ನಮ್ಮನ್ನು ಅನುಸರಿಸಿ: Facebook Twitter Instagram YouTube

ಮುಮ್ಮಡಿ ಕೃಷ್ಣರಾಜ ಒಡೆಯರ್

ಅಪ್‌ಲೋಡ್ ಮಾಡಿದ ದಿನಾಂಕ: 10-06-2026 09:40

ಮುಮ್ಮಡಿ ಕೃಷ್ಣರಾಜ ಒಡೆಯರ್
ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನವನ್ನು ಸುದೀರ್ಘಕಾಲ ಆಳಿದ ಮತ್ತು ಎಷ್ಟೋ ಸಾಹಸಗಳಿಗೆ ಮುಂದಡಿಯಿಟ್ಟ ಮಹತ್ವಕಾಂಕ್ಷಿ ರಾಜ. ಮೈಸೂರಿನ ರಾಜವಂಶದ ೨೨ನೇ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ಘನತೆ, ದಕ್ಷತೆ, ಗಾಂಭೀರ್ಯ, ಪ್ರಜಾಪರ ಕೆಲಸ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಅಪಾರ ಆಸಕ್ತಿ, ನಿರಂತರ ವಾಸ್ತು ಶಿಲ್ಪಗಳ ಪೋಷಣೆಯೊಂದಿಗೆ ಸದಾ ಹೊಸತನಕ್ಕೆ ತೆರೆದುಕೊಳ್ಳುವ ಗುಣದಿಂದಾಗಿ ಹೆಚ್ಚು ಪ್ರಸಿದ್ಧರಾಗಿದ್ದರು. ಆ ಕಾರಣದಿಂದಲೇ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಈಗಲೂ ಮೈಸೂರು ಸಂಸ್ಥಾನದ ರಾಜನಾಗಿ ಅಷ್ಟೇ ಅಲ್ಲದೆ ಒಬ್ಬ ಬಹುಶೃತ ಪ್ರತಿಭೆಯ ಕವಿಯಾಗಿ ಮತ್ತು ಕಲಾ ರಸಿಕನಾಗಿ ಕಂಡು ಅತ್ಯಂತ ಗೌರವದಿಂದ ಸ್ಮರಿಸಲಾಗುತ್ತದೆ.
ಪರಿಚಯ
ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ೧೭೯೪ ರ ಜುಲೈ ೧೪ ರಂದು ಜನಿಸಿದ್ದಾರೆ ಎಂದು ಹಲವು ದಾಖಲೆಗಳಲ್ಲಿ ಹೇಳಲಾಗಿದೆ.  ತಾಯಿ ಕೆಂಪ ನಂಜಮ್ಮಣ್ಣಿ ಬಾಣಂತಿ ಇರುವಾಗಲೇ ತೀರಿಕೊಂಡರೆ ತಂದೆಯೂ ಮಗುವಿಗೆ ಎರಡು ವರ್ಷ ಆಗುವುದರೊಳಗೆ ಸಿಡುಬಿನ ಕಾಯಿಲೆಯಿಂದ ನಿಧನರಾಗುತ್ತಾರೆ.  ಮುಮ್ಮಡಿ ಅವರನ್ನು ಅಜ್ಜಿ ಲಕ್ಷ್ಮಮ್ಮಣ್ಣಿ ಸಾಕಿದರು ಎನ್ನಲಾಗುತ್ತದೆ. ಹೈದರ್ ಅಲಿ ಮತ್ತು ಟಿಪ್ಪುವಿನ ಕಾಲದಲ್ಲಿ ತಮ್ಮ ಅಧಿಕಾರವನ್ನು ಕಳೆದುಕೊಂಡಿದ್ದ ಮೈಸೂರು ರಾಜವಂಶ ಟಿಪ್ಪುವಿನ ಮರಣದ ನಂತರ ಅಧಿಕಾರದ ಗದ್ದುಗೆಗೆ ಏರಿತು. ಐದು-ಆರು ವರ್ಷದ ಹಾಲುಗಲ್ಲದ ಬಾಲಕನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದರು. ದಿವಾನ್ ಪೂರ್ಣಯ್ಯ ಆಡಳಿತ ಸೂತ್ರಗಳನ್ನು ವಹಿಸಿಕೊಂಡಿದ್ದರು. ಪೂರ್ಣಯ್ಯ ಕಾಲವಾದ ನಂತರ ಅಂದರೆ ತಮ್ಮ ೧೮ನೇ ವಯಸ್ಸಿನಲ್ಲಿ ಒಡೆಯರ್ ಸಂಪೂರ್ಣ ಆಡಳಿತವನ್ನು ವಹಿಸಿಕೊಂಡರು. ತಮ್ಮ ಚತುರಮತಿಯಿಂದ ರಾಜ್ಯದ ಆಡಳಿತವನ್ನು ಸುಧಾರಿಸಿದರು. ಭೀಕರ ಕ್ಷಾಮ ಎದುರಾದಾಗ ಅರಮನೆಯ ಬೊಕ್ಕಸೆಯ ಹಣವನ್ನು ಜನತೆಯ ಸಂಕಷ್ಟವನ್ನು ನೀಗಿಸಲು ಖರ್ಚು ಮಾಡಿದರು. ಸದಾ ಜನತೆಯ ಕಲ್ಯಾಣಕ್ಕಾಗಿ ತುಡಿಯುತ್ತಿದ್ದ ಒಡೆಯರ್ ರಾಜ್ಯಕ್ಕೆ ಅನೇಕ ಕಾರಣಗಳಿಂದ ಅಪಾರ ನಷ್ಟವಾದಾಗಲೂ ಜನಪರ ಕೆಲಸಗಳನ್ನು ಮಾಡಿದರು.
ಮಹತ್ವದ ಕೆಲಸಗಳು
ನಿಜ ಅರ್ಥದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯಕ್ಕೆ ಆಧುನಿಕತೆಯ ಸ್ಪರ್ಶ ನೀಡಿದವರು. ಅವರು ಸುಖೀ ರಾಜ್ಯದ ಕನಸನ್ನು ಇಟ್ಟುಕೊಂಡಿದ್ದರು. ಅವರ ಕಾಲದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಉಚಿತ ವೈದ್ಯ ಶಾಲೆಗಳು ಪ್ರಾರಂಭವಾದವು. ರಾಜ್ಯದಲ್ಲಿ ಆಂಗ್ಲ ಶಿಕ್ಷಣವನ್ನು ಜಾರಿಗೊಳಿಸಿದ್ದರು. ಮೈಸೂರಿನಾದ್ಯಂತ ಹೊಸ ಬಡಾವಣೆಗಳನ್ನು ನಿರ್ಮಿಸಿದ್ದರು. ನದಿಗಳಿಗೆ ಸೇತುವೆಗಳನ್ನು ಕಟ್ಟಿಸಿದ್ದರು. ತಮ್ಮ ಆರು ದಶಕಗಳ ರಾಜಾಡಳಿತದಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಸಾಕಷ್ಟು ಸುಧಾರಣೆಗಳಿಗೆ ನಾಂದಿ ಹಾಡಿದ್ದರು.
ಸಾಹಿತ್ಯ ಪೋಷಕ
ಮುಮ್ಮಡಿ ಕೃಷ್ಣರಾಜ ಒಡೆಯರ್ ಒಬ್ಬ ಅಸಾಮಾನ್ಯ ಸಾಹಿತಿಯಾಗಿದ್ದರು. ಅವರು ಬಹುಭಾಷಾ ಪಂಡಿತರಾಗಿದ್ದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರ ಸೇವೆ ಅನುಪಮವಾಗಿತ್ತು. ನಿರಂತರವಾಗಿ ಬರೆಯುತ್ತಿದ್ದ ಒಡೆಯರ್ ಅವರು ಆಗಷ್ಟೇ ಹುಟ್ಟಿಕೊಂಡಿದ್ದ ನವೋದಯ ಕನ್ನಡ ಸಾಹಿತ್ಯ ಲೋಕದ ಅತ್ಯಂತ ಭರವಸೆಯ ಕವಿಯಾಗಿ ಮಹತ್ವದ ಕೃತಿಗಳ ಕರ್ತೃವಾಗಿ ಸಾಹಿತ್ಯ ಲೋಕವನ್ನು ಹೊಸ ದಿಕ್ಕಿನತ್ತ ಕೊಂಡೊಯ್ದಿದ್ದರು. ಅವರು ಭಾಷೆಗಳ ನಡುವೆ ಸಂಸರ್ಗವನ್ನೂ ಬೆಳೆಸಿದ್ದರು. ಬಹು ಮುಖ್ಯವಾಗಿ ಮುಮ್ಮಡಿ ಗದ್ಯ ಬರೆಹದ ಮಾಂತ್ರಿಕ. ಸಂಸ್ಕೃತ ಭಾಷೆಯ ಭಾರತ, ಭಾಗವತವನ್ನು ಕನ್ನಡ ಭಾಷೆಗೆ ತಂದು ಚೆಂದಗಾಣಿಸಿದ್ದರು. ಕಾಳಿದಾಸನ ಶಾಕುಂತಲ ಮಾಳವಿಕಾಗ್ನಿ ಮಿತ್ರ ನಾಟಕಗಳನ್ನೂ ಬಹಳ ಸಲೀಸಾಗಿ ಸರಳ ರೂಪದಲ್ಲಿ ಕನ್ನಡಕ್ಕೆ ಗದ್ಯಾನುವಾದ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಥೆಗಳನ್ನು ಅದ್ಭುತವಾಗಿ ಬರೆಯುವವುದರ ಜತೆಗೆ ಹೇಳುವ ಕಲೆಯನ್ನೂ ಒಡೆಯರ್ ಸಿದ್ಧಿಸಿಕೊಂಡಿದ್ದರು. ತತ್ವನಿಧಿ, ಶ್ರೀ ಚಾಮುಂಡಿಕಾ ಲಘು ನಿಘಂಟು, ಕೃಷ್ಣ ಕಥಾ ಸಾರ ಸಂಗ್ರಹ, ದೇವತಾನಾಮ ಕುಸುಮ ಮಂಜರಿ, ದಶವಿಭಾಗ ಪದಕ ಇವುಗಳು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಪ್ರಸಿದ್ಧ ಕೃತಿಗಳು. ಇಲ್ಲಿಯವರೆ ೫೭ಕ್ಕೂ ಹೆಚ್ಚು ಕೃತಿಗಳು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಸಿಕ್ಕಿವೆ. 
ಸಾಕಷ್ಟು ಕವಿಗಳಿಗೆ ಮುಮ್ಮಡಿ ರಾಜಾಶ್ರಯವನ್ನೂ ನೀಡಿ ಅವರ ಪ್ರತಿಭೆಗೆ ಪ್ರೋತ್ಸಾಹದ ನೀರೆರೆಯುತ್ತಿದ್ದರು. ದೇವಚಂದ್ರ ಮತ್ತು ಕೆಂಪು ನಾರಾಯಣ ಎಂಬ ಇಬ್ಬರು ಪ್ರಸಿದ್ಧ ಕವಿಗಳು ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲಕ್ಕೆ ಸೇರಿದವರಾಗಿದ್ದರು. ಮುಮ್ಮಡಿ ಒಡೆಯರ್ ಅವರಿಗೆ ಕವಿಜನ ಕಾಮಧೇನು, ಕನ್ನಡದ ಭೋಜ ಎಂಬ ಬಿರುದುಗಳಿದ್ದವು. ಕನ್ನಡವನ್ನು ಕಟ್ಟಿ ಬೆಳೆಸುವುದರಲ್ಲಿ ಅವರ ಪಾತ್ರವೂ ಹಿರಿದಾಗಿತ್ತು ಎಂದು ಹೇಳಬಹುದು. 
ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಆಡಳಿತವನ್ನಷ್ಟೇಯಲ್ಲದೇ ಅಷ್ಟೇ ಅಲ್ಲದೆ ಕಲಾ ಸೇವೆಯನ್ನೂ ಮಾಡಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ೭೪ನೇ ಇಳಿ ವಯಸ್ಸಿನಲ್ಲಿ ವಿಧಿವಶರಾದರು. ಅವರನ್ನು ಮೈಸೂರು ರಾಜವಂಶವನ್ನು ಬಹುಕಾಲ ಆಳಿದ ಅರಸ ಎಂದು ಕರೆಯಲಾಗುತ್ತದೆ. 
⬅ ಮುಖಪುಟ