ನಮ್ಮನ್ನು ಅನುಸರಿಸಿ: Facebook Twitter Instagram YouTube

ಡಾ.ಟಿ.ಎಂ.ಎ.ಪೈ

ಅಪ್‌ಲೋಡ್ ಮಾಡಿದ ದಿನಾಂಕ: 02-04-2026 13:31

ಡಾ.ಟಿ.ಎಂ.ಎ.ಪೈ
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎನ್ನುವ ಪರಿಕಲ್ಪನೆ ಕೇವಲ ಪುಸ್ತಕ, ಭಾಷಣಗಳಿಗೆ ಸೀಮಿತವಾಗಿದ್ದರೆ ಸಾಮಾಜಿಕ ಪರಿವರ್ತನೆ ಆಗಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯದ ಕನಸನ್ನು ಪ್ರಾಯೋಗಿಕವಾಗಿ ತನ್ನ ನುಡಿ ಹಾಗೂ ನಡೆಗಳಲ್ಲಿ  ದಿನನಿತ್ಯ ನಡೆಸಿದರೆ ಅಂತಹ ವ್ಯಕ್ತಿಗಳು ಮಹಾನ್ ಎನ್ನಿಸುವರು. ನಮ್ಮ ಸಂಸ್ಕೃತಿ ವ್ಯಕ್ತಿ ಪೂಜನಕ್ಕೆ ಅಷ್ಟೇನು ಮಹತ್ವ ಕೊಡದಿದ್ದರೂ,  ಒಬ್ಬ ವ್ಯಕ್ತಿಯನ್ನು ಅವರ ಸಾಮಾಜಿಕ ಕಾರ್ಯ, ಸಾಧನೆ , ಸ್ಪೂರ್ತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಹೃದಯಾಂತರಾಳದಲ್ಲಿ ಸ್ಥಿರಗೊಳಿಸಲು ನೆನಪಿಸುವ ಕಾರ್ಯ ಮಾಡಲಾಗುತ್ತದೆ. ಅಂತಹ ಒಬ್ಬ ದೂರದೃಷ್ಟಿಯುಳ್ಳ ನಾಯಕನ ಜನ್ಮದಿನವನ್ನು ನೆನಪಿಸಬೇಕಾಗಿದೆ. ಅವರು ಮತ್ಯಾರೂ ಅಲ್ಲ, ಕರಾವಳಿಯ ಡಾ.ಟಿ.ಎಂ.ಎ.ಪೈ ಅಂತಲೇ ಪ್ರಸಿದ್ಧಿಗೊಂಡಿರುವ ಡಾ. ತೋನ್ಸೆ ಮಾಧವ ಅನಂತ ಪೈ.

ಡಾ.ಟಿ.ಎಂ.ಎ.ಪೈ ಅವರು ಈಗಿನ ಉಡುಪಿ ಜಿಲ್ಲೆಯ ಕಲ್ಯಾಣಪುರದಲ್ಲಿ ೧೮೯೮ ಏಪ್ರಿಲ್ ೩೦ ರಂದು ಜನಿಸಿದರು. ಬಾಲ್ಯದಿಂದಲೇ ಅತ್ಯಂತ ದೃಢ ಸಂಕಲ್ಪ ಹಾಗೂ ಶ್ರದ್ಧೆಯಿಂದ ಓದಿ ಮದ್ರಾಸ್ ವೈದಕೀಯ ಕಾಲೇಜಿನಿಂದ ೧೯೨೫ ರಲ್ಲಿ ಎಂಬಿಬಿಎಸ್ ಪದವಿ ಪಡೆದರು.ಎಲ್ಲಾ ಸಮುದಾಯ ಸಹಭಾಗಿತ್ವವಿಲ್ಲದೆ ಸಮಾಜದ ಪರಿವರ್ತನೆ ಸಾಧ್ಯವಿಲ್ಲವಿಂದು ಮನಗಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಜೊತೆಗೂಡಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟರು. ತನ್ನ ಗ್ರಾಮೀಣ ಭಾಗದ ಜನರಿಗೆ ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿಗೆ ಮುನ್ನಡಿಯಿಟ್ಟು ಭಾರತ ಅಭಿವೃದ್ಧಿ ಹೊಂದಲು ಸೂಕ್ತವಾದ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕೆಂಬ ಉದ್ದೇಶದಿಂದ ಕೈತುಂಬ ಹಣ ಸಿಗುವ ಉದ್ಯೋಗಕ್ಕೆ ಸೇರದೆ ಕರಾವಳಿಯ ಕಲ್ಲಿನಿಂದ ಕೂಡಿದ ಬರಡು ಭೂಮಿಯಲ್ಲಿ  "ಖಿhe ಂಛಿಚಿಜemಥಿ oಜಿ ಉeಟಿeಡಿಚಿಟ ಇಜuಛಿಚಿಣioಟಿ" ಅನ್ನು ೧೯೪೨ರಲ್ಲಿ ಸ್ಥಾಪಿಸಿದರು. ಅನಂತರ ಮಣಿಪಾಲ್ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮಣಿಪಾಲ್ ಹಿರಿಯ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿ ಸ್ಥಳೀಯ ಮಕ್ಕಳನ್ನು ಶಾಲೆಯ ಮೆಟ್ಟಿಲನ್ನು ಹತ್ತಿಸಿದರು. ಮುಂದುವರೆಯುತ್ತಾ ೧೯೪೯ರಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜನ್ನು ಉಡುಪಿಯಲ್ಲಿ ಸ್ಥಾಪಿಸಿದರು.

ಶಿಕ್ಷಣದ ಜೊತೆಗೆ ವೈದಕೀಯ ಶಿಕ್ಷಣ ಮತ್ತು ವೈದಕೀಯ ವ್ಯವಸ್ಥೆಯು ಕರಾವಳಿ ಭಾಗದಲ್ಲಿ ಇರಲೇಬೇಕಾದ ಅಗತ್ಯತೆಯನ್ನು ಗಮನಿಸಿ ೧೯೫೩ ರಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಹಾಗೂ ದೇಶದ ಮೊದಲ ಮಿಷನರಿ ಅಲ್ಲದ ಖಾಸಗಿ ವೈದ್ಯಕೀಯ ಕಾಲೇಜು ಮಣಿಪಾಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಅನ್ನು ಸೇವೆಯ ಆಧಾರದ ಮೇಲೆ ಸ್ಥಾಪಿಸಿದರು. ಅದರ ನಂತರ ಸಾಲು ಸಾಲು ಸಂಸ್ಥೆಗಳಾದ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಮತ್ತು ಮಣಿಪಾಲ್ ಪ್ರಿ-ಯೂನಿವರ್ಸಿಟಿ ಕಾಲೇಜು ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳ ಸರಣಿಯನ್ನು ಸ್ಥಾಪಿಸಿದರು. ಹೀಗೆ ಮಣಿಪಾಲವನ್ನು ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳಲು ಶ್ರಮಿಸಿದರು.
 
ಇಷ್ಟಕ್ಕೆ ದಣಿಯದೆ ಮುಂದೆ ತಮ್ಮ ಸಹೋದರ ಉಪೇಂದ್ರ ಅನಂತ್ ಪೈ ಜೊತೆಗೆ,  ಉಡುಪಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಅನ್ನು ಸ್ಥಾಪಿಸಿ ಕರಾವಳಿಯ ಮನೆ ಮನೆಗೆ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸಿದರು. ಡಾ. ಪೈ ಅವರು ೧೯೨೮ ರಲ್ಲಿ ಜನರಲ್ಲಿ ಉಳಿತಾಯ ಅಭ್ಯಾಸವನ್ನು ಉತ್ತೇಜಿಸಲು ಪಿಗ್ಮಿ ಠೇವಣಿ ಸಂಗ್ರಹವನ್ನು ಪ್ರಾರಂಭಿಸಿದರು. ಹೀಗೆ ಶಿಕ್ಷಣ, ಆರೋಗ್ಯ ಹಾಗೂ ಬ್ಯಾಂಕಿಂಗ್‌ನಲ್ಲಿ ಸ್ವಸಹಾಯವೇ ಅತ್ಯುತ್ತಮ ಸಹಾಯ ಎನ್ನುವ ತತ್ವದ ಅಡಿಯಲ್ಲಿ ಕರಾವಳಿ ಭಾಗದ ಜನರಲ್ಲಿ ಸ್ವಾಭಿಮಾನ ತುಂಬಿ ಮುಂದೆ ಕರ್ನಾಟಕವನ್ನು ಹಾಗೂ ಭಾರತವನ್ನು ವಿಶ್ವದರ್ಜೆಯ ಆರೋಗ್ಯ - ಶಿಕ್ಷಣ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿಸಿದ ಖ್ಯಾತಿ ಡಾ.ಪೈ ಅವರದ್ದು.
 
ಅವರೇ ಹೇಳಿದಂತೆ "ನನ್ನ ತತ್ತ್ವಶಾಸ್ತ್ರವು ಸೇವೆಯಾಗಿದೆ-ಒಬ್ಬರ ಕುಟುಂಬ, ಸ್ನೇಹಿತರು ಮತ್ತು ಪ್ರಪಂಚದ ಎಲ್ಲಾ ಜನರಿಗೆ ದೇವರ ಒಂದು ದೊಡ್ಡ ಕುಟುಂಬ. ನೀವು ಸಾಮಾನ್ಯ ಜನರಿಗೆ ಸೇವೆ ಸಲ್ಲಿಸಿದರೆ, ಅವನು ನಿಮ್ಮನ್ನು ನಂಬುತ್ತಾನೆ ಮತ್ತು ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತಾನೆ; ಸಹಕಾರವು ನಾನು ಪಾಲಿಸುವ ನಿಯಮವಾಗಿದೆ ಮತ್ತು ನೀವು ಅದನ್ನು ಹೊಂದಿದ್ದರೆ, ನೀವು ಏನನ್ನಾದರೂ ಸಾಧಿಸಬಹುದು. ಅವರು ಬಡತನ, ರೋಗ ಮತ್ತು ಅಜ್ಞಾನವನ್ನು ಭಾರತೀಯ ಸಮಾಜದ ಮೂಲ ಅಸ್ವಸ್ಥತೆಗಳೆಂದು ಗುರುತಿಸಿದ್ದರು ಮತ್ತು ಶೈಕ್ಷಣಿಕ ಸೌಲಭ್ಯಗಳು ಮತ್ತು ಆರೋಗ್ಯ ಸೇವೆಯನ್ನು ಒದಗಿಸುವ ಮೂಲಕ, ಇತರ ಎಲ್ಲಾ ಕಾಯಿಲೆಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದು ಎಂದು ಅವರು ಭಾವಿಸಿದರು. ತಾಳ್ಮೆಯೊಂದಿಗೆ ಸಹನೆಯು ಅಂತಿಮವಾಗಿ ಗೆಲ್ಲುತ್ತದೆ" ಎನ್ನುವ ಆಶಯವನ್ನು ಇಟ್ಟುಕೊಂಡು ಸಾಮಾಜಿಕ ನ್ಯಾಯದ ಆಧಾರದಲ್ಲಿ ನವ ಭಾರತವನ್ನು ಡಾ.ಪೈ ಅವರಂತಹ ಮಹನೀಯರ ಆದರ್ಶದ ದಾರಿಯಲ್ಲಿ ಕಟ್ಟೋಣ.

⬅ ಮುಖಪುಟ