ಇಡೀ ಭಾರತದ ರಾಜಮನೆತನಗಳ ಆಳ್ವಿಕೆಯ ಇತಿಹಾಸದಲ್ಲೇ ಸುದೀರ್ಘ ೫ ದಶಕಗಳ ಕಾಲ ರಾಜ್ಯಾಭಾರ ಮಾಡಿದ ಮಹಾರಾಣಿಯ ನಿದರ್ಶನ ದೊರೆಯುವುದು ನಮ್ಮ ಕರ್ನಾಟಕದಲ್ಲಿ ಎನ್ನುವುದು ಹೆಮ್ಮೆಯ ಸಂಗತಿ. ಕರ್ನಾಟಕಕ್ಕೆ ಈ ಕೀರ್ತಿಯ ಮಾಲೆಯನ್ನು ತೊಡಿಸಿದ ಮಹಾನ್ ಅರಸಿ ರಾಣಿ ಚೆನ್ನಾಭೈರಾದೇವಿ. ಕಾಳುಮೆಣಸಿನ ರಾಣಿ, ಗೇರುಸೊಪ್ಪೆಯ ರಾಣಿ ಎಂದೇ ಪ್ರಸಿದ್ಧಳಾದವಳು ರಾಣಿ ಚೆನ್ನಾಭೈರಾದೇವಿ. ಈಕೆ ತನ್ನ ಆಳ್ವಿಕೆ ನಡೆಸಿದ ಕಾಲ ಸಾಮಾನ್ಯ ಶಕ ವರ್ಷ ೧೫೫೨ ರಿಂದ ಸಾಮಾನ್ಯ ಶಕ ವರ್ಷ ೧೬೦೬. ಈ ಅವಧಿ ಜನಪರವೂ, ಪ್ರಗತಿಪರವೂ ಆಗಿರದೇ ರಾಜನೀತಿಯ ಚಾಕಚಕ್ಯತೆಯ ಮಹತ್ತಾದರ್ಶವಾಗಿ ನಮ್ಮೆದುರಿಗಿದೆ.
ಸಾಳ್ವ ವಂಶದ ಮನೆತನ: ವಿಜಯನಗರದ ಸಾಳ್ವ ವಂಶದ ಅರಸು ಮನೆತನಕ್ಕೆ ಸೇರಿದ ಈಕೆ ಮಹಾಪ್ರಭು ವೀರಪ್ಪ ಒಡೆಯರು ಮತ್ತು ಮಹಾಮಂಡಲೇಶ್ವರಿ ಭೈರಾದೇವಿ ಅವರ ಮಗಳು. ಸಾ.ಶ.೧೫೫೩ರಿಂದಲೇ ಗೇರುಸೊಪ್ಪೆ ಮತ್ತು ಹಾಡುವಳ್ಳಿ (ಸಂಗೀತಪುರ) ಈಕೆಯ ಆಡಳಿತಕ್ಕೆ ಒಳಪಟ್ಟಿತ್ತು. ಈಕೆಯ ಆಡಳಿತಕ್ಕೂ ಮುನ್ನ ಹಾಡುವಳ್ಳಿ ರಾಜ ವಂಶದವರು, ಗೇರುಸೊಪ್ಪೆಯ ರಾಜವಂಶದವರು ಸಾಳ್ವ ಮನೆತನಕ್ಕೆ ಸೇರಿದ್ದರೂ ಅವರುಗಳ ನಡುವೆ ಒಳಜಗಳಿದ್ದವು, ರಾಜ್ಯಭಾರವೂ ಪ್ರತ್ಯೇಕವಾಗಿ ನಡೆಯುತ್ತಿತ್ತು. ಆದರೆ ರಾಜ್ಯಭಾರ ಮಾಡಿದ ಮೂವರು ಮಹಾಮಂಡಲೇಶ್ವರಿ ಮಹರಾಣಿಯರ ಕಾರಣಕ್ಕಾಗಿ ಗೆಳೆತನ ಬೆಳೆಯಿತು, ಹಗೆತನ ಕಡಿಮೆಯಾಯಿತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಟ್ಟವಳು ರಾಣಿ ಚೆನ್ನಭೈರಾದೇವಿ.
ಕೆಚ್ಚೆದೆಯ ರಾಣಿ: ರಾಣಿ ಚೆನ್ನಭೈರಾದೇವಿ ತಾನಾಗಿಯೇ ಯಾರ ಮೇಲೂ ದಾಳಿ ಮಾಡಿ ಸಾಮ್ರಾಜ್ಯ ವಿಸ್ತಾರಕ್ಕೆ ಹೋದವಳಲ್ಲ. ಆದರೆ ದಂಗೆದ್ದು ಬಂದವರ ಬಗ್ಗುಬಡಿಯದೆ ಸುಮ್ಮನ್ನಿರಲಿಲ್ಲ. ಬೀಳಗಿಯ ಅರಸಪ್ಪ ಒಡೆಯನ ವಿರುದ್ಧ ಜಯ ಸಾಧಿಸಿದಳು. ೧೫೫೯ ಮತ್ತು ೧೫೭೦ರಲ್ಲಿ ಪೋರ್ಚುಗೀಸರನ್ನು ಸೋಲಿಸಿದಳು. ದಂಡೆತ್ತಿ ಬಂದ ಕೆಳದಿಯ ಅರಸರನ್ನು ಯುದ್ಧದಲ್ಲಿ ಸೋಲಿಸಿ ಹಲವು ವರ್ಷಗಳ ಕಾಲ ಕೆಳದಿ ಯುದ್ಧದ ಕುರಿತು ಯೋಚಿಸದಂತೆ ಮಾಡಿ, ಪರಾಕ್ರಮವನ್ನು ಮೆರೆದ ಪರಾಕ್ರಮಿ ಅರಸಿ ರಾಣಿ ಚೆನ್ನಭೈರಾದೇವಿ. ದಂಡೆತ್ತಿ ಬಂದವರ ವಿರುದ್ಧ ಯುದ್ಧವನ್ನೂ ಮಾಡಿದ್ದಳು, ಚತುರತೆಯಿಂದ ಎಲ್ಲರೊಂದಿಗೂ ಸ್ನೇಹಮಯಿಯೂ ಆಗಿದ್ದಳು.
ಪ್ರಜಾಪ್ರಿಯ ರಾಣಿ: ಚೆನ್ನಭೈರಾದೇವಿ ತನ್ನೆಲ್ಲಾ ಪ್ರಜೆಗಳನ್ನು ಸಮನಾಗಿ ಕಂಡವಳು. ಎಲ್ಲರಿಗೂ ವಿಶೇಷ ಸವಲತ್ತುಗಳನ್ನು ನೀಡಿದವಳು. ಈಕೆಯ ಆಳ್ವಿಕೆಯಲ್ಲಿ ಯುರೋಪಿನ ರಾಷ್ಟ್ರಗಳಿಗೆ ಕಾಳುಮೆಣಸು, ದಾಲ್ಚಿನ್ನಿ, ಅಡಿಕೆ, ಶುಂಠಿ, ಗಂಧಗಳನ್ನು ರಫ್ತು ಮಾಡಲಾಗುತ್ತಿತ್ತು. ಈಕೆಯ ಕಾಲದ ಮಿರ್ಜಾನ್ ಕೋಟೆ, ಕಾನೂರು ಕೋಟೆಗಳನ್ನೂ ಈಗಲೂ ಕಾಣಬಹುದು. ಈಕೆ ೧೫೬೨ರಲ್ಲಿ ಕಾರ್ಕಳದಲ್ಲಿನ ಚತುರ್ಮುಖ ಬಸದಿಯನ್ನು ಕಟ್ಟಿಸಿದಳು. ವೇಣುಪುರದ ಯೋಗಾನರಸಿಂಹ ಸ್ವಾಮಿ ದೇಗುಲ ಮತ್ತು ವರ್ಧಮಾನ ಬಸದಿಗಳ ಜೀರ್ಣೋದ್ದಾರಕ್ಕೂ ರಾಣಿ ನೆರವು ನೀಡಿದ್ದಳು. ಅನೇಕ ಶೈವ, ವೈ?ವ ಮತ್ತು ಶಕ್ತಿ ದೇಗುಲಗಳನ್ನು ಕಟ್ಟಲು, ಜೀರ್ಣೋದ್ದಾರಕ್ಕೆ ಸಹಕಾರವನ್ನಿತ್ತಿದ್ದಳು. ಪೋರ್ಚುಗೀಸರ ಮತಾಂತರದಿಂದ ತಪ್ಪಿಸಿಕೊಳ್ಳಲು ಚೆನ್ನಭೈರಾದೇವಿಯ ರಾಜ್ಯಕ್ಕೆ ಆಶ್ರಯ ಕೋರಿ ಬಂದ ಜನರಿಗೆ ರಾಣಿ ತನ್ನ ರಾಜ್ಯದಲ್ಲಿ ಆಶ್ರಯ ಕೊಟ್ಟಳು.
ಐದು ದಶಕಗಳ ಕಾಲ ಕರಾವಳಿ ಪ್ರದೇಶದ ಬಹುಭಾಗವನ್ನು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿ ಶ್ರೀಮಂತಗೊಳಿಸುವಲ್ಲಿ ತನ್ನ ಜೀವನವನ್ನು ಸಮರ್ಪಿಸಿದ ರಾಣಿ ಚೆನ್ನಾಭೈರಾದೇವಿ ಅವರನ್ನು ಸ್ಮರಿಸಿಕೊಳ್ಳುವ ಮೂಲಕ ಇತಿಹಾಸವನ್ನು ಶ್ರೀಮಂತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ.