ಪ್ರೊ. ಸತೀಶ್ ಧವನ್ ಅವರು ಸುಪ್ರಸಿದ್ಧ ಭಾರತೀಯ ರಾಕೆಟ್ ವಿಜ್ಞಾನಿ. ಅವರನ್ನು ಭಾರತೀಯ ವೈಜ್ಞಾನಿಕ ಸಮುದಾಯದಲ್ಲಿ father of experimental fluid dynamics research in India ಎಂದು ಪರಿಗಣಿಸಲಾಗಿದೆ. ಪ್ರಕ್ಷುಬ್ಧತೆ ಮತ್ತು ಗಡಿ ಪದರಗಳ ಕ್ಷೇತ್ರದಲ್ಲಿ ಅತ್ಯಂತ ಪ್ರಖ್ಯಾತ ಸಂಶೋಧಕರಲ್ಲಿ ಒಬ್ಬರು.
ವಿದ್ಯಾಭ್ಯಾಸ: ಪ್ರೊ.ಸತೀಶ್ ಧವನ್ ಅವರು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶಿಕ್ಷಣವನ್ನು ಪಡೆದರು. ಗಣಿತ ಮತ್ತು ಭೌತಶಾಸ್ತ್ರದಲ್ಲಿ ಬಿಎ, ಇಂಗ್ಲಿ? ಸಾಹಿತ್ಯದಲ್ಲಿ ಎಂ.ಎ, ೧೯೪೫ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ, ೧೯೪೭ರಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್, ಕ್ಯಾಲಿಫೋರ್ನಿಯಾ ಇನ್ಸ್ಟೊಟ್ಯೂಟ್ ಆಫ್ ಟೆಕ್ನಾಲಜಿ, ಲಾಹೋರ್‌ನಲ್ಲಿರುವ ಪಂಜಾಬ್ ವಿಶ್ವವಿದ್ಯಾಲಯ, ಮಿನ್ನೇಸೋಟ ವಿಶ್ವವಿದ್ಯಾಲಯ, ಮಿನ್ನಿಯಾಪೋಲಿಸ್, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಲ್ಲಿ ಅಧ್ಯಯನ ನಡೆಸಿದ್ದಾರೆ. ೧೯೪೯ರಲ್ಲಿ ಏರೋನಾಟಿಕಲ್ ಇಂಜಿನಿಯರ್ ಪದವಿ, ೧೯೫೧ರಲ್ಲಿ ಏರೋನಾಟಿಕ್ಸ್ ಮತ್ತು ಗಣಿತಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.
ವೃತ್ತಿ ಜೀವನ: ೧೯೫೧ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿ, ೧೯೫೫ರಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ, ೧೯೬೨-೧೯೮೧ರವರೆಗೆ ಅದರ ನಿರ್ದೇಶಕರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, USAಯಲ್ಲಿ ೧೯೭೧-೭೨ರಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ೧೯೭೭-೧೯೭೯ರವರೆಗೆ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೮೪-೯೩ರವರೆಗೆ ಬೆಂಗಳೂರಿನ ನ್ಯಾ?ನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್‌ನ ಸಂಶೋಧನಾ ಮಂಡಳಿಯ ಅಧ್ಯಕ್ಷರಾಗಿದ್ದರು.
ಇಸ್ರೋ ಅಧ್ಯಕ್ಷರಾಗಿ: ಬಾಹ್ಯಾಕಾಶ ಕಾರ್ಯಕ್ರಮದ ಸಂಸ್ಥಾಪಕರಾದ ವಿಕ್ರಮ್ ಸಾರಾಭಾಯ್ ಅವರ ನಂತರ ೧೯೭೨-೮೪ರವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷರಾದರು. ಅವರು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿದ್ದರು ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಯಾಗಿದ್ದರು. ಅವರ ನೇಮಕಾತಿಯ ನಂತರದ ದಶಕದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಅಸಾಧಾರಣ ಬೆಳವಣಿಗೆ ಮತ್ತು ಅದ್ಭುತ ಸಾಧನೆಯನ್ನು ಗೈಯುವತ್ತ ನಿರ್ದೇಶಿಸಿದರು.
ಸಾಧನೆ: ಡಾ. ಸತೀಶ್ ಧವನ್ ಅವರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದಾಗಲೂ ಅವರು ಗಡಿ ಪದರದ ಸಂಶೋಧನೆಗೆ ಗಣನೀಯ ಪ್ರಯತ್ನಗಳನ್ನು ಮಾಡಿದರು. ಈ ಕುರಿತಾದ ಅವರ ಪ್ರಮುಖ ಕೊಡುಗೆಗಳನ್ನು ಹರ್ಮನ್ ಸ್ಲಿಟ್ಟಿಂಗ್ ಅವರ ಪುಸ್ತಕ ಬೌಂಡರಿ ಲೇಯರ್ ಥಿಯರಿಯಲ್ಲಿ ಪ್ರಸ್ತುತಪಡಿಸಲಾಗಿದೆ. IIScಯಲ್ಲಿ ಭಾರತದ ಮೊದಲ ಸೂಪರ್ಸಾನಿಕ್ ವಿಂಡ್ ಟನಲ್ ಅನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರೊ. ಸತೀಶ್ ಧವನ್ ಅವರು ಗ್ರಾಮೀಣ ಶಿಕ್ಷಣ, ದೂರಸಂವೇದಿ ಮತ್ತು ಉಪಗ್ರಹ ಸಂವಹನಗಳಲ್ಲಿ ಪ್ರವರ್ತಕ ಪ್ರಯೋಗಗಳನ್ನು ನಡೆಸಿದರು. ಅವರ ಪ್ರಯತ್ನಗಳು INSAT- ದೂರಸಂಪರ್ಕ ಉಪಗ್ರಹ, IRS - ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹ ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ನಂತಹ ಕಾರ್ಯಾಚರಣೆಯ ವ್ಯವಸ್ಥೆಗಳಿಗೆ ಕಾರಣವಾಯಿತು. ಅದು ಭಾರತವನ್ನು ಬಾಹ್ಯಾಕಾಶ ಪ್ರಯಾಣದ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸುವಿಕೆಗೆ ಕಾರಣವಾಯಿತು.
ರಾಷ್ಟ್ರದ ಎರಡು ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳು ಇವರಿಗೆ ಲಭಿಸಿದೆ. ೧೯೭೧ರಲ್ಲಿ ಪದ್ಮಭೂಷಣ, ೧೯೮೧ರಲ್ಲಿ ಪದ್ಮವಿಭೂಷಣ ಗೌರವ ಸಂದಿದೆ. ೨೦೦೨ರಲ್ಲಿ ಅವರ ಮರಣದ ನಂತರ, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಭಾರತೀಯ ಉಪಗ್ರಹ ಉಡಾವಣಾ ಕೇಂದ್ರಕ್ಕೆ ಪ್ರೊ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಎಂದು ಮರುನಾಮಕರಣ ಮಾಡಲಾಯಿತು.