ನಮ್ಮನ್ನು ಅನುಸರಿಸಿ: Facebook Twitter Instagram YouTube

ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ) (ಮೇ ೯ , ೧೯೦೮ - ಜುಲೈ ೮, ೧೯೭೧).

ಅಪ್‌ಲೋಡ್ ಮಾಡಿದ ದಿನಾಂಕ: 12-06-2026 05:40

ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ) (ಮೇ ೯ , ೧೯೦೮ - ಜುಲೈ ೮, ೧೯೭೧).
ಅರಕಲಗೋಡು ನರಸಿಂಗರಾಯ ಕೃಷ್ಣರಾಯರು ಅನಕೃ ಎಂದೇ ಖ್ಯಾತರಾಗಿದ್ದ ಕನ್ನಡದ ಸಾಹಿತಿ. "ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ" ಎಂದು ನುಡಿಯುತ್ತಾ ಕನ್ನಡ ನಾಡು ನುಡಿಗಾಗಿ ಅಪಾರ ಸೇವೆಯನ್ನು ಸಲ್ಲಿಸಿದವರು. 
ಅ.ನ.ಕೃ ಅವರು ಬಹುಮುಖ ವ್ಯಕ್ತಿತ್ವದ ಪ್ರತಿಭೆ. ಕಾದಂಬರಿ, ಸಣ್ಣಕಥೆ, ನಾಟಕ, ಹೀಗೆ ಹಲವಾರು ಸಾಹಿತ್ಯದ ಪ್ರಕಾರಗಳಲ್ಲೂ ಕೃಷಿ ಮಾಡಿದ ಯಶೋವಂತರು. ಕನ್ನಡದ ಉಳಿವು ಪ್ರಗತಿಗಾಗಿ ‘ಸಂಯುಕ್ತರAಗ’ವೆAಬ ಸೇನೆಯನ್ನೇ ಕಟ್ಟಿ ಆ ಸೇನೆಯ ಸೇನಾಧಿಪತಿಯಾಗಿ ಹಲವಾರು ವರುಷ ಬೀದಿಗಿಳಿದು ಹೋರಾಡಿದವರು.  ಮಹಾನ್ ವಾಗ್ಮಿಯಾದ ಅವರು ಕನ್ನಡಿಗರಲ್ಲಿ ಕನ್ನಡತನವನ್ನು ಉಕ್ಕಿಸಿದರು. ಇವರು ಕನ್ನಡನುಡಿ, ಕಥಾಂಜಲಿ, ವಿಶ್ವವಾಣಿ ಪತ್ರಿಕೆಗಳ ಹುಟ್ಟು ಹಾಗೂ ಪ್ರಚಾರಕ್ಕೆ ಅಹರ್ನಿಶಿ ದುಡಿದವರು.
ಅ.ನ.ಕೃ. ಅವರು ಹಾಸನ ಜೆಲ್ಲೆಯ ಅರಕಲುಗೂಡಿನಲ್ಲಿ ೧೯೦೮ರ ಮೇ ೯ರಂದು ನರಸಿಂಗರಾಯರು ಮತ್ತು ಅನ್ನಪೂರ್ಣಮ್ಮ ದಂಪತಿಗಳ ಮಗನಾಗಿ ಜನಿಸಿದರು.  ಅವರ ಬಾಲ್ಯ ಜೀವನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದು ಬೆಂಗಳೂರಿನ ದೇಶೀಯ ವಿದ್ಯಾಶಾಲೆ.  ಕೆ. ಸಂಪದ್ಗಿರಿರಾಯರು, ಕಂದಾಡೆ ಕೃಷ್ಣಯ್ಯಂಗಾರ್ ಅವರ ಪಾಠ ಪ್ರವಚನಗಳಿಂದ ಗಟ್ಟಿಗೊಂಡು, ತಾರುಣ್ಯದಲ್ಲೇ ಗಾಂಧೀಜಿ, ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ಪಂಡಿತ ತಾರಾನಾಥ, ಕೈಲಾಸಂ ಪ್ರಭಾವಕ್ಕೆ ಒಳಗಾಗಿ ತಮ್ಮ ಮುಂದಿನ ಬದುಕನ್ನು ರೂಪಿಸಿಕೊಂಡರು.
ಅ. ನ. ಕೃ ಅವರು ಮೊದಲು ಕನ್ನಡದಲ್ಲಿ ‘ಪ್ರಣಯ ಗೀತೆಗಳು’ (೧೯೩೦) ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದರು. ೧೯೩೨ರಲ್ಲಿ ‘ಭಾರತೀಯ ಚಿತ್ರಕಲೆಯಲಿ ರಾಜಾರವಿವರ್ಮನ ಸ್ಥಾನ’ ಕನ್ನಡದಲ್ಲಿ ಚಿತ್ರಕಲಾ ವಿಮರ್ಶೆ ಒಳಗೊಂಡ ಮೊದಲ ಪುಸ್ತಕವನ್ನು ಬರೆದರು.  ತದನಂತರ ಅವರು ಕರ್ನಾಟಕ, ಹಿಂದೂಸ್ಥಾನಿ ಸಂಗೀತ ಸಂಪ್ರದಾಯಗಳ ಬಗ್ಗೆ ತೋರಿದ ಪ್ರೀತಿ, ಅದಕ್ಕಾಗಿ ಅವರು ಮಾಡಿದ ಪರಿಚಾರಿಕೆ ಅನೇಕ ಕಲಾವಿದರ ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಟ್ಟಿತು. ಅವರು ಕನ್ನಡ ಸಂಗೀತಗಾರರ ಸಹಕಾರವೇ ಇಲ್ಲದೆ, ಯಾವ ಸಾಂಸ್ಥಿಕ, ಸರ್ಕಾರಿ ಬೆಂಬಲವೂ ಇಲ್ಲದೆ ಅನಕೃ ಅವರು ಸಂಗೀತದಲ್ಲಿ ಕನ್ನಡಕ್ಕೆ ಪ್ರಾಶಸ್ತö್ಯ ಬೇಕೇಬೇಕು ಎಂದು ಅರವತ್ತರ ದಶಕದಲ್ಲಿ ಹೋರಾಟ ಆರಂಭಿಸಿದರು. ಇದು ಅವರ ಪ್ರಕಾರ ‘ಕನ್ನಡ ಅಸ್ಮಿತೆ’ಯ ಪ್ರಶ್ನೆ. ಅನಕೃ ಅಂದಿನ ಕನ್ನಡ ಸಂಘಟನೆಗಳು ಸೇರಿಕೊಂಡಿದ್ದ ‘ಕರ್ನಾಟಕ ಸಂಯುಕ್ತ ರಂಗ’ದ ಅಧ್ಯಕ್ಷರಾಗಿ ಅವರು ಇಡೀ ಸಂಗೀತ ಲೋಕ ಬೆಚ್ಚಿಬೀಳುವಂಥ ಪ್ರತಿಭಟನೆಯನ್ನು ರೂಪಿಸಿದರು.ಇಂದು ಕರ್ನಾಟಕ ಸಂಗೀತದ ಕಾರ್ಯಕ್ರಮಗಳಲ್ಲಿ ಏನಾದರೂ ಒಂದಿಷ್ಟಾದರೂ ಕನ್ನಡದ ಕೃತಿಗಳಿಗೆ ಪ್ರಾಮುಖ್ಯ ಸಿಕ್ಕಿದ್ದರೆ, ಹಲವಾರು ವಿದ್ವಾಂಸರು ಕನ್ನಡದಲ್ಲಿ ಕೃತಿಗಳನ್ನು ಸ್ವತಃ ರಚಿಸಿ ಹಾಡುತ್ತಿದ್ದರೆ, ಕನ್ನಡ ಸುಗಮ ಸಂಗೀತ ವಿಸ್ತಾರವಾಗಿ ಬೆಳೆದಿದ್ದರೆ, ಅದರ ಹಿಂದೆ ಅನಕೃ ಅವರ ಹೋರಾಟವಿದೆ.
೧೯೪೩ರ ನವೆಂಬರ್‌ನಲ್ಲಿ ಕರ್ನಾಟಕ ಪ್ರಗತಿಶೀಲರ ಸಂಘ ಅ.ನ.ಕೃ ಅವರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡಿತು.  ೧೯೪೪ರಲ್ಲಿ ಈ ಸಂಘ ‘ಪ್ರಗತಿಶೀಲ ಸಾಹಿತ್ಯ’, ‘ಮ್ಯಾಕ್ಸಿಂ ಗಾರ್ಕಿ ಸಂಸ್ಕರಣ ಗ್ರಂಥ’, ‘ರಸ ಋಷಿ’ ಗ್ರಂಥಗಳನ್ನು ಪ್ರಕಟಿಸಿತು.  ಈ ಚಳವಳಿ ಅ.ನ.ಕೃ ಅವರನ್ನು ಮತ್ತಷ್ಟು ಜನಪ್ರಿಯಗೊಳಿಸಿತು.  ಅಕ್ಕಯ್ಯ, ಅಣ್ಣ-ತಂಗಿ, ಅದೃಷ್ಟನಕ್ಷತ್ರ, ಅನ್ನದಾತ, ಅನುಗ್ರಹ, ಅಪರಂಜಿ, ಅಭಿಮಾನ, ಅಮೃತಮಂಥನ, ಅರುಳುಮರುಳು, ಆಶೀರ್ವಾದ, ಈ ದಾರಿ ಆ ದಾರಿ, ಈಚಲುಮರದವ್ವ, ಏಣಾಕ್ಷಿ, ಕಂಕಣಬಲ, ಕಟ್ಟಿದ ಬಣ್ಣ, ಕಣ್ಣಿನಗೊಂಬೆ, ಕಣ್ಣೀರು, ಕಬ್ಬಿಣದ ಕಾಗೆ, ಕಲಾವಿದ ಮೊದಲಾದ ಕೃತಿಗಳನ್ನು ಅ.ನ.ಕೃ ಅವರು ರಚಿಸಿದ್ದಾರೆ.  ಅವರು ಸುಮಾರು ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿ ಕಾದಂಬರಿ ಸಾರ್ವಭೌಮ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಅ.ನ.ಕೃ ಅವರ ಅಭಿಮಾನಿ ಬಳಗ ಅವರ ಶ್ರೇಷ್ಠ ಕಾದಂಬರಿಯಾದ ‘ಸಂಧ್ಯಾರಾಗ’ ಕೃತಿಯನ್ನು ಕುರಿತು ರಸ ವಿಮರ್ಶೆಯ ‘ಸಂಧ್ಯಾರಾಗ ಪ್ರಶಸ್ತಿ’ಯನ್ನು ಅರ್ಪಿಸಿತು.  ಅ.ನ.ಕೃ ಅವರು ಮಣಿಪಾಲದಲ್ಲಿ ನಡೆದ ೪೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.  ೧೯೬೯ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿಯನ್ನು ನೀಡಿತು.  ೧೯೭೦ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿತು.  ಅದೇ ವರ್ಷ ಅ.ನ.ಕೃ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡರು. ಇಂತಹ ಮಹಾನ್ ಸಾಹಿತಿ ತಮ್ಮ ೬೩ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದರಾದರು, ಕೃತಿಗಳು ಹಾಗೂ ಹೋರಾಟದ ಫಲಶ್ರುತಿ ಇಂದಿಗೂ ಜೀವಂತವಾಗಿದೆ.

⬅ ಮುಖಪುಟ