"ಸಿದ್ದಗಂಗಾ ಮಠದಲ್ಲಿ ನಡೆದಾಡುವ ದೇವರು ಕಲಿಯುಗದಲಿ ನೆಲೆಸಿರುವ ಸತ್ಯಶಿವ ಸದ್ಗುರು" ಶ್ರೀ ಸಿದ್ದಗಂಗಾ ಮಠದ ಪುಣ್ಯ ನೆಲದಲ್ಲಿ ನಿತ್ಯ ಮೊಳಗುವ ಗೀತೆಯಿದು. ಶ್ರೀ ಶಿವಕುಮಾರ ಸ್ವಾಮೀಜಿಯ ಈ ನಾಮಸ್ಮರಣೆ ತುಂಬು ಭಕ್ತಿ ಮತ್ತು ಶುದ್ಧ ಭಾವಪರವಶತೆಯನ್ನೊಳಗೊಂಡಿದೆ. ಏಕೆಂದರೆ ಶಿವಭಕ್ತಿಯ ಮೂಲಕವೇ ಸನ್ಮಾರ್ಗ ಕಂಡುಕೊAಡು, ಅಕ್ಷರ ಮತ್ತು ಅನ್ನ ದಾಸೋಹವನ್ನಿತ್ತು ಲಕ್ಷಾಂತರ ಮಕ್ಕಳು ಹಾಗೂ ಭಕ್ತಾದಿಗಳನ್ನು ಪೊರೆದು ನೆಲೆ ತೋರಗೊಟ್ಟವರವರು.
ಪರಿಚಯ: ಶ್ರೀ ಶಿವಕುಮಾರ ಸ್ವಾಮೀಜಿ ಏಪ್ರಿಲ್ ೧, ೧೯೦೭ ರಲ್ಲಿ ವೀರಾಪುರ ಗ್ರಾಮ, ಮಾಗಡಿ ತಾಲೂಕಿನ ರಾಮನಗರದಲ್ಲಿ ಜನಿಸಿದವರು. ಹೊನ್ನೇಗೌಡ ಮತ್ತು ಗಂಗಮ್ಮ ಶ್ರೀಗಳ ತಂದೆ-ತಾಯಿ. ಸುತ್ತಮುತ್ತ ಹಳ್ಳಿಯಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮ ಶಿಕ್ಷಣವನ್ನು ಮುಗಿಸಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಶಿಕ್ಷಣ ಪಡೆದವರು. ಹೆಚ್ಚಿನ ವಿದ್ಯಾಭ್ಯಾಸವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪಡೆದರು. ಉದ್ದಾನ ಶಿವಯೋಗಿಗಳ ಪ್ರಭಾವದಿಂದಾಗಿ ಸಿದ್ದಗಂಗಾ ಮಠದೊಂದಿಗೆ ಒಡನಾಟ ಬೆಳೆಯಿತು. ಉದ್ದಾನ ಶ್ರೀಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಲಿಂಗೈಕ್ಯರಾದಾಗ ೧೯೩೦ರಲ್ಲಿ ಶಿವಕುಮಾರರು ೨೩ ವರ್ಷದ ಯುವಕನಾಗಿದ್ದಾಗ ಅವರ ಹೆಗಲಿಗೆ ಸಿದ್ದಗಂಗಾ ಮಠಾಧಿಪತಿಗಳಾದರು. ಮಠದಲ್ಲಿ ಪ್ರಾರಂಭದಲ್ಲಿಯೇ ಹೊಸ ಕ್ರಾಂತಿಗಳಿಗೆ ನಾಂದಿ ಹಾಡಿದರು. ಜಾತಿ-ಧರ್ಮವನ್ನು ಮೀರಿ ನಿಂತರು. ಮಾನವೀಯತೆ ಒಂದೇ ನಿಜ ಧರ್ಮ ಎಂದು ಸಾರಿದರು. ಮಠದ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳನ್ನು ಪ್ರಗತಿಗೊಳಿಸಿದರು. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಲು ಮುಂದಾದರು. ವಿದ್ಯಾಭ್ಯಾಸದ ಜತೆಗೆ ಅನ್ನ ದಾಸೋಹವನ್ನೂ ನೀಡಿದರು. ಶ್ರೀ ಕ್ಷೇತ್ರ ಅಸಂಖ್ಯಾತ ಭಕ್ತರನ್ನು ತನ್ನತ್ತ ಸೆಳೆಯಿತು. ಅನ್ನ, ಅಕ್ಷರ, ಜ್ಞಾನವನ್ನು ನೀಡುತ್ತಾ ಬಂದ ಶಿವಕುಮಾರ ಸ್ವಾಮೀಜಿ ಅವರನ್ನು ಸಮಾಜ ತ್ರಿವಿಧ ದಾಸೋಹಿ ಎಂದು ಕರೆದು ಗೌರವಿಸಿತು. ಅಧ್ಯಾತ್ಮದ ನಾಯಕರೂ ಆಗಿದ್ದ ಶಿವಕುಮಾರ ಸ್ವಾಮೀಜಿ ನಿರಾಡಂಬರ ಭಕ್ತಿಯಿಂದ ಶಿವನನ್ನು ಒಲಿಸಿಕೊಂಡಿದ್ದರು. ಸ್ವಾಮೀಜಿಗಳ ನಿಸ್ವಾರ್ಥ ಸೇವೆ ಮಾದರಿಯಾಯಿತು, ಅಸಂಖ್ಯಾತ ವ್ಯಕ್ತಿಗಳ ಜೀವನಕ್ಕೆ ಪ್ರೇರಣೆಯಾಯಿತು. ಕಾಯಕವೇ ಕೈಲಾಸ ಎಂದು ನಂಬಿ ಬದುಕಿದ್ದ ಮತ್ತು ಬಸವಣ್ಣನ ತತ್ವಗಳಿಗೆ ಅನ್ವರ್ಥವಾಗಿದ್ದ ಶಿವಕುಮಾರ ಸ್ವಾಮೀಜಿ ತಲೆಮಾರುಗಳಿಗೆ ಸ್ಫೂರ್ತಿ.
ಪ್ರಶಸ್ತಿಗಳು: ಶಿವಕುಮಾರ ಸ್ವಾಮೀಜಿಯವರ ಪ್ರಾಮಾಣಿಕ ಸೇವೆಗೆ ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಕರ್ನಾಟಕ ರತ್ನ, ಪದ್ಮಭೂಷಣ ಪ್ರಶಸ್ತಿಗಳು ಸೇರಿದಂತೆ ನೂರಾರು ಪ್ರಶಸ್ತಿಗಳು ಶ್ರೀಗಳನ್ನು ಹುಡುಕಿಕೊಂಡು ಬಂದಿದ್ದವು.
೧೧೧ ವರ್ಷ ಬದುಕಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳು ಅನಾರೋಗ್ಯದಿಂದ ೨೦೧೯ ಜನವರಿ ೨೧ರಂದು ಶಿವೈಕ್ಯರಾದರು.