ನಮ್ಮನ್ನು ಅನುಸರಿಸಿ: Facebook Twitter Instagram YouTube

ಜಿ. ಎಸ್. ಶಿವರುದ್ರಪ್ಪ (೭ ಫೆಬ್ರವರಿ, ೧೯೨೬ - ೨೩ ಡಿಸೆಂಬರ್, ೨೦೧೩)

ಅಪ್‌ಲೋಡ್ ಮಾಡಿದ ದಿನಾಂಕ: 02-04-2026 14:09

ಜಿ. ಎಸ್. ಶಿವರುದ್ರಪ್ಪ (೭ ಫೆಬ್ರವರಿ, ೧೯೨೬ - ೨೩ ಡಿಸೆಂಬರ್, ೨೦೧೩)
ನಾನು ಬರೆಯುತ್ತೇನೆ ಖುಷಿಗೆ, ನೋವಿಗೆ, ರೊಚ್ಚಿಗೆ ಮತ್ತು ಹುಚ್ಚಿಗೆ ಅಥವಾ ನಂದಿಸಲಾರದ ಕಿಚ್ಚಿಗೆ ಎಂದವರು ಕನ್ನಡದ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ. ಜಿಎಸ್‌ಎಸ್ ಪಾಲಿಗೆ ಬರೆಹ ಎಂಬುದು ತಪಸ್ಸು. ಅವರು ಸರಿ ಸುಮಾರು ಅರ್ಧ ಶತಮಾನಗಳ ಕಾಲ ಬರೆಹವನ್ನೇ ಬದುಕಾಗಿಸಿಕೊಂಡವರು. ಅವರು ಕನ್ನಡ ಕಾವ್ಯಕ್ಕೆ ಹೊಸ ಸ್ಪರ್ಶ ನೀಡಿದವರು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿ ಹೋದವರು. ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕ ಮತ್ತು ಸಂಶೋಧಕರಾಗಿ ಅವರು ಮಾಡಿದ ಸಾಧನೆ ಅನನ್ಯವಾದದ್ದು. ತಮ್ಮದೇ ವಿಭಿನ್ನ ದಾರಿಯನ್ನು ಕಂಡುಕೊಂಡಿದ್ದ ಜಿ ಎಸ್ ಎಸ್ ಕೊನೆಯವರೆಗೂ ಅವರದ್ದೇ ವರ್ಚಸ್ಸನ್ನು ಉಳಿಸಿಕೊಂಡಿದ್ದರು. ಅವರು ಕನ್ನಡ ಕಾವ್ಯ ಲೋಕದ ಅನಭಿಷಿಕ್ತ ಅರಸ.

ಪರಿಚಯ: ಜಿಎಸ್‌ಎಸ್ ಕಾವ್ಯನಾಮದಿಂದ ಹೆಸರುವಾಸಿಯಾಗಿರುವ ಶಿವರುದ್ರಪ್ಪನವರು ಶಿವಮೊಗ್ಗದವರು. ತಂದೆ ಶಾಂತ ವೀರಪ್ಪ ತಾಯಿ ವೀರಮ್ಮ. ಫೆಬ್ರವರಿ ೭, ೧೯೨೬ ಜನನ. ಜಿಎಸ್‌ಎಸ್ ಸಾಹಿತ್ಯ ಕೃಷಿಗೆ ಅವರ ತಂದೆ ಮೂಲ ಸ್ಫೂರ್ತಿ. ಅವರು ಅತೀ ಎಳೆಯ ವಯಸ್ಸಿನಲ್ಲಿ ಬರೆಹವನ್ನು ಪ್ರಾರಂಭಿಸಿದವರು. ನಿರಂತರವಾಗಿ ಸಾಹಿತ್ಯವನ್ನು ಅಭ್ಯಸಿಸಿದವರು. ಕನ್ನಡದ ಮಹತ್ವದ ಕವಿ ಕುವೆಂಪು ಜಿಎಸ್‌ಎಸ್ ಅವರ ಗುರುಗಳು. ಕುವೆಂಪು ಅವರಿಂದಲೇ ಜಿ ಎಸ್ ಎಸ್ ತುಂಬಾ ಪ್ರಭಾವಿತರಾಗಿದ್ದರು. ಜಿಎಸ್‌ಎಸ್ ಅವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದರೂ ‘ಬರೆಹ’ ಅವರಿಗೆ ತೃಪ್ತಿಯನ್ನು ತಂದುಕೊಟ್ಟಿತ್ತು. ಹಾಗಾಗಿ ನಿರಂತರವಾಗಿ ಬರೆದರು. ಅವರ ಎಲ್ಲಾ ಕೃತಿಗಳು ಗಂಭೀರ ಸಾಹಿತ್ಯ ಎನಿಸಿಕೊಂಡಿತು.

ಪ್ರಮುಖ ಕೃತಿಗಳು: ಕವನ, ನಾಟಕ, ವಿಮರ್ಶೆ ಮತ್ತು ಪ್ರವಾಸ ಕಥನವನ್ನು ಜಿಎಸ್‌ಎಸ್ ಹೆಚ್ಚಾಗಿ ಬರೆದರು. ಅವರ ದೀಪದ ಹೆಜ್ಜೆ, ಅನಾವರಣ, ಅಗ್ನಿಪರ್ವ, ಎದೆ ತುಂಬಿ ಹಾಡಿದೆನು, ಕಾರ್ತಿಕ ಮತ್ತು ದೀಪದ ಹೆಜ್ಜೆ ಪ್ರಮುಖ ಕವನ ಸಂಕಲನಗಳು. ಕನ್ನಡ ಕವಿಗಳ ಕಾವ್ಯ ಕಲ್ಪನೆ, ಕುವೆಂಪು ಪುನರವಲೋಕನ, ಬೆಡಗು, ಅನುರಣನ, ಕಾವ್ಯಾರ್ಥ ಚಿಂತನ ಮತ್ತು ವಿಮರ್ಶೆಯ ಪೂರ್ವ ಪಶ್ಚಿಮ ಇವುಗಳು ಅವರ ಗಂಭೀರ ವಿಮರ್ಶಾ ಗ್ರಂಥಗಳು. ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚತುರ್ಮಾಸ ಮತ್ತು ಅಮೆರಿಕದಲ್ಲಿ ಕನ್ನಡಿಗ ಅವರ ಹೆಸರಾಂತ ಪ್ರವಾಸ ಕಥನಗಳು.

ಭಾವಗೀತೆಗಳ ಸರದಾರ: ಜಿಎಸ್‌ಎಸ್ ಅತೀ ಹೆಚ್ಚು ಜನಪ್ರಿಯತೆ ಗಳಿಸಿ ಜನ ಸಾಮಾನ್ಯರ ಕವಿಯಾಗಿದ್ದು ಅವರ ಭಾವಗೀತೆಗಳಿಂದ. ಅವರ ಸರಳ ಸುಂದರ ಮತ್ತು ಅಪಾರ ಜೀವನಾನುಭವದ ಭಾವಗೀತೆಗಳು ಇಡೀ ನಾಡಿನಾದ್ಯಂತ ಪ್ರಸಿದ್ಧಿಯಾಯಿತು. ’ಎದೆ ತುಂಬಿ ಹಾಡಿದೆನು ಅಂದು ನಾನು’, ’ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ’, ’ಎಲ್ಲೋ ಹುಡುಕಿದೆ ಇಲ್ಲದ ದೇವರ’, ’ಕಾಣದ ಕಡಲಿಗೆ ಹಂಬಲಿಸಿದೆ ಮನ’, ’ಯಾವುದೀ ಪ್ರವಾಹವೂ’ ಹೀಗೆ ನೂರಾರು ಅರ್ಥಗರ್ಭಿತ ಭಾವಗೀತೆಗಳನ್ನು ಜಿಎಸ್‌ಎಸ್ ರಚಿಸಿದ್ದರು. ಈಗಲೂ ಅವರ ಭಾವಗೀತೆಗಳನ್ನು ಶ್ರದ್ಧೆಯಿಂದ ಹಾಡುವವರಿದ್ದಾರೆ. ಕೇಳಿಸಿಕೊಂಡು ತಲೆದೂಗುವವರಿದ್ದಾರೆ.

ಪ್ರಶಸ್ತಿಗಳು: ಜಿ ಎಸ್ ಶಿವರುದ್ರಪ್ಪ ತಮ್ಮ ಕಾವ್ಯ ಸಾಧನೆಗೆ ಗೋವಿಂದ ಪೈ ಮತ್ತು ಕುವೆಂಪು ನಂತರ ಮೂರನೇ ರಾಷ್ಟ್ರಕವಿ ಎಂದು ಕರೆಸಿಕೊಂಡರು. ಅ? ಅಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಪ್ರಸಿದ್ಧ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದರು.
ಕನ್ನಡದ ಸಮನ್ವಯ ಕವಿಯಾಗಿದ್ದ ಎಲ್ಲರ ಕವಿ ಜಿ ಎಸ್ ಎಸ್ ೨೦೧೩ ಡಿಸೆಂಬರ್ ೨೩ರಂದು ನಿಧನರಾದರು. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ? ಎಂದ ಜಿ ಎಸ್ ಎಸ್ ಕನ್ನಡದ ಸಾಕ್ಷಿ ಪ್ರಜ್ಞೆ.

⬅ ಮುಖಪುಟ