ಆರೆಸ್ಸೆಸ್ ಎಂದರೇನು? ಎಂಬ ಪ್ರಶ್ನೆಗೆ ಸಂಘದ ಸಂಸ್ಥಾಪನೆಯ ಮೊದಲ ಸಭೆಯಲ್ಲಿದ್ದ, ನಂತರ ಪ್ರಚಾರಕರಾಗಿದ್ದ ದಾದಾರಾವ್ ಪರಮಾರ್ಥ್ “RSS is the Evolution of the Life Mission for the Hindu Nation” ಎಂದು ಉತ್ತರಿಸಿದ್ದರು. ವ್ಯಕ್ತಿನಿರ್ಮಾಣದ ಮೂಲಕ ಸಮಾಜ ಪರಿವರ್ತನೆಯ ಆಶಯದೊಂದಿಗೆ ಹಿಂದು ಧರ್ಮ, ಹಿಂದು ಸಂಸ್ಕೃತಿ, ಹಿಂದು ಸಮಾಜದ ಸಂರಕ್ಷಣೆ ಮಾಡುವುದು ಹಾಗೂ ರಾಷ್ಟ್ರದ ಸರ್ವಾಂಗೀಣ ಉನ್ನತಿಯ ಧ್ಯೇಯದೊಂದಿಗೆ ಕೋಟ್ಯಂತರ ಜನರಲ್ಲಿ ಸಮಾಜಸೇವಾಕಾರ್ಯದ ಭಾವಜಾಗೃತಿಯನ್ನುಂಟು ಮಾಡಿ ಅವರನ್ನು ಸಮಾಜಮುಖಿ ಕಾರ್ಯಗಳಿಗಾಗಿ ತೊಡಗುವಂತೆ ಪ್ರೇರಣೆ ನೀಡುತ್ತಾ ಸದೃಢ ಭಾರತದ ನಿರ್ಮಾಣದಲ್ಲಿ ತೊಡಗಿರುವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇದೀಗ ಶತಾಬ್ದಿಯ ಸಂಭ್ರಮ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಸಂಘಟನಾತ್ಮಕ ವಿಕಾಸದ ನೂರು ವರ್ಷಗಳಲ್ಲಿ ಕಾರ್ಯಪದ್ಧತಿ ಹಾಗೂ ಕಾರ್ಯಶೈಲಿಯ ಅನೇಕ ವೈಶಿಷ್ಟ್ಯಗಳ ಮೂಲಕ ಸಮಾಜದಲ್ಲಿ ಗುರುತಿಸಲ್ಪಟ್ಟಿದೆ. ಈ ಪೈಕಿ ಕೆಲವು ವಿಶೇಷತೆಗಳನ್ನು ಗಮನಿಸೋಣ.
ಸಾಮೂಹಿಕ ಚಿಂತನೆ: 1925 ರಲ್ಲಿ ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ತಮ್ಮ ಮನೆಯ ಮೊದಲ ಮಹಡಿಯಲ್ಲಿ ಸೇರಿದ್ದ 17 ಮಂದಿ ಸಮಾನ ಮನಸ್ಕರೊಂದಿಗೆ ಸಂಘದ ಚಿಂತನೆಯನ್ನು ಮುಂದಿಟ್ಟರು. ವಿಶ್ವನಾಥ ರಾವ್ ಕೇಳ್ಕರ್, ಭಾವೂಜಿ ಕಾವರೆ, ಡಾ. ಲ. ವಾ. ಪರಾಂಜಪೆ, ರಘುನಾಥರಾವ್ ಬಾಂಡೆ, ಭಯ್ಯಾಜಿ ದಾಣಿ, ಬಾಪು ಭೇದಿ, ಅಣ್ಣಾ ವೈದ್ಯ, ಕೃಷ್ಣಾರಾವ್ ಮೋಹಲಾಲ್, ನರಹರ್ ಪಾಲೇಕರ್, ದಾದಾರಾವ್ ಪರಮಾರ್ಥ್, ಅಣ್ಣಾಜಿ ಗಾಯಕವಾಡ್, ದೇವಘರೆ, ಬಾಬೂ ರಾವ್ ತೆಲಂಗ್, ತಾತ್ಯಾ ತೆಲಂಗ್, ಬಾಬಾ ಸಾಹೇಬ ಅಠಲ್ಯೆ, ಬಾಲಾಜಿ ಹುದ್ದಾರ್ ಮತ್ತು ಅಣ್ಣಾ ಸೋಹೋನಿ - ಇವರು ಸಂಘದ ಪ್ರಾರಂಭದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದವರು. ಈ ಮೊದಲ ಸಭೆಯಿಂದ ಪ್ರಾರಂಭಿಸಿ ಸಂಘ ಕ್ರಮಿಸಿದ ನೂರುವರ್ಷಗಳಲ್ಲಿ ಇದೇ ರೀತಿಯ ಸಾಮೂಹಿಕ ಚಿಂತನೆಯ ಆಧಾರದಲ್ಲಿಯೇ ಸಂಘದ ಎಲ್ಲಾ ನಿರ್ಣಯಗಳು, ನೀತಿಗಳು, ಯೋಜನೆಗಳು ರೂಪುಗೊಳ್ಳುತ್ತದೆ. ಇದಕ್ಕಾಗಿ ನಿಯಮಿತವಾಗಿ ಬೈಠಕ್ ಗಳು ನಡೆಯುತ್ತವೆ.
ಸಾಮೂಹಿಕ ನಿರ್ಣಯ: ಸಂಘದ ನಿರ್ಣಯಗಳು ಮೂಡಿಬರುವುದೇ ಬೈಠಕ್‌ಗಳಲ್ಲಿ. ಅದಕ್ಕೆ ನಿಶ್ಚಿತವಾದ ಅಪೇಕ್ಷಿತ ಕಾರ್ಯಕರ್ತರಿರುತ್ತಾರೆ. ಒಂದು ವಿಷಯದ ಕುರಿತು ನಿರ್ಣಯ ಮಾಡಲು ಒಟ್ಟು ಸೇರಿರುತ್ತಾರೆ. ಎಲ್ಲರೂ ಅವರವರ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಎಲ್ಲರ ಸಹಮತದ ನಿರ್ಧಾರದ ಸಾಮೂಹಿಕ ನಿರ್ಣಯ ಪ್ರಕ್ರಿಯೆ ಸಂಘಕಾರ್ಯದ ವಿಶೇಷತೆ. ಬಹುಮತದ (Majority) ಮೇಲಲ್ಲ, ಬದಲಾಗಿ ಸಹಮತದ (Consensus) ಆಧಾರದಲ್ಲಿ ನಿರ್ಣಯಗಳು ಸಾಮೂಹಿಕವಾಗಿ ಅಂಗೀಕರಿಸಲ್ಪಡುತ್ತವೆ. ಸಾಮೂಹಿಕವಾಗಿ ಒಮ್ಮೆ ಅಂಗೀಕರಿಸಿದ ನಿರ್ಣಯವನ್ನು ಎಲ್ಲರೂ ಸಹಜವಾಗಿಯೇ ಶ್ರದ್ಧೆಯಿಂದ ಸ್ವೀಕರಿಸಿ ಆ ನಿರ್ಣಯಕ್ಕೆ ತಕ್ಕಂತೆ ಕಾರ‍್ಯನಿರ್ವಹಿಸುತ್ತಾರೆ.
ಸರ್ವವ್ಯಾಪಿ: 1925ರ ವಿಜಯದಶಮಿಯಂದು (ಸೆಪ್ಟಂಬರ್ 27, 1925) ಮಹಾರಾಷ್ಟ್ರದ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭಗೊಂಡಿತು. ನಾಗಪುರದಲ್ಲಿ ಅದಾಗ್ಗೆ ವೈದ್ಯಕೀಯ ಶಿಕ್ಷಣ ಮುಗಿಸಿದ್ದ, ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಯುವನೇತಾರ ಡಾ| ಕೇಶವ ಬಲಿರಾಂ ಹೆಡಗೇವಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು. 1926ರಲ್ಲಿ ನಾಗಪುರದ ಮಹಲ್ ಪರಿಸರದ ಮೊಹಿತೇವಾಡದ ಮೊದಲ ಶಾಖೆಯಿಂದ ಮೊದಲ್ಗೊಂಡು ಇದೀಗ ದೇಶದುದ್ದಗಲ ಸಂಘದ ಶಾಖೆಗಳು ವಿಸ್ತರಿಸಿದೆ. 1940ರ ವೇಳೆಗೆ ಭಾರತದ ಎಲ್ಲಾ ಪ್ರಾಂತಗಳನ್ನು ತಲುಪಿದ ರಾಷ್ಟ್ರೀಯ ಸ್ವಯಂಸೇವಕ ಸಂಘವು 1980ರ ವೇಳೆ ಎಲ್ಲಾ ಜಿಲ್ಲೆಗಳನ್ನು ಹಾಗೂ 1996ರ ವೇಳೆ ಎಲ್ಲಾ ತಾಲೂಕುಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿತು. ಮುಂದಿನ ವರ್ಷಗಳಲ್ಲಿ ದೇಶದ ಎಲ್ಲಾ ಮಂಡಲಗಳಿಗೆ ಸಂಘಟನಾತ್ಮಕ ವಿಸ್ತಾರದ ಗುರಿಯನ್ನು ಹೊಂದಿದೆ. ಈಗಾಗಲೇ ಹಲವಾರು ಪ್ರಾಂತಗಳಲ್ಲಿ ಎಲ್ಲಾ ಮಂಡಲಗಳಿಗೆ ಸಂಘಕಾರ್ಯ ವಿಸ್ತಾರಗೊಂಡಿದೆ. 53 ದೇಶಗಳಲ್ಲಿ ಹಿಂದೂ ಸ್ವಯಂಸೇವಕ ಸಂಘ ಸಕ್ರಿಯವಾಗಿದೆ. ಹೀಗೆ ಭೌಗೋಳಿಕವಾಗಿ ಸಂಘಕಾರ್ಯವು ದೇಶದ ಮೂಲೆಮೂಲೆಗೂ ತಲುಪಿ ಸರ್ವವ್ಯಾಪಿ ಎನಿಸಿದೆ.
ಸರ್ವಸ್ಪರ್ಶಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಎಲ್ಲಾ ವರ್ಗಗಳನ್ನು ಪ್ರತಿನಿಧಿಸುವ ಬೃಹತ್ ಸಂಘಟನೆ. ಸಮಾಜ ಜೀವನದ ಎಲ್ಲರೂ ಆರೆಸ್ಸೆಸ್ಸಿನಲ್ಲಿದ್ದಾರೆ. ಜಾತಿ, ಭಾಷೆ, ಪ್ರಾಂತ, ಮತ, ಪಂಥ – ಈ ಎಲ್ಲವನ್ನೂ ಮೀರಿದ ಸಾಮಾಜಿಕ ಏಕತೆ ಸಂಘದಲ್ಲಿ ಸದಾ ಕಾಣಸಿಗುತ್ತದೆ. ಸಂಘದ ಪ್ರಾರಂಭದ ದಿನದಿಂದಲೂ ಜಾತಿ ಮೀರಿ ಹಿಂದುಭಾವದಿಂದ ಎಲ್ಲರನ್ನು ನೋಡುವ ದೃಷ್ಟಿಕೋನವನ್ನು ನೀಡಿದೆ. 1934ರಲ್ಲಿ ವಾರ್ಧಾದ ಆರೆಸ್ಸೆಸ್ ಶಿಬಿರಕ್ಕೆ ಮಹಾತ್ಮಾ ಗಾಂಧೀಜಿ ಹಾಗೂ 1939ರಲ್ಲಿ ಪುಣೆಯ ಶಿಬಿರಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಭೇಟಿ ನೀಡಿದಾಗ ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧಿತ್ವ ಕಂಡು ಸಂಘದ ಸಮರಸತೆಯ ವಾತಾವರಣವನ್ನು ಕೊಂಡಾಡಿದ್ದರು. 2021ರ ಜನವರಿ 31 ರಂದು ಬೆಂಗಳೂರಿನ ಕೇಶವಕೃಪಾ ಕಾರ‍್ಯಾಲಯಕ್ಕೆ ಭೇಟಿ ನೀಡಿದ್ದ ಪದ್ಮಶ್ರೀ ಪುರಸ್ಕೃತರಾದ ಮಂಜಮ್ಮ ಜೋಗತಿಯವರು ತೃತೀಯಲಿಂಗಿಗಳ ಕುರಿತು ಸಂಘದ ಸಂಪರ್ಕ, ನಿಲುವುಗಳನ್ನು ಪ್ರಶಂಸಿದ್ದರು. ಸಂಘದ ಅಂಗಳಕ್ಕೆ ಸಮಾಜ ಜೀವನದ ಎಲ್ಲಾ ಜಾತಿ-ಪಂಗಡದವರು ಸದಾ ಬರುತ್ತಿರುತ್ತಾರೆ. ಸಂಘದ್ದು ಸದಾ ತೆರೆದ ಬಾಗಿಲು. ಸದಾ ಸರ್ವಸ್ಪರ್ಶಿ ಸಂಘಟನೆ.
Progressive unfoldment: ಸಂಘದ ಸಂಸ್ಥಾಪನೆಯ ಸಂದರ್ಭದಲ್ಲಿ ರಾಷ್ಟ್ರದ ಸರ್ವಾಂಗೀಣ ಉನ್ನತಿಗಾಗಿ ಯೋಚಿಸುತ್ತಾ, ಅದಕ್ಕಾಗಿ ಕಾರ್ಯಪ್ರವೃತ್ತವಾಗಬಲ್ಲ ಸಮಾಜವನ್ನು ರೂಪಿಸುವುದಕ್ಕಾಗಿ ಸಂಘಕಾರ್ಯವು ಕ್ರಮೇಣ ದೇಶಾದ್ಯಂತ ವಿಸ್ತಾರವಾಗಬೇಕು ಹಾಗೂ ಅದಕ್ಕಾಗಿ ಲಕ್ಷಾಂತರ ಕಾರ್ಯಕರ್ತರ ಅಗತ್ಯವಿದೆ ಎಂಬುದನ್ನು ಸಂಸ್ಥಾಪಕರು ಮನಗಂಡಿದ್ದರು. ಪ್ರಾಮಾಣಿಕತೆಯಿಂದ, ನಿಸ್ವಾರ್ಥಬುದ್ಧಿಯಿಂದ ಸಂಘಟನೆಯ ಕೆಲಸ ಮಾಡುತ್ತಾ ಹಿಂದು ಸಮಾಜ, ಹಿಂದು ಸಂಸ್ಕೃತಿ, ಹಿಂದು ಧರ್ಮ, ಹಿಂದು ರಾಷ್ಟ್ರ ಇವುಗಳ ಉನ್ನತಿ ಮತ್ತು ಸಂರಕ್ಷಣೆಗಾಗಿ ಕಟಿಬದ್ಧರಾಗುವ ಕಾರ್ಯಕರ್ತರನ್ನು ನಿರ್ಮಿಸಬೇಕು. ಅದಕ್ಕಾಗಿ ಕಾರ್ಯಕರ್ತರ ನಿರ್ಮಾಣ ಎನ್ನುವುದು ಒಂದು ಸತತ, ನಿಯಮಿತ ಪ್ರಕ್ರಿಯೆಯಾಗಬೇಕು ಎಂಬುದನ್ನು ಪ್ರಾರಂಭದಲ್ಲೇ ಯೋಚಿಸಿದ್ದರು. ಕಾರ್ಯಕರ್ತರು ಲಭಿಸಿದಂತೆ ಸಂಘಕಾರ್ಯವು ವಿಸ್ತರಿಸುತ್ತಾ ಸಾಗಿತು. ಹೊಸ ಕಾರ್ಯವಿಭಾಗಗಳು ಶಾರೀರಿಕ ವಿಭಾಗ, ಬೌದ್ಧಿಕ ವಿಭಾಗ, ವ್ಯವಸ್ಥಾ ವಿಭಾಗ ಪ್ರಾರಂಭವಾಯಿತು. 1990ರಲ್ಲಿ ಸೇವಾ ವಿಭಾಗ, 1994ರಲ್ಲಿ ಸಂಪರ್ಕ ಹಾಗೂ ಪ್ರಚಾರ ವಿಭಾಗ ಪ್ರಾರಂಭವಾಯಿತು. 1996ರಲ್ಲಿ ಧರ್ಮ ಜಾಗರಣ ಗತಿವಿಧಿ ಸೇರಿದಂತೆ ಕ್ರಮೇಣ 6 ಗತಿವಿಧಿಗಳು ಪ್ರಾರಂಭವಾಯಿತು. 1936ರಲ್ಲಿ ಮಹಿಳೆಯರಿಗಾಗಿ ರಾಷ್ಟ್ರ ಸೇವಿಕಾ ಸಮಿತಿ, 1949ರಲ್ಲಿ ವಿದ್ಯಾರ್ಥಿಗಳಿಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, 1952ರಲ್ಲಿ ಕಾಡಿನಲ್ಲಿರುವ ವನವಾಸಿ ಬಂಧುಗಳ ವಿಕಾಸಕ್ಕಾಗಿ ವನವಾಸಿ ಕಲ್ಯಾಣ ಆಶ್ರಮ, 1964ರಲ್ಲಿ ವಿಶ್ವ ಹಿಂದೂ ಪರಿಷತ್ - ಸೇರಿದಂತೆ 45ಕ್ಕೂ ಹೆಚ್ಚು ಸಂಘಟನೆಗಳ ಮೂಲಕ ಸಂಘದ ಸ್ವಯಂಸೇವಕರು ಸಮಾಜ ಜೀವನದ ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆಯ ಕಾರ್ಯದಲ್ಲಿ ತೊಡಗಿದ್ದಾರೆ. ಸಂಘದ ವಿಕಾಸ ಪ್ರಕ್ರಿಯೆಯು progressive unfoldment ಸ್ವರೂಪದ್ದು ಎಂದು ಹಿರಿಯ ಪ್ರಚಾರಕ ದತ್ತೋಪಂತ ಠೇಂಗಡಿಯವರು ಒಮ್ಮೆ ಹೇಳಿದ್ದರು. ಅಂದರೆ ಬೀಜರೂಪದಿಂದ ಮೊಳಕೆಯೊಡೆದು ನಂತರ ಕಾಂಡ, ಬೇರು, ಎಲೆಗಳನ್ನು ಹೊಂದಿ ಕ್ರಮೇಣ ರೆಂಬೆ-ಕೊಂಬೆ, ಹೂ-ಹಣ್ಣುಗಳೊಂದಿಗೆ ವಟವೃಕ್ಷವಾಗಿ ಬೆಳೆದು ನಿಲ್ಲುವ ರೀತಿಯಲ್ಲಿ ಈ ವಿಕಾಸದ ಪ್ರಕ್ರಿಯೆ ನಿರಂತರವಾಗಿ ಸಾಗಿಬಂದಿದೆ.
ಸ್ವಯಂಸೇವಕರೇ ಆಧಾರಸ್ತಂಭ: ಹಿಂದೂರಾಷ್ಟ್ರ, ಹಿಂದೂಸಂಸ್ಕೃತಿ, ಹಿಂದೂಸಮಾಜದ ಸರ್ವಾಂಗೀಣ ಉನ್ನತಿಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಘಟಕನಾಗಿದ್ದು, ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಬುದ್ಧಿಯಿಂದ ರಾಷ್ಟ್ರಕಾರ್ಯವನ್ನು ಆಜನ್ಮ ಪಾಲಿಸಲು ಆರೆಸ್ಸೆಸ್ ಸ್ವಯಂಸೇವಕನು ಕಟಿಬದ್ಧನಾಗುತ್ತಾನೆ. ಈ ರೀತಿಯ ಸಮರ್ಪಣಾ ಭಾವದ, ಸ್ವಂತಕ್ಕೇನೂ ಬಯಸದ, ಸಮಾಜಮುಖಿ ಚಿಂತನೆಯ ಕೋಟ್ಯಾಂತರ ಸ್ವಯಂಸೇವಕರೇ ಸಂಘಕಾರ್ಯದ ಆಧಾರಸ್ತಂಭಗಳು. ಆರೆಸ್ಸೆಸ್ಸಿನಲ್ಲಿ ಯಾವುದೇ ಮೆಂಬರ್‌ಶಿಪ್ ಇಲ್ಲ. ‘ನಮಸ್ತೇ ಸದಾವತ್ಸಲೇ ಮಾತೃಭೂಮೇ’ ಎಂದು ಪ್ರಾರ್ಥನೆಯ ಮೂಲಕ ಧ್ಯೇಯಸ್ಮರಣೆಯನ್ನು ಪ್ರತಿನಿತ್ಯ ಮಾಡುವ ಆರೆಸ್ಸೆಸ್ ಸ್ವಯಂಸೇವಕರು ರಾಷ್ಟ್ರದ ಪರಮವೈಭವಕ್ಕಾಗಿ ಕಟಿಬದ್ಧರಾಗುವ ಸಂಕಲ್ಪ ಮಾಡುತ್ತಾರೆ. ಹಿಂದೂ ಸಮಾಜ ಅಂದರೆ ಮಾತೃಸಮಾಜ ಅಥವಾ ಭಾರತೀಯ ಸಮಾಜದ ಸಂಘಟನೆ, ಎಲ್ಲರ ಹಿತಬಯಸುವ ಭಾರತೀಯ ಚಿಂತನೆಗಳ ಆಧಾರದಲ್ಲಿ (ಸಾಂಸ್ಕೃತಿಕ ರಾಷ್ಟ್ರೀಯತೆ) ರಾಷ್ಟ್ರದ ಸರ್ವಾಂಗೀಣ ಉನ್ನತಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಧ್ಯೇಯ. ಸ್ವಯಂಸೇವಕತ್ವವೂ ಒಂದು ಧನ್ಯತಾಭಾವ ಮೂಡಿಸುವ ಅಸ್ಮಿತೆ. ಹಾಗಾಗಿ ‘ನಾನು ಸಂಘದ ಸ್ವಯಂಸೇವಕ’ ಎಂದು ಅನೇಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ವ್ಯಕ್ತಿನಿರ್ಮಾಣದ ಕೇಂದ್ರ ಶಾಖೆ: ಆರೆಸ್ಸೆಸ್ ಸ್ವಯಂಸೇವಕರು ಪ್ರತಿನಿತ್ಯ ಒಟ್ಟು ಸೇರುವ ನಿತ್ಯಶಾಖೆ, ವಾರಕ್ಕೊಮ್ಮೆ ನಡೆಯುವ ಮಿಲನ್, ತಿಂಗಳಿಗೊಮ್ಮೆ ನಡೆಯುವ ಸಂಘಮಾಡಲಿ - ಇವುಗಳೂ ನಿಯಮಿತವಾಗಿ ನಡೆಯುವ ಆರೆಸ್ಸೆಸ್ ಚಟುವಟಿಕೆಗಳು. ಒಂದು ಗಂಟೆಯ ಕಾರ್ಯಕ್ರಮ. ವ್ಯಾಯಾಮದ ಮೂಲಕ ಶಾರೀರಿಕ ಕ್ಷಮತಾವರ್ಧನೆ, ಬೌದ್ಧಿಕ ಚಟುವಟಿಕೆಗಳ ಮೂಲಕ ವೈಚಾರಿಕ ಕ್ಷಮತೆ, ಆಟಗಳ ಮೂಲಕ ಅನೇಕ ಗುಣಗಳು ಮೈಗೂಡುತ್ತವೆ. ಸಂಘದ ಧ್ಯೇಯ ನೆನಪಿಸುವ ಪ್ರಾರ್ಥನೆಯೊಂದಿಗೆ ಮುಕ್ತಾಯ. ದೇಶಾದ್ಯಂತ ಈ ಶಾಖೆಗಳು ನಡೆಯುತ್ತಿದೆ. 2024ರ ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ವರದಿಯಂತೆ ಭಾರತದಲ್ಲಿ 73,117 ನಿತ್ಯಶಾಖೆಗಳು 27,717 ಮಿಲನ್‌ಗಳು, 10,567 ಸಂಘಮಂಡಳಿಗಳು ನಡೆಯುತ್ತಿವೆ. ಅನೇಕ ದಶಕಗಳಿಂದ ನಿಯಮಿತವಾಗಿ ಶಾಖೆ-ಮಿಲನ್-ಮಂಡಳಿಗಳು ನಿಯಮಿತವಾಗಿ ನಡೆಯುತ್ತಿವೆ. ಆಯಾ ಪ್ರದೇಶಗಳಲ್ಲಿ ಶಾಖೆಯ ಮೂಲಕ ನಿರ್ದಿಷ್ಟವಾದ ಸಾಮಾಜಿಕ ಪರಿವರ್ತನೆಯನ್ನು ಸ್ಥಳೀಯರು ಗುರುತಿಸಿದ್ದಾರೆ. ‘ಶಾಖೆಯ ಮೂಲ ಉದ್ದೇಶವೆಂದರೆ ವ್ಯಕ್ತಿನಿರ್ಮಾಣ. ಅಲ್ಲಿ ತಯಾರಾದ ವ್ಯಕ್ತಿಯು ಸಮಾಜದ ಪರಿವರ್ತನೆಯ ಕಾರ್ಯಗಳನ್ನು ಮಾಡಬೇಕು. ಆ ಮೂಲಕ ರಾಷ್ಟ್ರದ ಪರಮವೈಭವವನ್ನು ಸಾಧಿಸಬೇಕು. ಇದು ಸಂಘದ ಮೂಲಕಲ್ಪನೆ. ಸಂಘವು ಏನೇನು ಕೆಲಸಗಳನ್ನು ಮಾಡುತ್ತಿದೆಯೋ ಅದಕ್ಕೆ ಶಾಖಾಶಕ್ತಿಯೇ ಆಧಾರ. ಶಾಖೆಗಳಿಗೆ ಎಷ್ಟು ಶಕ್ತಿ ಇದೆಯೋ ಅದೇ ಸಂಘದ ಶಕ್ತಿ,’ ಎಂದು ಜನವರಿ 1, 2023ರಂದು ಶಿವಮೊಗ್ಗದಲ್ಲಿ ನಡೆದ ಉಪನ್ಯಾಸವೊಂದರಲ್ಲಿ ಆರೆಸ್ಸೆಸ್ ಸರಸಂಘಚಾಲಕ ಡಾ| ಮೋಹನ್ ಭಾಗವತ್ ಉಲ್ಲೇಖಿಸಿದ್ದರು.
ಎಲ್ಲರ ಆರೆಸ್ಸೆಸ್: ಆರೆಸ್ಸೆಸ್ಸಿಗೆ ಎಲ್ಲರಿಗೂ ಮುಕ್ತಪ್ರವೇಶ. ಪುಟಾಣಿ ಶಿಶುಗಳು, ಬಾಲಕರು, ತರುಣರು, ಹಿರಿಯ ನಾಗರಿಕರು, ವಯೋವೃದ್ಧರು, ಸೇರಿದಂತೆ ಎಲ್ಲಾ ವಯೋಮಾನದವರು ಭಾಗವಹಿಸುತ್ತಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೃಷಿಕರು, ಅಧ್ಯಾಪಕರು, ವ್ಯಾಪಾರಿಗಳು, ಉದ್ಯೋಗಿಗಳು, ಸೇವಾನಿವೃತ್ತರು, ವಿವಿಧ ಹುದ್ದೆ/ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಪಾಲ್ಗೊಳ್ಳುತ್ತಾರೆ. ಜಾತಿ, ಭಾಷೆ, ಪಂಥ, ಪ್ರದೇಶ, ಮತ -ಎಲ್ಲವನ್ನೂ ಮೀರಿ ಎಲ್ಲರೂ ಒಂದಾಗುತ್ತಾರೆ. ಸಂಘಕಾರ್ಯವನ್ನು ಮಾಡಲು ಕ್ಷಮತೆ ಹೊಂದಿರುವ, ಅದಕ್ಕಾಗಿ ಸಮಯ ನೀಡಬಲ್ಲ ಯಾವುದೇ ವ್ಯಕ್ತಿ ಸಂಘದ ಕಾರ್ಯಕರ್ತನಾಗಿ ತನ್ನೂರಿನಲ್ಲಿ ಸಂಘಕಾರ್ಯವನ್ನು ಮುನ್ನಡೆಸುತ್ತಾನೆ.
ಪ್ರಚಾರಕ ಪದ್ಧತಿ: ಸಂಘಕಾರ್ಯಕ್ಕೆ ಕಾರ್ಯಕರ್ತರೇ ಆಧಾರ. ಕಾರ್ಯಕರ್ತರಲ್ಲಿ ಗೃಹಸ್ಥ ಕಾರ್ಯಕರ್ತರು ಹಾಗೂ ಪ್ರಚಾರಕರಿರುತ್ತಾರೆ. ಗತಿವಿಧಿ ಮತ್ತು ವಿವಿಧ ಕ್ಷೇತ್ರಸಂಘಟನೆಗಳಲ್ಲಿ ಪೂರ್ಣಾವಧಿ ಕಾರ್ಯಕರ್ತರೂ ಇರುತ್ತಾರೆ. ಪ್ರಚಾರಕ ಪದ್ಧತಿ ಎಂಬುದು ಸಂಘಕಾರ್ಯಪದ್ಧತಿಯ ಪ್ರಮುಖ ವಿಶೇಷತೆ. ವಿದ್ಯಾಭ್ಯಾಸದ ನಂತರ ಅಥವಾ ಅಲ್ಪಕಾಲದ ಉದ್ಯೋಗದ ನಂತರ ಪೂರ್ಣಸಮಯ ನೀಡಿ ಸಂಘಕಾರ್ಯ ಮಾಡುವ ಧ್ಯೇಯನಿಷ್ಠ ಕಾರ್ಯಕರ್ತರು. ಸಂಘ ನೀಡಿದ ಯಾವುದೇ ಜವಾಬ್ದಾರಿ ಸ್ವೀಕರಿಸಿ, ಸಂಘ ಅಪೇಕ್ಷೆಪಟ್ಟ ಪ್ರದೇಶದಲ್ಲಿ ಸಂಘಕಾರ್ಯ ಮಾಡುತ್ತಾರೆ. ಸ್ವಭಾವ ಮತ್ತು ಸರಳತೆಯಿಂದ ಎಲ್ಲಾ ಕಾರ್ಯಕರ್ತರಿಗೆ ಮೇಲ್ಪಂಕ್ತಿ. ವೈವಾಹಿಕ ಜೀವನ ಇಲ್ಲ, ಆರ್ಥಿಕ ಆದಾಯ ಇಲ್ಲ. ಇಡೀ ಜೀವನ ಸಮಾಜಕಾರ್ಯಕ್ಕೆ ಮುಡಿಪು. ಸಂಘದ ಕಾರ್ಯಾಲಯದಲ್ಲಿ ವಸತಿ. ಸಂತಸದೃಶ ಜೀವನ. ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಇದೇ ರೀತಿಯ ಜೀವನ ನಡೆಸಿ ಪ್ರಚಾರಕ ಪದ್ಧತಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು. ಎರಡನೇ ಸರಸಂಘಚಾಲಕರಾದ ಗುರೂಜಿಯವರು ಪ್ರಚಾರಕ ವ್ಯವಸ್ಥೆಯನ್ನು ಮತ್ತಷ್ಟು ವಿಕಸಿತಗೊಳಿಸಿದರು.
ಕರ್ನಾಟಕಕ್ಕೆ ಪ್ರಚಾರಕರಾಗಿ ಬಂದಿದ್ದ ಯಾದವ ರಾವ್ ಜೋಷಿಯವರ ಪ್ರೇರಣೆಯಿಂದ 1946ರಲ್ಲಿ ಕರ್ನಾಟಕದ ಮೊದಲ ಪ್ರಚಾರಕರ ತಂಡದಲ್ಲಿದ್ದ ಹೊ. ವೆ. ಶೇಷಾದ್ರಿ, ಕೃ. ಸೂರ್ಯನಾರಾಯಣ ರಾವ್ ಹಾಗೂ ಚಂಪಕನಾಥ್ ಕರ್ನಾಟಕದಲ್ಲಿ ಪ್ರಚಾರಕ ಪರಂಪರೆಯನ್ನು ಪ್ರಾರಂಭಿಸಿದರು. ರಾಷ್ಟ್ರಕಾರ್ಯದ ಮಹೋನ್ನತ ಧ್ಯೇಯಕ್ಕಾಗಿ ಒಂದು ಸಮರ್ಪಿತ ಜೀವನದ ಸಂಕಲ್ಪ ಪ್ರಚಾರಕರದ್ದು.
ಕೌಟುಂಬಿಕ ಶೈಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಟ್ಟು ರಚನೆಯೇ ಪಾರಿವಾರಿಕ ಶೈಲಿಯದ್ದು. ಸರಸಂಘಚಾಲಕರ ನಿಯುಕ್ತಿಯ ಪ್ರಕ್ರಿಯೆಯಿಂದ ಪ್ರಾರಂಭಿಸಿ ಶಾಖಾಮಟ್ಟದಲ್ಲಿನ ಚಟುವಟಿಕೆಗಳವರೆಗೆ ಎಲ್ಲವೂ ಕೌಟುಂಬಿಕ ಶೈಲಿಯಲ್ಲಿಯೇ ಸಾಗುತ್ತದೆ. ಸಂಘದ ಒಳಗಡೆಯಿರುವವರಿಗೆ ಈ ಅನುಭವ ಸಹಜವಾಗಿಯೇ ಇರುತ್ತದೆ. ಅನೌಪಚಾರಿಕತೆಗೇ ಒತ್ತು. ಟಿವಿ, ವಿಡಿಯೋದಲ್ಲಿ ಸಂಘದ ಗಣವೇಷ, ದಂಡ ಕವಾಯತು ಎಲ್ಲಾ ನೋಡಿದಾಗ ಇದೊಂದು ಮಿಲಿಟರಿ ಶೈಲಿಯ ಸಂಘಟನೆ ಎಂದು ಅನಿಸಬಹುದು. ಆದರೆ ಸಂಘದೊಳಗಡೆ ಬಂದಾಗ ಆ ಆತ್ಮೀಯ ವಾತಾವರಣ ಅನುಭವಕ್ಕೆ ಬರುತ್ತದೆ.
ಪ್ರಶಿಕ್ಷಣ ವರ್ಗಗಳು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನಾತ್ಮಕ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವ ಕಾರ್ಯಕರ್ತರು ನಿಗದಿತವಾದ ಪ್ರಶಿಕ್ಷಣ ಪಡೆಯುವುದು ಅತ್ಯಾವಶ್ಯಕ. ಹೆಚ್ಚಿನ ಜವಾಬ್ದಾರಿ ಬಂದಷ್ಟೂ ಅದನ್ನು ಸೂಕ್ತವಾಗಿ ನಿರ್ವಹಿಸಲು ಸೂಕ್ತ ಪ್ರಶಿಕ್ಷಣ ಬೇಕು. ಕಾರ್ಯಕರ್ತರ ಪ್ರಶಿಕ್ಷಣದ ದೃಷ್ಟಿಯಿಂದ ಶಿಕ್ಷಾವರ್ಗಗಳನ್ನು ಆಯೋಜಿಸಲಾಗುತ್ತದೆ. 1927ರಲ್ಲಿ ಮೊತ್ತಮೊದಲ ಕಾರ್ಯಕರ್ತರ ಪ್ರಶಿಕ್ಷಣ ನಿಮಿತ್ತ ನಿವಾಸಿ ಶಿಬಿರವನ್ನು ನಾಗಪುರದಲ್ಲಿ ಆಯೋಜಿಸಲಾಯಿತು. ಸಂಘದ ಕಾರ್ಯಶೈಲಿ, ಕಾರ್ಯಪದ್ಧತಿಗಳು, ರೀತಿ-ನೀತಿಗಳು, ಸಂಘಕಾರ್ಯದ ವೈಚಾರಿಕ ಹಾಗೂ ತಾತ್ವಿಕ ನೆಲೆಗಟ್ಟು, ಗುರಿ - ಹಿಂದು ಸಂಘಟನೆ ಮತ್ತು ದಾರಿ - ನಿತ್ಯಶಾಖೆಯ ಏಕತ್ರೀಕರಣಗಳ ಮೂಲಕ ವ್ಯಕ್ತಿನಿರ್ಮಾಣ – ಇತ್ಯಾದಿ ಎಲ್ಲವನ್ನೂ ಅರಿತು ಸಂಘಕಾರ್ಯವನ್ನು ಅದರ ಮೂಲಧ್ಯೇಯಕ್ಕೆ ತಕ್ಕಂತೆ ಮಾಡುವ ಕಾರ್ಯಕರ್ತರ ನಿರ್ಮಾಣ ಮಾಡುವುದೇ ಇದರ ಉದ್ದೇಶವಾಗಿತ್ತು. 1935ರಲ್ಲಿ ಮೊದಲಬಾರಿಗೆ ನಾಗಪುರದಿಂದ ಹೊರಗಡೆ, ಪುಣೆಯಲ್ಲಿ ಕಾರ್ಯಕರ್ತರ ಪ್ರಶಿಕ್ಷಣ ನಿಮಿತ್ತ ಸಂಘ ಶಿಕ್ಷಾ ವರ್ಗ ನಡೆಯಿತು. ನಂತರದ ದಶಕಗಳಲ್ಲಿ ಬೇರೆ ಬೇರೆ ರಾಜ್ಯಗಳಿಗೆ ವಿಸ್ತಾರವಾಯಿತು. 1940ರಲ್ಲಿ ನಾಗಪುರದಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಭಾರತದ ಎಲ್ಲಾ ಪ್ರಾಂತಗಳಿಂದ ಶಿಕ್ಷಾರ್ಥಿಗಳಾಗಿ ಕಾರ್ಯಕರ್ತರು ಬಂದಿದ್ದನ್ನು ನೋಡಿ ‘ನಾನು ಒಂದು ಪುಟ್ಟ ಭಾರತವನ್ನೇ ನೋಡುತ್ತಿದ್ದೇನೆ’ ಎಂದು ಸಂಘಸ್ಥಾಪಕ ಡಾ. ಹೆಡಗೇವಾರ್ ಆನಂದಿತರಾಗಿ ಹೇಳಿದ್ದರು. ನಂತರದ ವರ್ಷಗಳಲ್ಲಿ ವರ್ಗದ ಸ್ವರೂಪ, ಸಂರಚನೆಯಲ್ಲಿ ಕಾಲಕಾಲಕ್ಕೆ ಅಗತ್ಯ ಪರಿವರ್ತನೆಗಳನ್ನು ತರಲಾಗುತ್ತಿತ್ತು. ಪ್ರಸ್ತುತ ಕಾರ್ಯಕರ್ತ ಪ್ರಶಿಕ್ಷಣ ವರ್ಗದಲ್ಲಿ ಒಟ್ಟು 5 ಹಂತಗಳಿರುತ್ತವೆ. ತಾಲೂಕು/ಜಿಲ್ಲಾ ಹಂತದಲ್ಲಿ 3 ದಿನಗಳ ‘ಪ್ರಾರಂಭಿಕ ವರ್ಗ’ ಎಲ್ಲರಿಗೂ ಮೊದಲ ಮತ್ತು ಕಡ್ಡಾಯ ಪ್ರಶಿಕ್ಷಣ ವರ್ಗ. ಇದು ಪೂರೈಸಿದವರಿಗೆ ಮಾತ್ರ ಮುಂದಿನ 4 ವರ್ಗಗಳು. ನಂತರ ಜಿಲ್ಲಾ/ವಿಭಾಗ ಹಂತದಲ್ಲಿ 7 ದಿನಗಳ “ಪ್ರಾಥಮಿಕ ಶಿಕ್ಷಾವರ್ಗ”. ನಂತರ ಪ್ರಾಂತಸ್ತರದಲ್ಲಿ 15 ದಿನಗಳ ಸಂಘ ಶಿಕ್ಷಾ ವರ್ಗ ನಡೆಯುತ್ತದೆ. ಮುಂದಿನ ಹಂತದಲ್ಲಿ ಆಯ್ದ ಕಾರ್ಯಕರ್ತರಿಗೆ ಕ್ಷೇತ್ರಮಟ್ಟದಲ್ಲಿ 20 ದಿನಗಳ “ಕಾರ್ಯಕರ್ತ ವಿಕಾಸ ವರ್ಗ-ಪ್ರಥಮ” ನಡೆಯುತ್ತವೆ. ಈ ಪ್ರಶಿಕ್ಷಣ ವರ್ಗಗಳ ಸರಣಿಯ ಕೊನೆಯ ಹಂತವಾಗಿ ಅಖಿಲ ಭಾರತೀಯ ಮಟ್ಟದಲ್ಲಿ 25 ದಿನಗಳ “ಕಾರ್ಯಕರ್ತ ವಿಕಾಸ ವರ್ಗ- ದ್ವಿತೀಯ” ವು ನಾಗಪುರದ ರೇಶಿಮ್‌ಬಾಗ್ ಪರಿಸರದಲ್ಲಿ ನಡೆಯುತ್ತದೆ. ಇವೆಲ್ಲವೂ 40 ವರ್ಷ ವಯಸ್ಸಿನೊಳಗಿನ ಕಾರ್ಯಕರ್ತರಿಗಾಗಿ ನಡೆಯುವ “ಸಾಮಾನ್ಯ” ವರ್ಗಗಳು. 40 ವರ್ಷ ಮೇಲ್ಪಟ್ಟು 60 ವರ್ಷ ವಯಸ್ಸಿನೊಳಗಿನ ಕಾರ್ಯಕರ್ತರಿಗೆ ‘ವಿಶೇಷ’ ವರ್ಗಗಳು ನಡೆಯುತ್ತವೆ.
ಅಖಿಲ ಭಾರತೀಯ ದೃಷ್ಟಿಕೋನ: ಭಾರತದ ಯಾವುದೇ ಒಂದು ಗ್ರಾಮ/ಜಿಲ್ಲೆಯ ಸಂಘಕಾರ್ಯದ ನಿರ್ವಹಣೆಗಾಗಿ ಬೇಕಾಗುವ ಅಖಿಲ ಭಾರತೀಯ ದೃಷ್ಟಿಕೋನವನ್ನು ಸಂಘದ ವಾತಾವರಣ ಕಟ್ಟಿಕೊಡುತ್ತದೆ. ಸಂಘದ ಸ್ವಯಂಸೇವಕನೊಬ್ಬನು ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿರಲಿ ಅದೋ ದಕ್ಷಿಣದ ಕನ್ಯಾಕುಮಾರಿಯಲ್ಲಿರಲಿ, ಪ್ರತಿ ಕಾರ್ಯಕರ್ತನೂ ರಾಷ್ಟ್ರೀಯ ಏಕಾತ್ಮತೆಯ ಅನುಭೂತಿ, ಸಂಘಟಿತ ಹಿಂದೂ ಸಮಾಜದ ವೈಶ್ವಿಕ ಪಾತ್ರದ ಸ್ಪಷ್ಟತೆ, ಸಾಮಾಜಿಕ ಪರಿವರ್ತನೆಯಲ್ಲಿ ನಮ್ಮ ದೃಷ್ಟಿ-ಯೋಚನೆಗಳ ಸ್ಪಷ್ಟತೆ, ವಿವಿಧ ಕ್ಷೇತ್ರದ ಸಂಘಟನೆಗಳು ಮತ್ತು ಸಜ್ಜನ ಶಕ್ತಿಯನ್ನು ಜತೆಗೂಡಿಸಿಕೊಂಡು ಸಮಾಜದ ಪ್ರಶ್ನೆಗಳು ಹಾಗೂ ಸವಾಲುಗಳಿಗೆ ಪರಿಹಾರ ಮಾಡಬೇಕಾದ ಕುರಿತು ಸಿದ್ಧತೆಯನ್ನು ಅಖಿಲ ಭಾರತೀಯ ದೃಷ್ಟಿಕೋನದೊಂದಿಗೇ ಮಾಡುತ್ತಾನೆ. ಹಾಗಾಗಿ ಭಾರತದ ಎಲ್ಲಾ ಭಾಷೆಗಳನ್ನು- ವಿವಿಧತೆಗಳನ್ನು ತನ್ನದು ಎಂದುಕೊಳ್ಳುತ್ತಾನೆ. ‘ದೇಶ ದೇಶ ದೇಶ ದೇಶ ನನ್ನದು’ ಎಂಬ ಹಾಡನ್ನು ನುಲಿಯುತ್ತಾ ತನ್ನ ಪ್ರಾದೇಶಿಕ ಅಸ್ಮಿತೆ ಅಭಿಮಾನದ ಜತೆಗೇ ಸದಾ ರಾಷ್ಟ್ರೀಯ ಭಾವನೆಯನ್ನು ಹೊಂದಿರುತ್ತಾನೆ.
ಶಾಂತಸ್ವಭಾವ: ಗಾಂಧೀಜಿಯವರ ಹತ್ಯೆಯ ಸುಳ್ಳು ಆರೋಪ ಹೊರಿಸಿ ನಿರ್ಬಂಧ ಹೇರಿದ 1948-49, ತುರ್ತುಪರಿಸ್ಥಿತಿ 1975-77 ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಹಾಗೂ ಕೇರಳ - ಪಶ್ಚಿಮ ಬಂಗಾಳದಲ್ಲಿ ಕಾರ್ಯಕರ್ತರ ನಿರಂತರ ಹತ್ಯೆ-ಹಲ್ಲೆ; ಈ ಎಲ್ಲಾ ವರ್ಷಗಳಲ್ಲಿ ಸಂಘವು ಶಾಂತವಾಗಿ ಪರಿಸ್ಥಿತಿಯನ್ನೆದುರಿಸಿ ಇದೀಗ ನೂರರ ಹಾದಿಯನ್ನು ಕ್ರಮಿಸಿದೆ. ಎಂದಿಗೂ ಹಿಂಸೆಯ ಹಾದಿ ಹಿಡಿಯಲಿಲ್ಲ. “Be Calm at all cost” ಎಂಬ ಗುರೂಜಿಯವರ ಮಾತಿನಂತೆ ಸಂಘವು ಎಂದಿಗೂ ಶಾಂತತೆಯ ಪ್ರತಿರೂಪವಾಗಿ ತನ್ನ ರಾಷ್ಟಿçಯ ಕಾರ್ಯದಲ್ಲಿ ತಲ್ಲೀನವಾಗಿದೆ. ಹಾಸ್ಯ, ಉಪೇಕ್ಷೆ, ವಿರೋಧಗಳನ್ನೆದುರಿಸಿ ಇದೀಗ ಸ್ವೀಕೃತಿಯ ಹಂತಕ್ಕೆ ಬಂದಿದೆ. ‘ಸರ್ವೇಷಾಂ ಅವಿರೋಧೇನ’ ಎಂಬಂತೆ ಯಾರ ವಿರೋಧವೂ ಮಾಡದೆ ಸಂಘ ತನ್ನ ಸಾತ್ವಿಕ ಸ್ವಭಾವದಿಂದಲೇ ಕೋಟ್ಯಾಂತರ ಜನರ ಮನಗೆದ್ದಿದೆ.
ಆರು ಉತ್ಸವಗಳು: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಚಟುವಟಿಕೆಗಳಲ್ಲಿ ಆರು ಉತ್ಸವಗಳನ್ನು ಆಚರಿಸಲಾಗುತ್ತದೆ. ಚೈತ್ರ ಶುದ್ಧ ಪ್ರತಿಪದೆಯಂದು ಯುಗಾದಿ, ಜ್ಯೇಷ್ಠ ಶುದ್ಧ ತ್ರಯೋದಶಿಯಂದು ಹಿಂದೂ ಸಾಮ್ರಾಜ್ಯ ದಿನೋತ್ಸವ, ಆಷಾಢ ಪೂರ್ಣಿಮೆಯಂದು ಶ್ರೀಗುರುಪೂಜಾ ಉತ್ಸವ, ಶ್ರಾವಣ ಪೂರ್ಣಿಮೆಯಂದು ರಕ್ಷಾಬಂಧನ, ಅಶ್ವಯುಜ ಶುದ್ಧ ದಶಮಿಯಂದು ವಿಜಯದಶಮಿ ಹಾಗೂ ಮಕರಮಾಸದ ಸಂಕ್ರಮಣದಂದು ಮಕರ ಸಂಕ್ರಾಂತಿ - ಹೀಗೆ ಆರು ಉತ್ಸವಗಳನ್ನು ಆಚರಿಸಲಾಗುತ್ತದೆ. ಇದಲ್ಲದೇ ಯುಗಾದಿಯ ಪಾವನ ದಿನ ಸಂಘಸಂಸ್ಥಾಪಕ ಡಾ| ಕೇಶವ ಬಲಿರಾಮ್ ಹೆಡಗೇವಾರ್ ಅವರ ಜಯಂತಿಯ ನಿಮಿತ್ತ ಯುಗಾದಿ ಉತ್ಸವದ ಸಂದರ್ಭದಲ್ಲಿ ಅವರ ಗೌರವಾರ್ಥ ಸ್ವಯಂಸೇವಕರೆಲ್ಲರೂ ‘ಆದ್ಯಸರಸಂಘಚಾಲಕ್ ಪ್ರಣಾಮ್’ ಗೌರವವಂದನೆ ನೀಡುತ್ತಾರೆ. ಮಾಘ ಬಹುಳ ಏಕಾದಶಿಯಂದು ಎರಡನೇ ಸರಸಂಘಚಾಲಕರಾದ ಗುರೂಜಿ ಎಂದೇ ಪರಿಚಿತ ಮಾಧವ ಸದಾಶಿವ ಗೋಳ್ವಲ್ಕರ್ ಜಯಂತಿಯಂದು ಅವರ ಸಂಸ್ಮರಣೆಯನ್ನು ದೇಶಾದ್ಯಂತ ಸ್ವಯಂಸೇವಕರು ಮಾಡುತ್ತಾರೆ. ವಿಜಯದಶಮಿಯ ದಿನದಂದು ಸಂಘಸ್ಥಾಪನೆಯ ದಿನವಾದ್ದರಿಂದ ಸ್ವಯಂಸೇವಕರಿಗೆ ಸಂಭ್ರಮದ ದಿನ. ಅಂದು ನಾಗಪುರದ ರೇಶಿಮ್‌ಬಾಗ್ ಮೈದಾನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಸರಸಂಘಚಾಲಕರು ಮಾತನಾಡುತ್ತಾರೆ. ರಾಷ್ಟ್ರಜೀವನವನ್ನು ಪ್ರಭಾವಿಸುವ ಅನೇಕ ಸಾಮಾಜಿಕ ಆಗುಹೋಗುಗಳ ಕುರಿತು ತಮ್ಮ ಒಳನೋಟಗಳನ್ನು ವಿಜಯದಶಮಿ ಭಾಷಣದಲ್ಲಿ ಉಲ್ಲೇಖಿಸುತ್ತಾರೆ. ಸಮಾಜದಲ್ಲಿ ತಮ್ಮ ವೃತ್ತಿಕಾರ್ಯದ ಮೂಲಕ ಸಾಧನೆ ಮಾಡಿರುವ ಗಣ್ಯರೊಬ್ಬರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗುತ್ತದೆ. ಈ ಹಿಂದೆ ಇಸ್ರೋದ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್, ಗಾಯಕ ಶಂಕರ ಮಹಾದೇವನ್, ಪರ್ವತಾರೋಹಿ ಸಂತೋಷ್ ಯಾದವ್ ಮೊದಲಾದ ಗಣ್ಯರು ಆಗಮಿಸಿದ್ದಾರೆ.
ಆತ್ಮನಿರ್ಭರ ಸಂಘಟನೆ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಾವಲಂಬಿ ಸಂಘಟನೆಯಾಗಿರಬೇಕೆಂಬುದು ಸಂಘ ಸಂಸ್ಥಾಪಕರ ಆಶಯವಾಗಿತ್ತು. ಮಾನವ ಸಂಪನ್ಮೂಲ ದೃಷ್ಟಿಯಿಂದಲೂ, ಆರ್ಥಿಕವಾಗಿ, ತಾತ್ವಿಕವಾಗಿ, ವೈಚಾರಿಕವಾಗಿ ಸದಾ ಸ್ವಾವಲಂಬಿಯಾಗಿಯೇ 100 ವರ್ಷಗಳನ್ನು ದಾಟಿಬಂದಿದೆ. ಸರಕಾರಿ ಅನುದಾನ ವ್ಯವಸ್ಥೆಗಳಿಗೆ ಅವಲಂಬಿತವಾಗಿಲ್ಲ. ಸ್ವಯಂಸೇವಕರೇ ಸಂಘವನ್ನು ಮುನ್ನಡೆಸುವ ಕಾರಣ ಮಾನವ ಸಂಪನ್ಮೂಲದ ಯಾವುದೇ ಕೊರತೆಯಿಲ್ಲ. ಸಂಘಸಂಸ್ಥಾಪಕ ಡಾ| ಕೇಶವ ಬಲಿರಾಮ್ ಹೆಡಗೇವಾರ್ ಅವರೇ ಹಾಕಿಕೊಟ್ಟ ಪದ್ಧತಿಯಂತೆ ಗುರುಪೂಜಾ ಉತ್ಸವದಂದು ಗುರುದಕ್ಷಿಣೆಯಾಗಿ ಸ್ವಯಂಸೇವಕರು ಅರ್ಪಿಸುವ ಮೊತ್ತವೇ ಸಂಘವನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಿದೆ. ತಮ್ಮ ಮನೆಯ ಖರ್ಚನ್ನು ಮನೆಮಂದಿಯೇ ನೋಡಿಕೊಳ್ಳುವಂತೆ ಸಂಘದ ಆರ್ಥಿಕ ವ್ಯವಸ್ಥೆಯನ್ನು ಸ್ವಯಂಸೇವಕರೇ ನಿಭಾಯಿಸುತ್ತಾರೆ. ಹೀಗೆ ಎಲ್ಲಾ ದೃಷ್ಟಿಯಿಂದ ಆತ್ಮನಿರ್ಭರ ಸಂಘಟನೆಯಾಗಿ ಸಂಘ ಬೆಳೆದು ಬಂದಿದೆ.
ಸೇವಾಭಾವ ಜಾಗರಣ: ಸಂಘದ ಸಂಪರ್ಕಕ್ಕೆ ಬಂದ ಪ್ರತಿಯೋರ್ವನಿಗೂ ಇನ್ನೊಬ್ಬರಿಗಾಗಿ ಯೋಚಿಸುವ ಸ್ವಭಾವ ಸಹಜವಾಗಿ ಮೈಗೂಡುತ್ತದೆ. ಸೇವಾ ಮನೋಭಾವ ಎಲ್ಲರಲ್ಲೂ ಸುಪ್ತವಾಗಿರುತ್ತದೆ. ಅದನ್ನು ಅರಳಿಸಿ, ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವಾಗುವ, ಅವರ ಸೇವೆ ಮಾಡುವ ಮಾನಸಿಕತೆ ಒಡಮೂಡುತ್ತದೆ. ಆದ್ದರಿಂದಲೇ 1.25 ಲಕ್ಷಕ್ಕೂ ಹೆಚ್ಚು ಸೇವಾಚಟುವಟಿಕೆಗಳನ್ನು ಸ್ವಯಂಸೇವಕರೇ ನಡೆಸುತ್ತಿದ್ದಾರೆ. ಯಾವುದೇ ಪ್ರದೇಶದಲ್ಲಿ ಸುನಾಮಿ, ನೆರೆ-ಪ್ರವಾಹ, ಭೂಕುಸಿತ, ರೈಲ್ವೇ ದುರ್ಘಟನೆ, ಕೊರೋನಾ ಮುಂತಾದ ಸಂದರ್ಭಗಳಲ್ಲಿ ಸ್ವಯಂಸೇವಕರು ತಕ್ಷಣ ನೆರವಿಗೆ ಧಾವಿಸುತ್ತಾರೆ. ಅವರ‍್ಯಾರೂ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಪರಿಣಿತರಲ್ಲ. ಆದರೆ ಸಮಾಜದ ಸಂಕಷ್ಟದ ಸಂದರ್ಭಗಳಲ್ಲಿ ಅಪಾಯವನ್ನೂ ಲೆಕ್ಕಿಸದೆ ಸಹಾಯಹಸ್ತ ಚಾಚುತ್ತಾರೆ. ಸೇವಾಭಾವಜಾಗರಣದ ಮೂಲಕ ಸ್ವಯಂಸೇವಕರಲ್ಲಿ ಸೇವೆ ಮಾಡುವ ಕರ್ತವ್ಯಪ್ರಜ್ಞೆ ಹೆಚ್ಚಾಗುತ್ತದೆ.
ಹೊಸತನಕ್ಕೆ ಸದಾಸಿದ್ಧ: ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಾರಂಭದ ದಿನಗಳಿಂದಲೂ ಕಾಲಾನುಕೂಲ ಅಗತ್ಯ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ. ಪ್ರಾರಂಭದ ಗಣವೇಷವು ಅಂದಿನ ಕಾಲಕ್ಕೆ ಒಂದು ಹೊಸತನದ ಸಂಗತಿಯಾಗಿತ್ತು. ಗಣವೇಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 2016ರಲ್ಲಿ ನಿಕ್ಕರ್ ಬದಲು ಪ್ಯಾಂಟ್ ಗಣವೇಷದ ಭಾಗವಾಯಿತು. ಘೋಷ್ (ಬ್ಯಾಂಡ್ ಸೆಟ್) ವಿಭಾಗದಲ್ಲಿ, ಶಾರೀರಿಕ ಕವಾಯತುಗಳಲ್ಲಿ, ಸಂಘದ ಪ್ರಶಿಕ್ಷಣ ವ್ಯವಸ್ಥೆಗಳಲ್ಲಿ ಪರಿವರ್ತನೆ ತರಲಾಯಿತು. ಪ್ರಾರಂಭದಲ್ಲಿದ್ದ ಪ್ರಾರ್ಥನೆಯಲ್ಲಿ ಬದಲಾವಣೆಯಾಗಿದೆ. ಹೀಗೆ ಸಂಘಟನಾತ್ಮಕ ವಿಷಯಗಳಲ್ಲಿ ಸದಾ ಕಾಲಕ್ಕೆ ತಕ್ಕಂತೆ ಅಗತ್ಯ ಬದಲಾಣೆಗಳನ್ನು ಮಾಡುತ್ತಾ ಬಂದಿದೆ. ಆದ್ದರಿಂದಲೇ ಸಂಘದಲ್ಲಿ ಎಲ್ಲಾ ಕಾಲಕ್ಕೂ ಯುವಕರು, ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ.
ವ್ಯಕ್ತಿ ಗುರುವಲ್ಲ, ತತ್ತ್ವ: ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಗುರುವಾಗಿ ಭಗವಾಧ್ವಜವನ್ನು ಸ್ವೀಕರಿಸಿದೆ. ಯಾವುದೇ ವ್ಯಕ್ತಿಯನ್ನು ಗುರುವಾಗಿ ಸ್ವೀಕರಿಸಿಲ್ಲ. ವ್ಯಕ್ತಿ ಪರಿಪೂರ್ಣ ಅಲ್ಲ. ವ್ಯಕ್ತಿಯ ಕೊರತೆಗಳು, ತಪ್ಪುಗಳು ಅವರನ್ನು ಅನುಸರಿಸುವವರನ್ನು ಪ್ರಭಾವಗೊಳಿಸುತ್ತವೆ. ಹಾಗಾಗಿ ಶಾಶ್ವತ ಮೌಲ್ಯಗಳ ಪ್ರತೀಕವಾಗಿ ಸನಾತನ ಪರಂಪರೆಯ ಅಸ್ಮಿತೆಯಾದ ಭಗವಾಧ್ವಜವನ್ನು ಗುರುವಾಗಿ ಸಂಘ ಸ್ವೀಕರಿಸಿದೆ. ಆಷಾಢ ಪೂರ್ಣಿಮೆಯಂದು ಸ್ವಯಂಸೇವಕರು ಗುರುಪೂಜಾ ಉತ್ಸವವನ್ನು ಆಚರಿಸುತ್ತಾ ಭಗವಾಧ್ವಜಕ್ಕೆ ಗುರುವಂದನೆ ಸಲ್ಲಿಸುತ್ತಾರೆ.
ಅನುಶಾಸನ: ಆರೆಸ್ಸೆಸ್ ಸಂಘಟನೆಯನ್ನು ವಿರೋಧಿಸುವವರೂ ಸಂಘದ ಶಿಸ್ತನ್ನು ಬಹುವಾಗಿ ಮೆಚ್ಚುತ್ತಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಸ್ವಯಂಸೇವಕರಲ್ಲಿ ಕಾಣಸಿಗುವ ಶಿಸ್ತಿಗೆ ಕಾರಣವೇ ಅನುಶಾಸನ. ಯಾರೋ ಹೇಳಿದ್ದಕ್ಕಾಗಿ ಮಾಡುವ ತಾತ್ಕಾಲಿಕ ಅನುಸರಿಸುವಿಕೆಯಲ್ಲ. ತನ್ನ ಅಂತರಂಗದ ಪ್ರಜ್ಞೆಗೆ ಪೂರಕವಾಗಿ ತಾನೇ ಸ್ವಯಂ ಪಾಲಿಸುವ ಸಾಮರ್ಥ್ಯ. ಅದು ಸಮಯಪಾಲನೆ, ಮಾತಿನ ಸಂಯಮ, ಸರಳತೆ, ಶಿಷ್ಟಾಚಾರ ಪಾಲನೆ, ವಾಣಿ ವಿವೇಕ, ಕೃತಿವಿವೇಕ ಸೇರಿದಂತೆ ಹತ್ತು ಹಲವು ರೀತಿಗಳಲ್ಲಿ ಸಂಘದ ಅಪೇಕ್ಷೆಗೆ ತಕ್ಕಂತೆ ತನ್ನನ್ನು ತಾನು ರೂಪಿಸುವುದು ಬಲು ಮುಖ್ಯ. ಹೀಗಾಗಿ ಸಂಘದ 100 ವರ್ಷದ ಯಾತ್ರೆಯಲ್ಲಿ ಸ್ವಯಂಸೇವಕರು ಮೈಗೂಡಿಸಿಕೊಂಡ ಅನುಶಾಸನ ಸಂಘದ ಪ್ರತಿಮೆಯನ್ನು ಸಮಾಜದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿಸಿದೆ.
ಸಂಘಾವಲೋಕನ ಮಾಡಿದಾಗ ಒಂದೇ ಕಾರ್ಯಪದ್ಧತಿಯ ಮೂಲಕ ಒಂದೇ ಕಾಲಮಾನದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ, ಮನೆಯಿಂದ ಮನೆಗೆ, ಹೃದಯದಿಂದ ಹೃದಯಕ್ಕೆ (Man to Man, Door to Door, Heart to Heart) ತಲುಪುತ್ತಾ ನಿರಂತರವಾಗಿ ಸಮಾಜ ಜಾಗರಣೆಯ ಮೂಲಕ ಕೋಟ್ಯಂತರ ಮಂದಿಯನ್ನು ಒಂದು ಶತಮಾನದ ಅವಧಿಯಲ್ಲಿ ಸಂಘಟಿಸಿರುವ ವೈಶಿಷ್ಟ್ಯಪೂರ್ಣ ಸಂಘಕಾರ್ಯವು ಮಾನವ ನಾಗರಿಕ ಇತಿಹಾಸದ ಮಹತ್ವದ ಮೈಲಿಗಲ್ಲುಗಳಲ್ಲೊಂದು. ಸಂಘದ ಪ್ರಾರಂಭ, ವಿಕಾಸ, ವರ್ತಮಾನದ ಸ್ಥಿತಿಗತಿಗಳನ್ನು ಗಮನಿಸಿದರೆ ಶತಮಾನ ಕಾಣುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಆಂದೋಲನದ ಸ್ವರೂಪದಿಂದ ರಾಷ್ಟ್ರೀಯ ಏಕಾತ್ಮತೆ, ಸಮರಸತೆ, ದೇಶದ ಏಕತೆ-ಅಖಂಡತೆ, ಸೇವೆ, ಸಮರ್ಪಣೆ, ದೇಶಭಕ್ತಿ ಮುಂತಾದ ಕೆಲವು ವಿಷಯಗಳನ್ನು ಸ್ಥಾಪಿತಗೊಳಿಸುವತ್ತ (Movement to Establishment) ಸಾಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.
ಸಂಘದ ಆರು ಮಂದಿ ಸರಸಂಘಚಾಲಕರು
1. ಡಾ.ಕೇಶವ ಬಲಿರಾಮ್ ಹೆಡಗೇವಾರ್ (1925 - 1940)
2. ಶ್ರೀ ಮಾಧವರಾವ್ ಸದಾಶಿವರಾವ್ ಗೋಳ್ವಲ್ಕರ್ (1940 - 1973)
3. ಶ್ರೀ ಮಧುಕರ ದತ್ತಾತ್ರೇಯ ದೇವರಸ್ (1973 - 1993)
4. ಶ್ರೀ ರಾಜೇಂದ್ರ ಸಿಂಗ್ (1993 - 2000)
5. ಶ್ರೀ ಕು. ಸೀ. ಸುದರ್ಶನ್ (2000 – 2009)
6. ಡಾ. ಮೋಹನ್ ಭಾಗವತ್ (2009ರಿಂದ )



