‘ಕನ್ನಡ ಸಣ್ಣಕತೆಗಳ ಪಿತಾಮಹ’, ‘ಕನ್ನಡದ ಆಸ್ತಿ’ ಎಂದೇ ಪ್ರಸಿದ್ಧರಾದ ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಾಹಿತ್ಯದ ಸರ್ವಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ. ತಮ್ಮ ಉನ್ನತ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕನ್ನಡ ನಾಡು ನುಡಿಯ ಉತ್ಕರ್ಷಕ್ಕೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಜ್ಞಾನಪೀಠ ಪ್ರಶಸ್ತಿ ವಿಜೇತರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದ್ದರು.
ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ ೬, ೧೮೯೧ರಲ್ಲಿ ಜನಿಸಿದರು. ಮೆಟ್ರಿಕ್ಯುಲೇಷನ್ (೧೯೦೭), ಎಫ್ ಎ (೧೯೦೯), ಬಿ ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ. ಎ (ಮದರಾಸು ವಿಶ್ವವಿದ್ಯಾಲಯ ೧೯೧೪) ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ೧೯೧೪ ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೧೪ರಿಂದ ೧೯೪೩ ರವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು. ೧೯೨೩ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ - ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ೧೯೮೩ರಲ್ಲಿ ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನ ಕುರಿತು ಬರೆದ ‘ಚಿಕ್ಕವೀರ ರಾಜೇಂದ್ರ’ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟರು. ಜೀವನ ಪಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ ೬ ೧೯೮೬ರಂದು ನಿಧನ ಹೊಂದಿದರು.
ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ‘ಪೆರಿಯಾತ್’ (ದೊಡ್ಡ) ಕುಟುಂಬ ಮಾಸ್ತಿಯವರದ್ದಾದರೂ ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿ ಗಳಿಸಿದರು. ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ. ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ. ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮ ಸ್ಥಾನಿಯಾಗಿ ತೇರ್ಗಡೆಯಾದರು. ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಷನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು. ಇದರೊಂದಿಗೆ ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು.
೨೦ನೆಯ ಶತಮಾನದ ಆರಂಭದಲ್ಲಿ ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರದ ಕಾಲದಲ್ಲಿ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಮಾಸ್ತಿಯವರು ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು. ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ೧೯೧೦ರಲ್ಲಿ ಬರೆದ ‘ರಂಗನ ಮದುವೆ’ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ ‘ಮಾತುಗಾರ ರಾಮಣ್ಣ’ ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩. ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, ‘ಜೀವನ’ ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. ಕನ್ನಡ ಸಣ್ಣಕಥೆಗಳ ಪಿತಾಮಹ ಎನಿಸಿರುವ ಮಾಸ್ತಿಯವರು ‘ಮೊಸರಿನ ಮಂಗಮ್ಮ’, ‘ವೆಂಕಟಿಗನಹೆಂಡತಿ’, ‘ರಂಗಪ್ಪನದೀಪಾವಳಿ’, ‘ಸುಬ್ಬಣ್ಣ’, ‘ವೆಂಕಟಸಾಮಿಯ ಪ್ರಣಯ’ ಮೊದಲಾದ ೭೦ಕ್ಕೂ ಅಧಿಕ ಕಥೆಗಳನ್ನು ಬರೆದಿದ್ದಾರೆ. ಜತೆಗೆ ‘ರಾಮನವಮಿ’, ‘ಗೌಡರಮಲ್ಲಿ’, ‘ನವರಾತ್ರಿ’ ಮುಂತಾದ ಕಥನ ಕವನಗಳು, ಬಿನ್ನಹ, ಅರುಣ, ತಾವರೆ, ಮಲಾರ, ಮನವಿ, ಚೆಲವು ಮುಂತಾದ ಕವನ ಸಂಕಲನಗಳು, ಶಾಂತಾ, ತಿರುಪಾವಿ, ಕನಕಣ್ಣ, ಶಿವಛತ್ರಪತಿ, ಯಶೋಧರ, ಮಾಸತಿ, ಅನಾರ್ಕಳಿ, ಪುರಂದರದಾಸ, ಕಾಕನಕೋಟೆ ಮುಂತಾದ ನಾಟಕಗಳು, ಭಾರತತೀರ್ಥ,ಆದಿಕವಿವಾಲ್ಮೀಕಿ ಮುಂತಾದ ಪ್ರಬಂಧಗಳನ್ನು ಬರೆದಿದ್ದಾರೆ. ಷೇಕ್ಸ್‌ಪೀಯರನ ನಾಟಕಗಳಾದ ಕಿಂಗ್‌ಲಿಯರ್, ದಿ ಟೆಂಪೆಸ್ಟ್, ಟ್ವೆಲ್ ಫತ್ ನೈಟ್, ಹ್ಯಾಮ್ಲೆಟ್‌ಗಳನ್ನು ಕನ್ನಡಕ್ಕೆ ತಂದ ಕೀರ್ತಿ ಮಾಸ್ತಿಯವರಿಗೆ ಸಲ್ಲುತ್ತದೆ. ಇತರ ಕೃತಿಗಳು - ಚಿತ್ರಾಂಗದಾ(ಠಾಕೂರರ ಕೃತಿ), ಬಿಜ್ಜಳರಾಯ ಚರಿತ್ರೆ (ಧರಣಿ ಪಂಡಿತನ ಕೃತಿ) ಬಸವಣ್ಣನ ವಚನಗಳನ್ನು ಆಂಗ್ಲಭಾಷೆಗೆ ಅನುವಾದ ಮಾಡಿದ್ದಾರೆ. ಅವರ ಒಂದು ಸಣ್ಣ ಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು. ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ.
ಮಾಸ್ತಿ ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. ‘ಭಾರತತೀರ್ಥ’, ‘ಆದಿಕವಿ ವಾಲ್ಮೀಕಿ’ ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ ‘ಶ್ರೀರಾಮ ಪಟ್ಟಾಭಿಷೇಕ’ ಅವರ ಒಂದು ಕಾವ್ಯ. ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ ಮಾಸ್ತಿ ಬರೆರಿದ್ದಾರೆ. ಮಾಸ್ತಿಯವರು ‘ಜೀವನ’ ಎಂಬ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಯನ್ನು ಆರಂಭಿಸಿ ಸುಮಾರು ೩೦ ವರ್ಷಗಳ ಕಾಲ ಅದರ ಸಂಪಾದಕರಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಿದ್ದಾರೆ. ಇದೇ ‘ಜೀವನ’ ಪತ್ರಿಕೆಯಲ್ಲಿ ಅವರು ಬರೆದ ಲೇಖನಗಳು ‘ಸಂಪಾದಕೀಯ’ ಎಂಬ ಹೆಸರಿನಲ್ಲಿ ಐದು ಭಾಗಗಳಾಗಿ ಪ್ರಕಟವಾಗಿವೆ. ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. ‘ಮಾಸ್ತಿ ಕನ್ನಡದ ಆಸ್ತಿ’ ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ. ಎಲ್ಲ ಸಾಹಿತಿಗಳಿಗೂ ಅವರು ‘ಅಣ್ಣ ಮಾಸ್ತಿ’ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು. ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಮೈಸೂರು ಮಹಾರಾಜರು ‘ರಾಜಸೇವಾ ಪ್ರಸಕ್ತ’ ಎಂದು ಗೌರವಿಸಿದ್ದರು. ೧೯೭೨ರಲ್ಲಿ ‘ಶ್ರೀನಿವಾಸ’ ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು. ೧೯೯೩ ರಿಂದ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ’ ಅನ್ನು ವಾರ್ಷಿಕವಾಗಿ ಕರ್ನಾಟಕದ ಹೆಸರಾಂತ ಬರಹಗಾರರಿಗೆ ನೀಡಲಾಗುತ್ತಿದೆ, ಇದು ಅವರ ನಿರಂತರ ಪರಂಪರೆಗೆ ಸಾಕ್ಷಿಯಾಗಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ಸಮೃದ್ಧ ಬರಹಗಾರರಾಗಿದ್ದರು. ಅವರು ಸಾಂಪ್ರದಾಯಿಕ ವಿಷಯಗಳನ್ನು ಆಧುನಿಕ ತಂತ್ರಗಳೊಂದಿಗೆ ಬೆರೆಸಿ, ಆಕರ್ಷಣೀಯ ಮತ್ತು ಚಿಂತನೆಗೆ ಪ್ರೇರೇಪಿಸುವ ಕೃತಿಗಳನ್ನು ರಚಿಸುವಲ್ಲಿ ನಿಪುಣರಾಗಿದ್ದರು. ಅವರ ಬರವಣಿಗೆಯ ಶೈಲಿಯು ಅನನ್ಯ, ಆಕರ್ಷಕ ಮತ್ತು ಅಧಿಕೃತವಾಗಿದ್ದು, ಅವರನ್ನು ಅವರ ಕಾಲದ ಅತ್ಯಂತ ಪ್ರೀತಿಯ ಬರಹಗಾರರಲ್ಲಿ ಒಬ್ಬರನ್ನಾಗಿ ಮಾಡಿತು.