ನಮ್ಮನ್ನು ಅನುಸರಿಸಿ: Facebook Twitter Instagram YouTube

ಮೇಜರ್ ಹೋಶಿಯಾರ್ ಸಿಂಗ್ ದಹಿಯಾ (೫ ಮೇ ೧೯೩೬ - ೬ ಡಿಸೆಂಬರ್ ೧೯೯೮)

ಅಪ್‌ಲೋಡ್ ಮಾಡಿದ ದಿನಾಂಕ: 10-06-2026 12:03

ಮೇಜರ್ ಹೋಶಿಯಾರ್ ಸಿಂಗ್ ದಹಿಯಾ (೫ ಮೇ ೧೯೩೬ - ೬ ಡಿಸೆಂಬರ್ ೧೯೯೮)
ಆಗಿನ ಅವಿಭಜಿತ ಪಂಜಾಬ್‌ನ (ಈಗ ಸೋನೆಪತ್ ಜಿಲ್ಲೆ) ರೋಹ್ಟಕ್ ಜಿಲ್ಲೆಯ ಸಿಸಾನಾ ಗ್ರಾಮದಲ್ಲಿ ೫ ಮೇ ೧೯೩೬ ರಂದು ಜನಿಸಿದ ಹೋಶಿಯಾರ್ ಸಿಂಗ್ ದಹಿಯಾ ಅವರು ಸಿಪಾಯಿಯಾಗಿ ಜಾಟ್ ರೆಜಿಮೆಂಟ್‌ಗೆ ಸೇರಿದರು ಮತ್ತು ನಂತರ ಜೂನ್ ೧೯೬೩ರಲ್ಲಿ ೩ ಗ್ರೆನೇಡಿಯರ್‌ಗಳಲ್ಲಿ ಅಧಿಕಾರಿಯಾಗಿ ನೇಮಕಗೊಂಡರು.

೧೫ ಡಿಸೆಂಬರ್ ೧೯೭೧ ರಂದು, ಗ್ರೆನೇಡಿಯರ್ಸ್ನ ಬೆಟಾಲಿಯನ್‌ಗೆ ಶಕರ್‌ಗಢ ಸೆಕ್ಟರ್‌ನಲ್ಲಿ ಬಸಂತರ್ ನದಿಗೆ ಅಡ್ಡಲಾಗಿ ಸೇತುವೆಯನ್ನು ಸ್ಥಾಪಿಸುವ ಕಾರ್ಯವನ್ನು ನಿಯೋಜಿಸಲಾಯಿತು. ಲೆಫ್ಟ್ ಫಾರ್ವರ್ಡ್ ಕಂಪನಿಗೆ ಕಮಾಂಡರ್ ಆಗಿದ್ದ ಮೇಜರ್ ದಹಿಯಾ ಅವರಿಗೆ ಜರ್ಪಾಲ್‌ನಲ್ಲಿ ಶತ್ರು ಪ್ರದೇಶವನ್ನು ವಶಪಡಿಸಿಕೊಳ್ಳಲು ಆದೇಶಿಸಲಾಗಿತ್ತು.  ಪಾಕಿಸ್ತಾನಿ ಪಡೆಗಳಿಂದ ಆವರಿಸಲ್ಪಟ್ಟಿದ್ದ ಈ ಸ್ಥಳವನ್ನು ವಶಪಡಿಸುವುದು ದೊಡ್ಡ ಸವಾಲಾಗಿತ್ತು. ದಾಳಿಯ ಸಮಯದಲ್ಲಿ, ದಹಿಯಾ ಕಂಪನಿಯು ಶತ್ರುಗಳ ಮಧ್ಯಮ ಮೆಷಿನ್ ಗನ್‌ಗಳಿಂದ ತೀವ್ರವಾದ ಶೆಲ್ ದಾಳಿ ಮತ್ತು ಕ್ರಾಸ್‌ಫೈರ್‌ಗೆ ಒಳಗಾಯಿತು. ಆದರೂ ದಹಿಯಾ ಧೈರ್ಯದಿಂದ ಅವರ ತಂಡವನ್ನು ಮುನ್ನಡೆಸಿ ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ಸು ಕಾಣುತ್ತಾರೆ. 

ಡಿಸೆಂಬರ್ ೧೬ರಂದು ಶತ್ರುಸೇನೆ ಮೂರು ಪ್ರತಿದಾಳಿಗಳನ್ನು ಮಾಡಿದಾಗ ಮೇಜರ್ ಹೋಶಿಯಾರ್ ಸಿಂಗ್ ಎದೆಗುಂದದೆ, ಸೈನಿಕರನ್ನು ನಿಂತು ಹೋರಾಡಲು ಪ್ರೋತ್ಸಾಹಿಸಿ ವಿಜಯದ ನಗೆ ಬೀರಿದರು. ಆದರೆ ಮರುದಿನ, ಶತ್ರುಗಳು ಬೆಟಾಲಿಯನ್ನೊಂದಿಗೆ ಮತ್ತೊಂದು ದಾಳಿ ಮಾಡಿದರು. ಶತ್ರುಗಳ ಶೆಲ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರೂ, ಮೇಜರ್ ಹೋಶಿಯಾರ್ ಸಿಂಗ್ ತಮ್ಮ ವೈಯಕ್ತಿಕ ಸುರಕ್ಷತೆಯನ್ನು ನಿರ್ಲಕ್ಷಿಸಿ ತೆರೆದ ಪ್ರದೇಶದಲ್ಲಿ ಚಲಿಸಿದರು ಮತ್ತು ಮೆಷಿನ್ ಗನ್ ಪಿಟ್‌ಗೆ ಧಾವಿಸಿ, ಗಂಭೀರವಾಗಿ ಗಾಯಗೊಂಡಿದ್ದರೂ, ಫೈರಿಂಗ್ ಮಾಡಿ ಶತ್ರು ಸೇನೆಯ ೮೫ ಸೈನಿಕರನ್ನು ಸದೆಬಡಿದರು.

ಗಂಭೀರವಾಗಿ ಗಾಯಗೊಂಡಿದ್ದರೂ, ಮೇಜರ್ ಹೋಶಿಯಾರ್ ಸಿಂಗ್ ಕದನ ವಿರಾಮದವರೆಗೆ ಸ್ಥಳಾಂತರಿಸಲು ನಿರಾಕರಿಸಿದರು. ಈ ಕಾರ್ಯಾಚರಣೆಯ ಉದ್ದಕ್ಕೂ, ಮೇಜರ್ ಹೋಶಿಯಾರ್ ಸಿಂಗ್ ಅತ್ಯಂತ ಶೌರ್ಯ, ಅದಮ್ಯ ಹೋರಾಟದ ಮನೋಭಾವ ಮತ್ತು ನಾಯಕತ್ವವನ್ನು ಪ್ರದರ್ಶಿಸಿದರು.

೧೯೭೧ ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಆ ಮೂರು ದಿನಗಳ ಸಾಹಸ ಮತ್ತು ಎದೆಗಾರಿಕೆಯು ೮೫ ಪಾಕಿಸ್ತಾನಿ ಸೈನಿಕರ ಸಾವಿಗೆ ಕಾರಣವಾಯಿತು. ಹೀಗೆ ದಹಿಯಾ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಪಡೆದ ಮೊದಲ ಜೀವಂತ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

⬅ ಮುಖಪುಟ