ಜಗತ್ತಿನ ಹಾಕಿಮಾಂತ್ರಿಕನೆಂದೇ ಗುರುತಿಸಿಕೊಳ್ಳುವ ಮೇಜರ್ ಧ್ಯಾನ್‌ಚಂದ್ ೧೯೨೮ರ ಅಮ್‌ಸ್ಟೆರ್‌ಡ್ಯಾಮ್, ೧೯೩೨ರ ಲಾಸ್ ಏಂಜಲೀಸ್ ಮತ್ತು ೧೯೩೬ರ ಬರ್ಲಿನ್ ಒಲಂಪಿಕ್ಸ್‌ಗಳಲ್ಲಿ ಭಾರತ ಚಿನ್ನದ ಪದಕಗಳನ್ನು ಪಡೆಯುವಲ್ಲಿ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಆಗಸ್ಟ್ ೨೯, ೧೯೦೫ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ಜನಿಸಿದ ಧ್ಯಾನ್‌ಸಿಂಗ್ ತನ್ನ ತಂದೆಯಂತೆ ಸೈನಿಕರಾಗಿ ೧೯೨೨ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಾರೆ. ಸೇನೆಯಲ್ಲಿದ್ದರಿಂದ ಹಾಕಿ ಅಭ್ಯಾಸಕ್ಕೆ ಹಗಲು ಸಾಧ್ಯವಾಗದ ಕಾರಣ ರಾತ್ರಿಯ ವೇಳೆ ಚಂದಿರನ ಬೆಳದಿಂಗಳಲ್ಲಿ ಹಾಕಿ ಅಭ್ಯಾಸ ಮಾಡುತ್ತಿದ್ದರು. ಆದ್ದರಿಂದ ಇತರೆ ಸೈನಿಕರು ಅವರಿಗೆ ಚಂದ್ (ಚಂದಿರ) ಎಂದು ಕರೆಯುತ್ತಿದ್ದರು. ಅಲ್ಲಿಂದ ಅವರ ಹೆಸರು ಧ್ಯಾನ್‌ಚಾಂದ್ ಎಂದಾಯಿತು.
ಒಲಿಂಪಿಕ್ಸ್‌ನಲ್ಲಿ ಭಾಗವಹಿಸದ ಇಂಗೆಂಡ್: ೧೯೨೬ರಲ್ಲಿ ನ್ಯೂಜಿಲ್ಯಾಂಡ್ ಪ್ರವಾಸದ ಮೂಲಕ ವಿದೇಶದಲ್ಲಿ ಪ್ರಥಮ ಪಂದ್ಯವನ್ನು ಧ್ಯಾನ್‌ಚಂದ್ ಆಡಿದರು. ನ್ಯೂಜಿಲ್ಯಾಂಡಿನ ಪ್ರವಾಸದ ನಂತರ ಭಾರತ ತಂಡದ ಮತ್ತು ಧ್ಯಾನ್‌ಚಂದ್ ಕುರಿತು ಜಗತ್ತಿನಾದ್ಯಂತ ಪ್ರಸಿದ್ಧಿ ಹರಡಿತ್ತು. ೧೯೨೮ರಲ್ಲಿ ಒಲಿಂಪಿಕ್ಸ್ ಅಭ್ಯಾಸ ಪಂದ್ಯದಲ್ಲಿ ಭಾರತದ ಜೊತೆಗೆ ಇಂಗೆಂಡ್ ಹೀನಾಯವಾಗಿ ಸೋತು, ತನ್ನ ಅಧೀನದಲ್ಲಿರುವ ರಾಷ್ಟ್ರದ ವಿರುದ್ಧ ಜಗತ್ತಿನ ವೇದಿಕೆಯಲ್ಲಿ ಸೋಲಲಿಚ್ಛಿಸದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿತು ಮತ್ತು ೧೯೪೭ರವರೆಗೆ ತನ್ನ ತಂಡವನ್ನು ಒಲಂಪಿಕ್ಸಿಗೆ ಕಳುಹಿಸಲೇ ಇಲ್ಲ!
ನೂಜಿಲ್ಯಾಂಡ್ ಪ್ರವಾಸದ ೫ ದಶಕದ ನಂತರ: ೧೯೨೬ರ ಭಾರತದ ನ್ಯೂಜಿಲ್ಯಾಂಡ್ ಪ್ರವಾಸದ ೫ ದಶಕಗಳ ನಂತರ ಧ್ಯಾನ್‌ಚಂದ್ ಅವರ ಮಗ ಅಶೋಕ ಕುಮಾರ್ ನ್ಯೂಜಿಲ್ಯಾಂಡಿಗೆ ಹೋದಾಗ ಅನೇಕ ಹಾಕಿ ಕ್ಲಬ್‌ಗಳಿಗೆ ಭೇಟಿ ನೀಡಿದರು. ಅನೇಕ ಕ್ಲಬ್‌ಗಳಲ್ಲಿ ೧೯೨೬ರಲ್ಲಿ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಬಂದಿದ್ದ ಭಾರತ ಹಾಕಿ ತಂಡದ ಚಿತ್ರವಿತ್ತು! ಅಲ್ಲಿಗೆ ಅಶೋಕ್ ಕುಮಾರ್ ಅವರನ್ನು ಭೇಟಿ ಮಾಡಲು ಬಂದ ವ್ಯಕ್ತಿ ಅವರಿಗೆ ಮರದ ತುಂಡುಗಳನ್ನು ತೋರಿಸಿ ಅದರ ಕುರಿತು ತಿಳಿಸಿದ. ಆ ಮರದ ತುಂಡುಗಳು ೧೯೨೬ರ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಧ್ಯಾನ್‌ಚಂದ್ ಅವರ ತುಂಡಾದ ಹಾಕಿ ಸ್ಟಿಕ್‌ನದ್ದಾಗಿತ್ತು.!
೧೯೩೬ ಒಲಿಂಪಿಕ್ಸ್: ಬರ್ಲಿನ್ ಒಲಿಂಪಿಕ್ಸ್ ವೇಳೆಗೆ ದಂತಕಥೆಯಾಗಿದ್ದ ಧ್ಯಾನ್‌ಚಂದ್ ಅವರ ಆಟದ ವೈಖರಿಯ ಕುರಿತು ಪತ್ರಿಕೆಯೊಂದು ’ಒಲಿಂಪಿಕ್ ಕ್ರೀಡಾಕೂಟದಲ್ಲಿ ಇಂದ್ರಜಾಲದ ಪ್ರದರ್ಶನವೂ ನಡೆಯುತ್ತಿದೆ’ ಎಂದು ವರ್ಣಿಸಿತ್ತು. ಬರ್ಲಿನ್ ಒಲಿಂಪಿಕ್ಸ್‌ನ ಅಭ್ಯಾಸ ಪಂದ್ಯದಲ್ಲಿ ಭಾರತ ಜರ್ಮನಿಯ ವಿರುದ್ಧ ೪-೧ರಿಂದ ಸೋತಿತ್ತು! ಈ ಧೈರ್ಯದ ಮೇಲೆ ಮತ್ತೆ ಫೈನಲ್‌ನಲ್ಲಿ ಒಂದಾದ ಭಾರತ ಜರ್ಮನಿ ಪಂದ್ಯವನ್ನು ವೀಕ್ಷಿಸಲು ಹಿಟ್ಲರ್ ಸ್ವತಃ ಬಂದಿದ್ದನು. ಆದರೆ ಪಂದ್ಯ ಮುಗಿರುವ ಮುನ್ನ ಕ್ರೀಡಾಂಗಣದಿಂದ ತೆರಳಬೇಕಾಯಿತು! ಏಕೆಂದರೆ ಧ್ಯಾನ್‌ಚಂದ್ ಅವರ ೬ ಗೋಲುಗಳ ಸಹಕಾರರಿಂದ ಭಾರತ ೮-೧ ಗೋಲುಗಳಿಂದ ಜರ್ಮನಿಯನ್ನು ಸೋಲಿಸಿತ್ತು. ಪಂದ್ಯದ ಮಾರನೇ ದಿನ ಧ್ಯಾನ್‌ಚಂದ್ ಅವರನ್ನು ಆಹ್ವಾನಿಸಿದ ಹಿಟ್ಲರ್ ಭಾರತದಲ್ಲಿ ಲ್ಯಾನ್ಸ್ ನಾಯಕನಾಗಿದ್ದ ಅವರಿಗೆ ಜರ್ಮನಿಯ ಪೌರತ್ವವನಿತ್ತು, ಇಲ್ಲಿಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಪದವಿ ನೀಡಿ, ಆರ್ಥಿಕ ಸಹಕಾರವೂ ನೀಡುವ ಆಮಿಷ ಒಡ್ಡಿದನು. ಹಿಟ್ಲರ್ ಜಗತ್ತನ್ನು ಭಯಭೀತನಾಗಿಸಿದ ಸರ್ವಾಧಿಕಾರಿಯಾಗಿರಬಹುದು ಆದರೆ ಧ್ಯಾನ್‌ಚಂದ್ ಭಾರತೀಯ ಸೇನೆಯ ಸೈನಿಕ, ನನಗೆ ದೇಶ ಮೊದಲು ಎಂದು ಉತ್ತರಿಸಿ ಬಂದರು.
ಆತ್ಮವಿಶ್ವಾಸ ಚಿಲುಮೆ: ನ್ಯೂಜಿಲ್ಯಾಂಡ್ ಪ್ರವಾಸದ ಪಂದ್ಯದಲ್ಲಿ ಧ್ಯಾನ್‌ಚಾಂದ್ ಎರಡು ಬಾರಿ ಗೋಲುಗಳನ್ನು ಹೊಡೆಯಲು ಪ್ರಯತ್ನಿಸಿದಾಗ ಅದನ್ನು ತಡೆದ ಗೋಲ್‌ಕೀಪರ್‌ನನ್ನು ಕುರಿತು ನನ್ನ ಮುಂದಿನ ಗೋಲನ್ನು ನೀನು ತಡೆದರೆ ನಾನು ಹಾಕಿ ಆಡುವುದನ್ನೇ ಬಿಡುತ್ತೇನೆ ಎಂದಿದ್ದರು. ಮೂರನೇ ಬಾರಿಗೆ ಗೋಲ್‌ಕೀಪರ್‌ನ ತಲೆಯ ಮೇಲಿಂದಲೇ ಗೋಲನ್ನು ಹೊಡೆದರು! ಈ ಘಟನೆಯನ್ನು ನ್ಯೂಜಿಲ್ಯಾಂಡ್‌ಗೆ ಹೋಗಿದ್ದ ಧ್ಯಾನ್‌ಚಂದ್ ಅವರ ಮಗ ಅಶೋಕ್ ಕುಮಾರ್ ಅವರ ಬಳಿ ಆಗ ಗಾಲಿ ಕುರ್ಚಿಯಲ್ಲಿದ್ದ ಸ್ವತಃ ಆ ಗೋಲ್‌ಕೀಪರ್ ಹಂಚಿಕೊಂಡಿದ್ದರು.
ಹಾಕಿ ಪ್ರಿಯರ ಜೀವನಾಡಿ: ೧೯೪೭ರ ಹೊತ್ತಿಗೆ ಪ್ರಥಮ ದರ್ಜೆ ಹಾಕಿ ಆಟದಿಂದ ದೂರಸರಿದಿದ್ದ ಧ್ಯಾನ್‌ಚಂದ್ ಅವರು ಆಫ್ರಿಕಾದಲ್ಲಿ ನಡೆಯುವ ಪಂದ್ಯಕ್ಕೆ ಅಲ್ಲಿರುವ ಅವರ ಅಪಾರ ಅಭಿಮಾನಿಗಳಿಗಾಗಿ ಬರಲೇಬೇಕೆಂದು ಆಫ್ರಿಕಾದಿಂದಲೇ ಭಾರತೀಯ ಹಾಕಿ ಮಂಡಳಿಗೆ ಪತ್ರ ಬಂದಿತ್ತು. ಎಲ್ಲರ ಒತ್ತಾಯದ ಮೇರೆಗೆ ೪೩ರ ಹರೆಯದಲ್ಲೂ ಧ್ಯಾನ್‌ಚಂದ್ ತಂಡದ ನಾಯಕತ್ವ ವಹಿಸಿ ಆಫ್ರಿಕಾಗೆ ಹೋದರು. ೨೨ ಪಂದ್ಯಗಳಿಂದ ೬೧ ಗೋಲುಗಳನ್ನು ಹೊಡೆದರು!
ಕ್ರೀಡಾದಿನ: ಭಾರತದಲ್ಲಿ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವಾಗಿ ಆಚರಿಸಲಾಗುತ್ತದೆ. ಇತ್ತೀಚೆಗೆ ಅತ್ಯುತ್ತಮ ಕ್ರೀಡಾ ಪಟುವಿಗೆ ನೀಡಲಾಗುವ ಖೇಲ್‌ರತ್ನ ಪ್ರಶಸ್ತಿಗೆ ಅವರ ಹೆಸರಿಡಲಾಗಿದೆ. ಭಾರತದ ನಿಜವಾದ ಅನರ್ಘ್ಯ ರತ್ನವಾದ ಧ್ಯಾನ್‌ಚಂದ್ ಅವರ ನಾಲ್ಕು ಕೈ ಇರುವ ಪ್ರತಿಮೆಯನ್ನು ಅವರ ಆಟದ ವೈಖರಿಗೆ ಹಿಡಿದ ಕೈಗನ್ನಡಿಯಂತೆ ಆಸ್ಟ್ರಿಯಾದಲ್ಲಿ ನಿರ್ಮಿಸಲಾಗಿದೆ.