ನಮ್ಮನ್ನು ಅನುಸರಿಸಿ: Facebook Twitter Instagram YouTube

ಲೋಕಮಾನ್ಯ ಬಾಲಗಂಗಾಧರ ತಿಲಕ್

ಅಪ್‌ಲೋಡ್ ಮಾಡಿದ ದಿನಾಂಕ: 02-04-2026 13:40

ಲೋಕಮಾನ್ಯ ಬಾಲಗಂಗಾಧರ ತಿಲಕ್
ಭಾರತೀಯ ಮಾನಸದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಜನ್ಮಜಾತ ಹೋರಾಟಗಾರ, ಸಮಾಜ ಸುಧಾರಕ ಹಾಗೂ ವಿದ್ವಾಂಸ ಬಾಲಗಂಗಾಧರ ತಿಲಕರು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಮೊದಲನೇ ಜನಪ್ರಿಯ ನಾಯಕ. 

ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಹಳೆ ಊದಿದವರು ತಿಲಕರು. "ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ" ಎಂಬ ಘರ್ಜನೆ ಅಂದು ಜನಪ್ರಿಯವಾದದ್ದಷ್ಟೇ ಅಲ್ಲ, ಇಂದಿಗೂ ಜನ ಸಾಮಾನ್ಯರ ನೆನಪಿನಲ್ಲಿ ಹಸಿರಾಗಿದೆ. ‘ಲೋಕಮಾನ್ಯ’ (ಜನಗಳ ಪ್ರೀತಿ ಪಾತ್ರರು / ಗೌರವಕ್ಕೆ ಪಾತ್ರರಾದವರು) ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ತಿಲಕರು ಭಾರತದ ಇತಿಹಾಸ, ಸಂಸ್ಕೃತ, ಹಿಂದೂ ಧರ್ಮ, ಗಣಿತ ಹಾಗೂ ಖಗೋಳ ಶಾಸ್ತ್ರಗಳ ಆಳವಾದ ಅಧ್ಯಯನ ಮಾಡಿದ್ದರು.

ತಿಲಕರು ಹುಟ್ಟಿದ್ದು ೧೮೫೬ರ ಜುಲೈ ೨೩ರಂದು ಮಹಾರಾಷ್ಟ್ರದ ರತ್ನಾಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಚತುರ ವಿದ್ಯಾರ್ಥಿಯಾಗಿದ್ದ ತಿಲಕನಿಗೆ ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ ಕಾಲೇಜು ಶಿಕ್ಷಣ ಪಡೆದುಕೊಂಡ ಹೊಸ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು. ತಿಲಕರು ಸ್ಥಾಪಿಸಿದ ‘ಕೇಸರಿ’, ‘ಮರಾಠಿ’ ಪತ್ರಿಕೆಯು ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, ೧೯೦೫ರ ಬಂಗಾಳದ ವಿಭಜನೆಯ ವಿರೋಧವನ್ನು, ಸ್ವಾತಂತ್ರ್ಯ ಕಳೆದಿದ್ದ ಭಾರತೀಯ ನಾಗರಿಕರನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸಾಮ್ರಾಜ್ಯವನ್ನು ಅವರು ಕೇಸರಿಯ ಮಾಧ್ಯಮದಿಂದ ತೀವ್ರವಾಗಿ ಟೀಕಿಸುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ನೀಡಬೇಕೆಂದು ಅವರು ಪ್ರತಿಪಾದಿಸಿದರು. ೧೮೯೦ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ, ಬಹುಬೇಗ ಸ್ವಾತಂತ್ರ ಹೋರಾಟದಲ್ಲಿ ಅದರ ಸೌಮ್ಯವಾದಿ ಧೋರಣೆಯ ವಿರೋಧಕರಾದರು. ಗೋಪಾಲ ಕೃಷ್ಣ ಗೋಖಲೆಯವರ ಸೌಮ್ಯವಾದಿ ನೀತಿಯ ಕಟು ಟೀಕಾಕಾರರಾದರು. ಇದರಲ್ಲಿ ತಿಲಕರಿಗೆ ಬಂಗಾಳದ ಬಿಪಿನ್ ಚಂದ್ರ ಪಾಲ್ ಹಾಗೂ ಪಂಜಾಬಿನ ಲಾಲಾ ಲಜಪತ ರಾಯ್‌ರ ಬೆಂಬಲವಿತ್ತು. ೧೯೦೭ರಲ್ಲಿ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ ತಿಲಕ್, ಪಾಲ್ ಹಾಗೂ ರಾಯ್ ನೇತೃತ್ವದಲ್ಲಿ ‘ಗರಂ ದಳ‘ (ಬಿಸಿ ಗುಂಪು) ಹಾಗೂ ಗೋಖಲೆಯವರ ನೇತ್ಳತ್ವದಲ್ಲಿ ‘ನರಂ ದಳ’ (ಮೆದು ಗುಂಪು) ಎಂದು ಇಬ್ಭಾಗವಾಯಿತು.

ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಅರಿವು ಮಾಡಿಕೊಟ್ಟು, ಅವರ ಸ್ಮೃತಿಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು. ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ. ೧೯೨೦ರಲ್ಲಿ ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ೨ಲಕ್ಷ ಜನರಲ್ಲಿ ಒಬ್ಬರಾದ ಮಹಾತ್ಮಾ ಗಾಂಧಿಯವರು ತಿಲಕರನ್ನು ‘ಆಧುನಿಕ ಭಾರತದ ಜನಕ’ ಎಂದು ಬಣ್ಣಿಸಿದರು.

೧೯೦೩ರಲ್ಲಿ ತಿಲಕರು ಗ್ರಂಥವನ್ನು ಬರೆದು, ಅದರಲ್ಲಿ, ಖಗೋಳಶಾಸ್ತ್ರದ ಆಧಾರದ ಮೇಲೆ, ವೇದಗಳನ್ನು ಧ್ರುವ ಪ್ರದೇಶಗಳಲ್ಲಿ ಮಾತ್ರವೇ ಸೃಷ್ಟಿಸಿರಲು ಸಾಧ್ಯ ಎಂದು ವಾದಿಸುತ್ತಾರೆ. ಕೊನೆಯ ಮಂಜಿನ ಯುಗ ಶುರುವಾದ ಮೇಲೆ ಅಲ್ಲಿಂದ ದಕ್ಷಿಣದ ಕಡೆ ಸಾಗಿದ ಆರ್ಯರ ಮೂಲಕ ಅದು ದಕ್ಷಿಣ ದೇಶಗಳನ್ನು ಮುಟ್ಟಿತು ಎಂದೂ ಅವರು ಪ್ರತಿಪಾದಿಸುತ್ತಾರೆ. ವೇದಗಳ ಪ್ರಾಚೀನತೆಯ ಸಂಶೋಧನೆಗಳು ಎಂಬ ಪುಸ್ತಕದಲ್ಲಿ ವೇದ ಕಾಲದ ಜನರು ಕ್ರಿ.ಪೂ. ೪ನೆಯ ಸಹಸ್ರಮಾನದಷ್ಟು ಹಿಂದೆಯೇ ಭಾರತದಲ್ಲಿ ನೆಲೆಸಿದ್ದರು ಎಂದು ಖಗೋಳಶಾಸ್ತ್ರದ ಆಧಾರದ ಮೇಲೆ ಪ್ರತಿಪಾದಿಸುತ್ತಾರೆ. ತಿಲಕರ ‘ಗೀತಾರಹಸ್ಯ ಅಥವಾ ಜೀವನಧರ್ಮ ಯೋಗ’ ಎಂಬ ಭಗವದ್ಗೀತೆಯ ತಾತ್ಪರ್ಯವು ಬಹಳ ಪ್ರಸಿದ್ಧವಾದ ಕೃತಿ.


⬅ ಮುಖಪುಟ