ಬಾಳಾಸಾಹೇಬ್ ದೇವರಸ್ ಎಂದೇ ಜನಪ್ರಿಯರಾಗಿದ್ದ ಮಧುಕರ ದತ್ತಾತ್ರೇಯ ದೇವರಸ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೆಯ ಸರಸಂಘಚಾಲಕರು.
ಬಾಳಾಸಾಹೇಬರು ಡಿಸೆಂಬರ್ ೧೫, ೧೯೧೫ ರಂದು ನಾಗ್ಪುರದಲ್ಲಿ ಜನಿಸಿದರು. ಅವರು ದತ್ತಾತ್ರೇಯ ಕೃಷ್ಣರಾವ್ ದೇವರಸ್ ಮತ್ತು ಪಾರ್ವತಿಬಾಯಿ ಅವರ ಎಂಟನೇ ಮಗು. ಇವರ ಕಿರಿಯ ಸಹೋದರ ಭಾವೂರಾವ್ ದೇವರಸ್(ಮುರುಳೀಧರ) ಸಹ ಆರ್.ಎಸ್.ಎಸ್. ಪ್ರಚಾರಕರಾಗಿದ್ದರು. ೧೯೨೫ ರಲ್ಲಿ ಸಂಘದ ಸ್ಥಾಪನೆಯಾಗುವ ವೇಳೆಗೆ, ದೇವರಸ್ ಕುಟುಂಬವು ನಾಗ್ಪುರದ ಇಟ್ವಾರಿ ಮೊಹಲ್ಲಾಕ್ಕೆ ಸ್ಥಳಾಂತರಗೊಂಡಿತು. ಮೊದಲ ಶಾಖೆಗೆ ಸೇರಿದಾಗ ಬಾಳಾಸಾಹೇಬರು ಆರನೇ ತರಗತಿಯಲ್ಲಿ ಓದುತ್ತಿದ್ದರು . ಬಾಳಾಸಾಹೇಬರು ೧೯೩೮ ರಲ್ಲಿ ನಾಗ್ಪುರದ ಮೋರಿಸ್ ಕಾಲೇಜಿನಿಂದ ಪದವಿ ಪಡೆದರು ಮತ್ತು ನಾಗ್ಪುರ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಲಾ ದಲ್ಲಿ ತಮ್ಮ ಎಲ್ ಎಲ್ ಬಿ ಪದವಿ ಪಡೆದರು. ಸಂಘಸ್ಥಾಪಕ ಡಾ. ಕೇಶವರಾವ್ ಬಲಿರಾಂಪಂತ್ ಹೆಡ್ಗೇವಾರ್ ಅವರ ನೇರ ಸಂಪರ್ಕದಿಂದ ಸ್ಫೂರ್ತಿ ಪಡೆದ ಅವರು, ತಮ್ಮ ಜೀವನವನ್ನು ಸಂಘಟನೆಗಾಗಿ ಅರ್ಪಿಸಲು ನಿರ್ಧರಿಸಿದರು.
ಬಾಲ್ಯದಿಂದಲೇ ಸಂಘದ ಸ್ವಯಂಸೇವಕರಾಗಿದ್ದ ಬಾಳಾಸಾಹೇಬ್, ಕುಶ ಪಥಕ - ಬಾಲಕರ ಗುಂಪಿನ ಸದಸ್ಯರಾಗಿದ್ದರು. ತನ್ನ ಓರಗೆಯ ಹಲವು ಬಾಲಕರನ್ನು ಸಂಘದ ಶಾಖೆಗೆ ಕರೆತಂದರು. ಡಾ. ಹೆಡ್ಗೇವಾರ್ ಅವರ ಮಾರ್ಗದರ್ಶನದಿಂದ ಕುಶ ಪಥಕದ ಎಲ್ಲ್ಲಾ ಬಾಲಕರು ಮುಂದೆ ಸಂಘದ ಪ್ರಚಾರಕರಾಗಿ ತಮ್ಮ ಜೀವನವನ್ನೇ ಸಂಘ ಕಾರ್ಯಕ್ಕೆ ಮುಡಿಪಾಗಿಟ್ಟರು. ಬಾಳಾಸಾಹೇಬರು ಬಂಗಾಲ ಪ್ರಾಂತದ ಮೊದಲ ಸಂಘ ಪ್ರಚಾರಕರಾಗಿದ್ದರು. ನಂತರ ನಾಗಪುರದಲ್ಲಿನ ಮರಾಠಿ ಪತ್ರಿಕೆ ತರುಣ್ ಭಾರತ್ ಮತ್ತು ಹಿಂದಿ ದಿನಪತ್ರಿಕೆಯಾದ ಯುಗಧರ್ಮದ ಪ್ರಕಟಣೆಯ ಜವಾಬ್ದಾರಿ ವಹಿಸಿಕೊಂಡರು. ೧೯೬೫ರಲ್ಲಿ ಆರ್‌ಎಸ್‌ಎಸ್‌ನ ಪ್ರಧಾನ ಸರಕಾರ್ಯವಾಹರಾದರು. ಆರ್‌ಎಸ್‌ಎಸ್‌ನ ಎರಡನೆಯ ಮುಖ್ಯಸ್ಥರಾಗಿದ್ದ ಎಂ.ಎಸ್. ಗೋಳ್ವಾಲ್ಕರ್ ಅವರ ನಿಧನದ ನಂತರ, ಬಾಳಾಸಾಹೇಬ್ ದೇವರಸ್ ೧೯೭೩ ರಲ್ಲಿ ಆರ್‌ಎಸ್‌ಎಸ್‌ನ ಸರಸಂಘಚಾಲಕರಾದರು. ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸ್ವಯಂಸೇವಕರು ಕಾರ್ಯನಿರ್ವಹಿಸುವ ದಿಕ್ಕಿನಲ್ಲಿ ಬಾಳಾಸಾಹೇಬರು ಹೆಚ್ಚಿನ ಆಸಕ್ತಿ ಹೊಂದಿದ್ದರು. ಸೇವಾ ಚಟುವಟಿಕೆ, ಅಸ್ಪೃಶ್ಯತೆ ನಿವಾರಣೆಯಂಥ ಕಾರ್ಯಗಳಲ್ಲಿ ಸ್ವಯಂಸೇವಕರು ಹೆಚ್ಚಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತಿದ್ದರು.
೧೯೭೫ ರಲ್ಲಿ ಅಂದಿನ ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ ಸಂಘಕ್ಕೆ ನಿಷೇಧ ಹೇರಿದರು. ಒISಂ ನಂತಹ ಕರಾಳ ಕಾನೂನುಗಳ ಅಡಿಯಲ್ಲಿ ಸಾವಿರಾರು ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಜೈಲಿನಲ್ಲಿರಿಸಲಾಯಿತು ಮತ್ತು ಹಿಂಸಿಸಲಾಯಿತು. ಬಾಳಾಸಾಹೇಬರ ಪ್ರೇರಣೆ ಮತ್ತು ಯಶಸ್ವಿ ಮಾರ್ಗದರ್ಶನದಲ್ಲಿ ಬೃಹತ್ ಸತ್ಯಾಗ್ರಹ ನಡೆಯಿತು. ಇದೇ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರ ನೇತೃತ್ವದ ತುರ್ತು ಪರಿಸ್ಥಿತಿ ವಿರೋಧಿ ಚಳುವಳಿಯಾದ "ಜೆಪಿ ಚಳವಳಿ" ಗೆ ಆರ್‌ಎಸ್‌ಎಸ್ ನ ಬೆಂಬಲ ಘೋಷಿಸಿದರು. ೧೯೭೭ ರಲ್ಲಿ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು ಮತ್ತು ಸಂಘದ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು. ತುರ್ತುಪರಿಸ್ಥಿತಿಯ ನಂತರ ಬಾಳಾಸಾಹೇಬರು ಜೈಲಿನಿಂದ ಹೊರಬಂದ ತಕ್ಷಣ, ಅವರ ಸಂದೇಶವು ಸ್ಪಷ್ಟವಾಗಿತ್ತು - ಸೇಡಿನ ಮನೋಭಾವ ಇರಬಾರದು. ಗೆಲುವಿನ ಶ್ರೇಯವನ್ನು ಆರ್‌ಎಸ್‌ಎಸ್‌ಗೆ ನೀಡಲಾಗಿದೆ. ನಾವು ದೊಡ್ಡ ಹೃದಯವಂತರಾಗುವ ಸಮಯ ಬಂದಿದೆ. ನಮ್ಮನ್ನು ಚೆನ್ನಾಗಿ ನಡೆಸಿಕೊಳ್ಳದವರ ಹೃದಯದಲ್ಲಿ ನಾವು ಬದಲಾವಣೆಯನ್ನು ತರಬೇಕಾಗಿದೆ ಎಂದು ಅವರು ಮಾರ್ಚ್ ೧೯೭೭ ರಲ್ಲಿ ನಾಗ್ಪುರದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಹೇಳಿದರು.
ಬಾಳಾಸಾಹೇಬ್ ದೇವರಸರು, ಸಾವರ್ಕರ್ ನೀಡಿದ ಹಿಂದುತ್ವದ ವ್ಯಾಖ್ಯೆ "ನಾವು ಒಂದು ಸಂಸ್ಕೃತಿ ಮತ್ತು ಒಂದು ರಾಷ್ಟ್ರ ಹಿಂದೂ ರಾಷ್ಟ್ರವನ್ನು ನಂಬುತ್ತೇವೆ. ಆದರೆ ಹಿಂದೂಗಳ ನಮ್ಮ ವ್ಯಾಖ್ಯಾನವು ಯಾವುದೇ ನಿರ್ದಿಷ್ಟ ರೀತಿಯ ನಂಬಿಕೆಗೆ ಸೀಮಿತವಾಗಿಲ್ಲ. ಹಿಂದೂಗಳ ನಮ್ಮ ವ್ಯಾಖ್ಯಾನವು ಒಂದು ಸಂಸ್ಕೃತಿಯಲ್ಲಿ ನಂಬಿಕೆ ಇಡುವವರನ್ನು ಒಳಗೊಂಡಿದೆ ಮತ್ತು ಎಲ್ಲರೂ ಹಿಂದೂ-ರಾಷ್ಟ್ರದ ಭಾಗವಾಗಬಹುದು. ನಾವು ಹಿಂದೂ ಪದವನ್ನು ವಿಶಾಲ ಅರ್ಥದಲ್ಲಿ ಬಳಸುತ್ತೇವೆ." ಇದನ್ನು ಬೆಂಬಲಿಸಿದ್ದರು.
೧೯೭೪ ರ ಮೇ ತಿಂಗಳಲ್ಲಿ ಪುಣೆಯಲ್ಲಿ ಏರ್ಪಡಿಸಿದ್ದ ವಸಂತ ವ್ಯಾಖ್ಯಾನ ಮಾಲಾ ಎಂಬ ಉಪನ್ಯಾಸ ಮಾಲೆಯ ವೇದಿಕೆಯಿಂದ ನೀಡಿದ ಒಂದು ಪ್ರಮುಖ ಭಾಷಣದಲ್ಲಿ, ದೇವರಸ್‌ರು ಅಸ್ಪೃಶ್ಯತೆಯ ಆಚರಣೆಯನ್ನು ಖಂಡಿಸಿದರು ಮತ್ತು ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ಅಸ್ಪೃಶ್ಯತೆಯ ಪಿಡುಗನ್ನು ತೆಗೆದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಮನವಿ ಮಾಡಿದರು. ಇದೇ ಭಾಷಣದಲ್ಲಿ ಬಾಳಾಸಾಹೇಬರು : ಅಸ್ಪೃಶ್ಯತೆ ಪಾಪವಲ್ಲವಾದರೆ ಜಗತ್ತಿನಲ್ಲಿ ಯಾವುದೂ ಪಾಪವಲ್ಲ ಎಂದು ಉದ್ಗರಿಸಿದ್ದರು. ಸರಸಂಘಚಾಲಕರ ಈ ಕರೆಯಿಂದ ಸ್ಫೂರ್ತಿಗೊಂಡ ಸಂಘದ ಸ್ವಯಂಸೇವಕರು ಹೊಸ ಹುರುಪಿನೊಂದಿಗೆ ಜಾತಿ ಆಧಾರಿತ ತಾರತಮ್ಯದ ಭೂತದ ವಿರುದ್ಧ ಹೋರಾಡಲು ಕಾರಣವಾಯಿತು. ಸರಸಂಘಚಾಲಕರಾಗಿ ೨೧ ವರ್ಷಗಳ ಕಾಲ ಜವಾಬ್ದಾರಿ ನಿರ್ವಹಿಸಿದ ಬಾಳಾಸಾಹೇಬರು ಜಾತಿ ಆಧಾರಿತ ತಾರತಮ್ಯ ಮತ್ತು ಅಸ್ಪೃಶ್ಯತೆ ವಿರುದ್ಧ ಪಟ್ಟುಬಿಡದೆ ಪ್ರಚಾರ ಮಾಡಿದರು. ೧೯೯೧ ರಲ್ಲಿ ಸ್ಥಾಪನೆಯಾದ ಸ್ವದೇಶಿ ಜಾಗರಣ ಮಂಚ್ ಬಾಳಾಸಾಹೇಬರ ಮೆದುಳಿನ ಕೂಸು. ಇದು ಸ್ವದೇಶಿಯತೆಯನ್ನು ರಕ್ಷಿಸುವಲ್ಲಿ ಮತ್ತು ಸ್ವದೇಶಿ ಜಾಗೃತಿಯನ್ನು ಮೂಡಿಸುವ ಕಾರ್ಯನಿರ್ವಹಿಸುತ್ತಿದೆ.