ಅನೇಕ ಸಂದರ್ಭಗಳಲ್ಲಿ ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳ ಕುರಿತಾಗಿ ಮಾತ್ರ ನಾವು ಗಮನವಹಿಸುತ್ತೇವೆ. ಆದರೆ ನಮ್ಮ ಮೂಲಭೂತ ಕರ್ತವ್ಯಗಳನ್ನು ನಾವು ನಿರ್ಲಕ್ಷಿಸಿದ್ದೇವೆ. ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ “ಸ್ವಾತಂತ್ರ್ಯಹೋರಾಟಕ್ಕೆ ಸ್ಪೂರ್ತಿ ನೀಡಿದ ಆದರ್ಶಗಳನ್ನು ಪಾಲಿಸುವುದು ಮತ್ತು ಅನುಸರಿಸುವುದು” ಎಂಬ ಕರ್ತವ್ಯವನ್ನೂ ತಿಳಿಸಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ರಾಜಕೀಯ ಹಾಗೂ ಸೈದ್ಧಾಂತಿಕ ಕಾರಣಗಳಿಗಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ, ಅವರನ್ನು ವಾಚಾಮಗೋಚರ ನಿಂದಿಸುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಅವರ ಜೀವನವನ್ನು ವಿಮರ್ಶಿಸುವುದಕ್ಕೂ, ನಿಂದಿಸುವುದಕ್ಕೂ ವ್ಯತ್ಯಾಸವಿದೆ. ಅದನ್ನು ಅರಿತು ನಾವೆಲ್ಲರೂ ನಮ್ಮ ವ್ಯವಹಾರವನ್ನು ಮಾಡಬೇಕಿದೆ. ಪ್ರತಿಯೊಬ್ಬ ಸ್ವಾತಂತ್ರö್ಯ ಹೋರಾಟಗಾರರೂ ಅವರವರ ಕಾಲಘಟ್ಟದಲ್ಲಿ ಅವರವರ ಶಕ್ತಿಗನುಗುಣವಾಗಿ ರಾಷ್ಟ್ರದ ಸ್ವಾತಂತ್ರö್ಯಕ್ಕೆ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರೆ. ಅದನ್ನು ಗೌರವಿಸುತ್ತಾ, ಅವರ ಆದರ್ಶಗಳನ್ನು ಪಾಲಿಸುತ್ತಾ ರಾಷ್ಟ್ರಕ್ಕಾಗಿ ದುಡಿಯುವ ಅವಕಾಶ ಇದೀಗ ನಮ್ಮೆಲ್ಲರ ಪಾಲಿಗಿದೆ.