯಿಸಿದೆ. ಕೆಚ್ಚೆದೆಯ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ‍್ಯ ಲಭಿಸಿದೆ. ಅಂತಹ ಹೋರಾಟಗಾರರಲ್ಲಿ ಲಾಲಾಲಜಪತ್ ರಾಯ್ ಕೂಡಾ ಒಬ್ಬರು. 
ಲಾಲಾಲಜಪತ್ ರಾಯ್ ಅವರು ೨೮ ಜನವರಿ ೧೮೬೫ರಂದು ಭಾರತದ ಪಂಜಾಬ್‌ನ ಲುಧಿಯಾನ ಧುಡಿಕೆಯಲ್ಲಿ ಜನಿಸಿದರು. ಕ್ರಾಂತಿಕಾರಿ, ರಾಜಕಾರಣಿ, ಬರಹಗಾರ, ಹಿಂದೂ ಪ್ರಾಬಲ್ಯ ಚಳುವಳಿಯ ನಾಯಕ ಮತ್ತು ಪ್ರಖರ ವಾಗ್ಮಿಯಾಗಿ ಮೆರೆದರು. ‘ಪಂಜಾಬ್ ಕೇಸರಿ' ಎಂದೇ ಕರೆಯಲ್ಪಡುವ ಸ್ಪೂರ್ತಿದಾಯಕ ನಾಯಕ ಲಾಲಾ ಲಜಪತ ರಾಯ್. ಭಾರತದ ಸ್ವಾತಂತ್ರ‍್ಯ ಚಳುವಳಿಯಲ್ಲಿ ಹೋರಾಡಿದ ಸ್ವಾತಂತ್ರö್ಯ ಹೋರಾಟಗಾರರಲ್ಲಿ ರಾಯ್ ಕೂಡ ಒಬ್ಬರು. ರಾಯ್ ಅವರು ತಮ್ಮ ಬಲವಾದ ನಿರ್ಣಯ, ಸ್ಪಷ್ಟ ನಿಲುವು ಮತ್ತು ಧೈರ್ಯದ ಮೂಲಕ ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿದರು. ಲಾಲಾ ಲಜಪತ್ ರಾಯ್ ಅವರ ಕ್ರಾಂತಿಕಾರಿ ನಡೆ ಅವರನ್ನು 'ಪಂಜಾಬ್‌ನ ಸಿಂಹ' ಎಂಬ ಅಭಿದಾನ ಸಿಗುವಂತೆ ಮಾಡಿತು.
ಲಜಪತ್ ರಾಯ್ ಅವರು ಸ್ವಾತಂತ್ರö್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ದೇಶಕ್ಕಾಗಿ ಸವೆದ ಜೀವ ಅವರದು. ಭಾರತ ಸ್ವಾತಂತ್ರ‍್ಯವನ್ನು ಪಡೆಯುವಲ್ಲಿ ರಾಯ್ ಅವರ ಕೊಡುಗೆ ಅಗಾಧವಾದುದು. ಅವರು ಸ್ವದೇಶಿ ಚಳುವಳಿಗಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ ಮಹಾನ್ ನಾಯಕರಾಗಿದ್ದರು. ೧೯೧೭ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಇಂಡಿಯನ್ ಹೋಮ್ ರೂಲ್ ಲೀಗ್ ಆಫ್ ಅಮೇರಿಕಾವನ್ನು ಸ್ಥಾಪಿಸಿದರು. ೧೯೨೦ರವರೆಗೆ ಅಮೇರಿಕಾದಲ್ಲಿದ್ದು, ನಂತರ ಭಾರತಕ್ಕೆ ಮರಳಿದರು. ಅದೇ ವರ್ಷ ಕಲ್ಕತ್ತಾದಲ್ಲಿ ಕಾಂಗ್ರೆಸ್‌ನ ವಿಶೇಷ ಅಧಿವೇಶನದ ಅಧ್ಯಕ್ಷರಾದರು. ಮಹಾತ್ಮ ಗಾಂಧಿಯವರು ೧೯೨೦ರಲ್ಲಿ ಪ್ರಾರಂಭಿಸಿದ ಅಸಹಕಾರ ಚಳುವಳಿಯನ್ನು ಲಾಲಾ ಲಜಪತ್ ರಾಯ್ ಪಂಜಾಬನಲ್ಲಿ ಮುಂದುವರೆಸಿದರು.
೧೯೨೮ರಲ್ಲಿ ಸೈಮನ್ ಕಮಿಷನ್' ವಿರುದ್ಧ ಭಾರತೀಯ ವೀರರು ಪ್ರತಿಭಟಿಸುತ್ತಿರುವಾಗ ಬ್ರಿಟಿಷರು ರಾಯ್ ಅವರ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ ಪರಿಣಾಮ ಗಾಯಕ್ಕೊಳಗಾಗಿದ್ದರು. ನೋವಿನಲ್ಲಿ ರಾಯ್ ಅವರು ‘ಇಂದು ನನಗೆ ಹೊಡೆದ ಹೊಡೆತಗಳು ಭಾರತದಲ್ಲಿ ಬ್ರಿಟಿಷರ ಶವಪೆಟ್ಟಿಗೆಗೆ ಕೊನೆಯ ಮೊಳೆಗಳಾಗಿರುತ್ತವೆ ಎಂದು ನಾನು ಘೋಷಿಸುತ್ತೇನೆ' ಎಂದು ನುಡಿದಿದ್ದರು. ಮಾಹಾನ್ ಪುರುಷ ಲಾಲಾ ಲಜಪತ ರಾಯ್ ಅವರು ೨೭ ನವೆಂಬರ್, ೧೯೨೮ ರಂದು ಕೊನೆಯುಸಿರೆಳೆದರು. ರಾಯ್ ಅವರ ಪುಣ್ಯತಿಥಿಯಂದು ಒಡಿಶಾದ ಜನರು ಹುತಾತ್ಮರ ದಿನ ಎಂದು ಆಚರಣೆ ಮಾಡುತ್ತಾರೆ. 
ರಾಯ್ ಒಬ್ಬ ಹೋರಾಟಗಾರರಲ್ಲದೇ ಶ್ರೇಷ್ಠ ಬರಹಗಾರರಾಗಿದ್ದರು. ಇವರು 'ದಿ ಸ್ಟೋರಿ ಆಫ್ ಮೈ ಡಿಪೋರ್ಟೇಶನ್, ಆರ್ಯ ಸಮಾಜ, ಯುನೈಟೆಡ್ ಸ್ಟೇಟ್ಸ್ ಅಮೆರಿಕಾ ಎ ಹಿಂದೂಸ್ ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇದಲ್ಲದೆ ಮಜ್ಜಿನಿ, ಗ್ಯಾರಿಬಾಲ್ಡಿ, ಶಿವಾಜಿ ಮತ್ತು ಕೃಷ್ಣ ಅವರ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅಪ್ರತಿಮ ಹೋರಾಟ, ಪ್ರಖರ ಬರಹ ಹಾಗೂ ಸಜ್ಜನ ವ್ಯಕ್ತಿತ್ವದ ಪರಿಣಾಮವಾಗಿ ಲಾಲಲಜಪತ್ ರಾಯ್ ಅವರು ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ.

⬅ ಮುಖಪುಟ