ಸೆಪ್ಟೆಂಬರ್ 5 - ಶಿಕ್ಷಕರ ದಿನಾಚರಣೆ ವಿಶೇಷ ಲೇಖನ ಲೇಖಕರು: - ಡಾ. ಟಿ. ಎನ್. ಲೋಕೇಶ್ ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ ಅಜ್ಞಾನವೆಂಬ ಕತ್ತಲಿನಿಂದ ಅಂಧನಾದವನ ಕಣ್ಣನ್ನು ಜ್ಞಾನವೆಂಬ ಅಂಜನ ಶಲಾಕೆಯಿಂದ ಬಿಡಿಸಿದ ಶ್ರೀಗುರುವಿಗೆ ನಮಸ್ಕಾರ ಎಂಬುದೇ ಈ ಶ್ಲೋಕದ ತಾತ್ಪರ್ಯವಾಗಿದೆ. ಅದು ಸಾವಿರಾರು ವರ್ಷಗಳ ಕತ್ತಲೆಯೇ ಇರಲಿ, ಚಿಕ್ಕ ಹಣತೆಯನ್ನು ಬೆಳಗಿಸಿದ ತಕ್ಷಣವೇ ಕತ್ತಲೆ ಎಲ್ಲಾ ಮಾಯವಾಗುತ್ತದೆ. ಹಾಗೆಯೇ ಸಾವಿರ ಜನ್ಮದ ಅಜ್ಞಾನದ ಅಂಧಕಾರದಿAದ ಜೀವವು ಬಂಧಿತವಾಗಿರಬಹುದು ಆದರೆ ಜೀವನದಲ್ಲಿ ಜ್ಞಾನಜ್ಯೋತಿಯಾದ ಶ್ರೀ ಗುರುವಿನ ಆಗಮನದಿಂದ ತಕ್ಷಣ ಅಜ್ಞಾನದ ಅಂಧಕಾರವೆಲ್ಲ ಕಳೆದು ಅವನು ಜೀವನ್ಮುಕ್ತನಾಗುವನು. ಮಾನವನು ಭೌತಿಕವಾಗಿ ಎರಡು ಕಣ್ಣುಗಳನ್ನು ಹೊಂದಿದ್ದರೂ ಸಹ ಅವನಿಗೆ ಜ್ಞಾನವೆಂಬ ಮೂರನೇ ಕಣ್ಣನ್ನು ನೀಡುವವನು ಶ್ರೀ ಗುರು. ಆದ್ದರಿಂದಲೇ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ಉತ್ಕೃಷ್ಟವಾದ ಸ್ಥಾನ ಕಲ್ಪಿಸಲಾಗಿದೆ. ತೈತ್ತೀರಿಯ ಉಪನಿಷತ್ ‘ಆಚಾರ್ಯ ದೇವೋಭವ’ ಎಂದಿದೆ. ಅಂದರೆ ಗುರು ಶಿಕ್ಷಣದ ಮೂಲಕ ಜೀವಸಂಸ್ಕಾರ ಮತ್ತು ಆತ್ಮಜ್ಞಾನವನ್ನು ನೀಡುವುದರಿಂದ ಗುರು ಸೃಷ್ಟಿ, ಸ್ಥಿತಿ, ಲಯ ಕರ್ತರಿಗೆ ಸಮಾನವೆಂದು ಗೌರವಿಸಲಾಗಿದೆ. ಪುರಾಣ ಮಹಾಪುರುಷರಾದ ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣರು ವಿಷ್ಣುವಿನ ಅವತಾರವೆಂದು ಉಲ್ಲೇಖಿಸಲಾಗಿದ್ದರೂ ಸಹ ಗುರುವಿನ ಮಾರ್ಗದರ್ಶನದಲ್ಲಿ ತಮ್ಮ ದೈವ ಜೀವನವನ್ನು ರೂಪಿಸಿಕೊಂಡರು. ಶ್ರೀ ಗುರು ಗಂಗಾ ನದಿಯಂತೆ, ಸಾಮಾನ್ಯರು ಕಸವನ್ನೆಲ್ಲಾ ಗಂಗಾ ನದಿಗೆ ಎಸೆದರೂ ಗಂಗಾ ನದಿಯ ಪಾವಿತ್ರö್ಯತೆ ಕಡಿಮೆಯಾಗುವುದಿಲ್ಲ. ಅಂತೆಯೇ ಶ್ರೀ ಗುರು ಎಲ್ಲಾ ವಿಧದ ನೀಚ, ಅಪಮಾನ ಮತ್ತು ನಿಂದನೆಗಳಿAದ ಮೇಲಿರುವವನು ಎಂದಿದ್ದಾರೆ ಶ್ರೀರಾಮಕೃಷ್ಣ ಪರಮಹಂಸರು. ಭಕ್ತಿಭಂಡಾರಿ ಬಸವಣ್ಣನವರು ತಮ್ಮ ವಚನದಲ್ಲಿ ಗುರುವಿನ ಮಹತ್ವವನ್ನು ಹೀಗೆ ವರ್ಣಿಸಿದ್ದಾರೆ. ‘ಮಡಿಕೆಯ ಮಾಡುವಡೆ ಮಣ್ಣೆ ಮೊದಲು ತೊಡುಗೆಯ ಮಾಡುವಡೆ ಹೊನ್ನೆ ಮೊದಲು ಶಿವಪಥವನರಿವಡೆ ಗುರುಪಥವೇ ಮೊದಲು’ ಚೈತನ್ಯನು, ಶಾಶ್ವತನು, ಶಾಂತನು ಆಕಾಶವನ್ನು ಮೀರಿ ನಿಂತವನು, ದೋಷವಿಲ್ಲದವನು, ಬಿಂದು - ನಾದಕಲೆಗಳಿಗೆ ಅತೀತನು ಆದ ಶ್ರೀಗುರುವನ್ನು ಕೃತಜ್ಞಾಪೂರ್ವಕವಾಗಿ ನಮಿಸುವ ಹಲವು ಸಂದರ್ಭಗಳು ನಮ್ಮ ಸಂಸ್ಕೃತಿಯಲ್ಲಿದೆ. ಅನಾದಿ ಕಾಲದಿಂದ, ಇಂದಿನವರೆಗೂ ಶ್ರೇಷ್ಠ ಗುರುಪರಂಪರೆಯನ್ನು ಭಾರತ ಕಂಡಿದೆ. ಅನೇಕ ಮಂದಿ ಗುರುಗಳು ತಮ್ಮ ಜೀವನವನ್ನೇ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ, ವ್ಯಕ್ತಿತ್ವ ವಿಕಸನಕ್ಕಾಗಿ ಮುಡಿಪಿಟ್ಟಿದ್ದಾರೆ. ಅಂತಹವರಲ್ಲಿ ಭಾರತ ಕಂಡ ಶ್ರೇಷ್ಠ ದಾರ್ಶನಿಕ, ರಾಜನೀತಿಜ್ಞ, ಶಿಕ್ಷಣ ತಜ್ಞ, ಶಿಕ್ಷಕ ಹಾಗೂ ಸ್ವಾತಂತ್ರ್ಯ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಪ್ರಮುಖರು. ಅವರ ಜನ್ಮ ದಿನಾಂಕ ಸೆಪ್ಟೆಂಬರ್ 05ನ್ನು ‘ಶಿಕ್ಷಕರ ದಿನ’ವಾಗಿ ಆಚರಿಸಲಾಗುತ್ತದೆ. ಭಾರತದಾದ್ಯಂತ ಶಿಕ್ಷಕರಿಗೆ ಗೌರವಪೂರ್ವಕವಾಗಿ ಹಬ್ಬದಂತೆ ಆಚರಿಸುವ ದಿನವೇ ಈ ಶಿಕ್ಷಕರ ದಿನಾಚರಣೆ. ಮೂಲತಃ ವೃತ್ತಿಯಿಂದ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರು ಶಿಕ್ಷಕವೃತ್ತಿಯ ಮೌಲ್ಯಗಳ ಪ್ರತಿರೂಪವಾಗಿದ್ದರು. ಅವರ ಅಪಾರ ಶಿಷ್ಯವರ್ಗ ಅವರನ್ನು ಭೇಟಿ ಮಾಡಿ ಸೆಪ್ಟೆಂಬರ್ 5 ರಂದು ನಿಮ್ಮ ಹುಟ್ಟುಹಬ್ಬವನ್ನು ನಾವೆಲ್ಲಾ ವಿಜೃಂಭಣೆಯಿಂದ ಆಚರಿಸುತ್ತೇವೆ ಎಂಬ ಕೋರಿಕೆಯನ್ನು ಮಾಡಿದಾಗ ಅದನ್ನು ಅತ್ಯಂತ ನಮ್ರತೆಯಿಂದ ನಿರಾಕರಿಸಿದ ರಾಧಾಕೃಷ್ಣನ್ ರವರು ತನ್ನ ಜನ್ಮದಿನವನ್ನು ಆಚರಿಸುವ ಬದಲು ರಾಷ್ಟçಕ್ಕೆ ಗುರುಪರಂಪರೆ ನೀಡಿದ ಮಹತ್ವವನ್ನು ಸ್ಮರಿಸಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಆಚರಿಸಿ ಎಂದು ಶಿಷ್ಯವೃಂದಕ್ಕೆ ತಾಕೀತು ಮಾಡಿದರು. 1962ರಲ್ಲಿ ಮೊದಲ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಸೆಪ್ಟೆಂಬರ್‌05ನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತಾ ಬರಲಾಗಿದೆ. ಪ್ರತಿ ಮಗುವೂ ತನ್ನ ವಿದ್ಯಾರ್ಥಿ ಜೀವನದಲ್ಲಿ ತನ್ನ ತಂದೆ-ತಾಯಿಗಿAತ ಹೆಚ್ಚು ಸಮಯ ತೊಡಗಿಸಿಕೊಳ್ಳುವುದು ಶಾಲೆಯಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ. ಹಾಗಾಗಿ ರಾಷ್ಟçದ ಶಿಕ್ಷಣದ ಗುಣಮಟ್ಟ ಪ್ರತ್ಯಕ್ಷವಾಗಿ ಶಿಕ್ಷಕನ ವ್ಯಕ್ತಿತ್ವವನ್ನು ಅವಲಂಬಿಸಿದೆ. ಅದೆಷ್ಟೇ ಶ್ರೇಷ್ಠವಾದ ಪಠ್ಯಕ್ರಮವನ್ನು, ಶಿಕ್ಷಣ ವ್ಯವಸ್ಥೆಯನ್ನು ಯಾವುದೇ ದೇಶ ಹೊಂದಿದ್ದರೂ, ಅದನ್ನು ಸಮರ್ಥವಾಗಿ ವಿದ್ಯಾರ್ಥಿಗಳ ಹೃದಯಕ್ಕೆ ಇಳಿಸದೇ ಇದ್ದರೆ ಅದು ವ್ಯರ್ಥ. ಹಾಗಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕನ ಪಾತ್ರ ಮಹತ್ವವಾದದ್ದು. ಆದ ಕಾರಣ ಶಿಕ್ಷಕರು ಎಲ್ಲಾ ಮೌಲ್ಯಗಳ ಗಣಿಯಂತಿರಬೇಕು. ಶಿಕ್ಷಕ ವೃತ್ತಿಯನ್ನು ನಿಸ್ವಾರ್ಥ ಸೇವೆಯೆಂದು ಪರಿಭಾವಿಸಿ ಸದೃಢ ರಾಷ್ಟçನಿರ್ಮಾಣ ಮಾಡುವ ಕೈಂಕರ್ಯದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಕ ರಾಷ್ಟçಶಿಲ್ಪಿ, ರಾಷ್ಟ್ರನಿರ್ಮಾಪಕನಾಗಿ ದೇಶ ಕಟ್ಟುವ ಕಾಯಕದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿರುತ್ತಾನೆ. ರಾಷ್ಟ್ರೀಯ ಶಿಕ್ಷಣ ನೀತಿ – 2020 ಸಹ ಶಿಕ್ಷಕನ ಮಹತ್ತ್ವವನ್ನು, ಔನ್ನತ್ಯವನ್ನು ಕೊಂಡಾಡಿದೆ. ಸದೃಢ ಮನಸ್ಥಿತಿ, ಮೌಲ್ಯಾಧಾರಿತ ವ್ಯಕ್ತಿತ್ವ ಹೊಂದಿರುವರು ಶಿಕ್ಷಕ ವೃತ್ತಿಗೆ ಬರುವ ಅನಿವಾರ್ಯತೆ ಇಂದು ಎದುರಾಗಿದೆ. ತಂದೆ ತಾಯಿ ಮಗುವಿಗೆ ಕೇವಲ ಭೌತಿಕ ಜನ್ಮ ನೀಡಿದರೆ, ಶ್ರೀ ಗುರು ಮಗುವಿಗೆ ಸಂಸ್ಕಾರ ನೀಡಿ ಆತನನ್ನು ಸಮಾಜದ ಆಸ್ತಿಯನ್ನಾಗಿ ಪರಿವರ್ತಿಸುತ್ತಾನೆ. ಯಾವ ದೇಶದಲ್ಲಿ ಉತ್ಕೃಷ್ಟ ಶಿಕ್ಷಕರ ಕೊರತೆ ಇರುವುದೋ ಆ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಶಿಕ್ಷಕ ತರಬೇತಿಯ ಅಂಕಪಟ್ಟಿ ಮಾತ್ರವೇ ಉತ್ತಮ ಶಿಕ್ಷಕನನ್ನು ಅಳೆಯುವ ಮಾನದಂಡವಲ್ಲ. ಅಂಕ ಮಾತ್ರ ಆಗಲೂ ಬಾರದು. ಆದರೆ ಆತ ಪಡೆದ ತರಬೇತಿಯ ಗುಣಮಟ್ಟ, ಪಡೆದ ಅನುಭವ, ಗಳಿಸಿದ ಜ್ಞಾನ ಎಲ್ಲವೂ ಶಿಕ್ಷಕನನ್ನು ಸಮಾಜದಲ್ಲಿ ಒಬ್ಬ ಅನುಕರಣಾಪ್ರಾಯ, ಆದರ್ಶ ವ್ಯಕ್ತಿಯನ್ನಾಗಿ ರೂಪಿಸಲು ಸಾಧ್ಯ. ಜಗತ್ತಿನಲ್ಲಿ ಭಾವನಾತ್ಮಕವಾಗಿ ಅತ್ಯಂತ ಹೆಚ್ಚು ಗೌರವಿಸಲ್ಪಡುವ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿಯು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಪ್ರತಿ ಮನೆಯಲ್ಲೂ ತಮ್ಮ ಮಕ್ಕಳನ್ನು ಒಬ್ಬ ಒಳ್ಳೆಯ ವೈದ್ಯ, ಇಂಜಿನಿಯರ್, ವಕೀಲ, ಉದ್ಯಮಿ, ವಿಜ್ಞಾನಿಯಾಗಬೇಕೆಂದೆಲ್ಲಾ ಬಯಸುವುದು ಸಹಜ. ಹಾಗಾಗಿ ಒಳ್ಳೆಯ ವಿದ್ಯಾಭ್ಯಾಸ ಸಿಗುವ ಶಾಲೆಗಳಿಗೆ, ಒಳ್ಳೆಯ ವ್ಯವಸ್ಥೆಗಳಿರುವ ವಿದ್ಯಾಲಯಗಳಿಗೆ ಸೇರಿಸುತ್ತಾರೆ, ಲಕ್ಷಾಂತರ ರೂಪಾಯಿಗಳನ್ನೂ ಖರ್ಚು ಮಾಡುತ್ತಾರೆ. ಮಧ್ಯಮ ವರ್ಗದವರು ಲಕ್ಷಗಟ್ಟಲೇ ಲೋನ್ ಮಾಡಿಯಾದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗುತ್ತಾರೆ. ಆದರೆ ಎಷ್ಟೇ ಹಣ ಖರ್ಚು ಮಾಡಿದರೂ, ವಿದ್ಯೆಯನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸುವ ಶಿಕ್ಷಕರಿಲ್ಲದಿದ್ದರೆ ಈ ಪ್ರಯತ್ನಗಳೆಲ್ಲ ವ್ಯರ್ಥ. ಆದ್ದರಿಂದ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧನೆ ಮಾಡುವ ಶಿಕ್ಷಕರ ಅಗತ್ಯತೆ ಪ್ರತಿಯೊಂದು ಕಾಲಕ್ಕೂ ಇದ್ದೇ ಇದೆ. ಇದರ ಅನಿವಾರ್ಯತೆಯನ್ನು ಅರಿತು ಸಮಾಜ ರೂಪಿಸುವುದಕ್ಕಾಗಿ, ಶಿಕ್ಷಕರಾಗುವುದಕ್ಕೇ ಮನಸ್ಸು ಮಾಡಬೇಕಾದ ಕರ್ತವ್ಯ ಇಂದಿನ ಪೀಳಿಗೆಯಲ್ಲಿದೆ. ತಾನು ಏನಾಗಬೇಕೆಂದು ನಿಶ್ಚಯಿಸುವ ಆಯ್ಕೆ ವಿದ್ಯಾರ್ಥಿಗಳದ್ದೇ ಆಗಿರುತ್ತದೆ. ಅದಕ್ಕೆ ತಕ್ಕಂತೆ ಅವರು ಲಭ್ಯವಿರುವ ಹಲವು ಕೋರ್ಸ್ಗಳನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ತಮ್ಮ ಮುಂದಿನ ಪೀಳಿಗೆ ಹೇಗಿರಬೇಕು, ಅವರನ್ನು ಹೇಗೆ ಸಮಾಜಕ್ಕೆ ಪೂರಕವಾಗಿ ತಯಾರು ಮಾಡಬೇಕು ಎನ್ನುವುದನ್ನು ನಿರ್ಧರಿಸುವ ಶಕ್ತಿ ಒಬ್ಬ ಸಮರ್ಥ ಶಿಕ್ಷಕನಿಗೆ ಇರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಇಂದಿನ ಯುವಪೀಳಿಗೆ ಶಿಕ್ಷಕ ವೃತ್ತಿಯ ಕಡೆಗೂ ಪ್ರಾಧಾನ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಶಿಕ್ಷಕ ವೃತ್ತಿಯನ್ನು ಪ್ರೀತಿಸುವವರು, ಶಿಕ್ಷಕನ ಸ್ಥಾನಕ್ಕೆ ನ್ಯಾಯವನ್ನು ಒದಗಿಸುವವರು ಶಿಕ್ಷಕ ವೃತ್ತಿಗೆ ಬರಬೇಕಾಗಿದೆ. ಶಿಕ್ಷಕರು ನಿಜಾರ್ಥದಲ್ಲಿ ಭಾರತೀಯತೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ರಾಯಭಾರಿಗಳು. ಈ ನಾಡಿನ ಭವ್ಯ ಇತಿಹಾಸವನ್ನು ಗಮನಿಸಿದಾಗ ಇಲ್ಲಿನ, ಸಂಸ್ಕೃತಿ, ಆಚರಣೆಗಳು, ಶ್ರೇಷ್ಠ ಚಿಂತನೆಗಳೆಲ್ಲವೂ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಗಮನಾರ್ಹ ಕೆಲಸ ಮಾಡಿರುವುದು ಇಲ್ಲಿನ ಗುರುಪರಂಪರೆಯೇ ಆಗಿದೆ. ಇಂದು ಶಿಕ್ಷಣದಲ್ಲಿ ಭಾರತೀಯತೆಯ ಕುರಿತು ಚರ್ಚೆಯಾಗುತ್ತಿರುವ ಹೊತ್ತಿಗೆ ಶಿಕ್ಷಕರಾಗುವವರು ಭಾರತವನ್ನು ಸರಿಯಾಗಿ ಅರಿತು, ಅದನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ. ಅವರನ್ನೂ ಭಾರತದ ಮೌಲ್ಯಗಳನ್ನು ತಮ್ಮ ಮುಂದಿನ ಪೀಳಿಗೆಗೆ ಪಸರಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರಾಗುವಂತೆ ಪ್ರೇರೇಪಿಸಬೇಕು. 2047ರ ವಿಕಸಿತ ಭಾರತದ ಕನಸನ್ನು ನನಸು ಮಾಡುವ ಈ ಅಮೃತ ಕಾಲಘಟ್ಟದಲ್ಲಿ ಯುವಜನತೆ ಶಿಕ್ಷಕನ ವೃತ್ತಿಯನ್ನು ಗೌರವಿಸಲಿ. ಆತ್ಮನಿರ್ಭರ ಭಾರತವಾಗುವ ಪ್ರಯತ್ನದಲ್ಲಿ ಜ್ಞಾನವನ್ನು ಬಯಸಿ ಬರುವ ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡುವ ಸಮರ್ಥ ಶಿಕ್ಷಕರನ್ನು ಒಳಗೊಳ್ಳುವುದೂ ಪ್ರಮುಖವಾದ ಅಂಶವೇ ಆಗಿದೆ. ಭಾರತ ಹಿಂದಿನಿAದಲೂ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ತನ್ನ ಜ್ಞಾನ ಪ್ರಸರಣದ ಕಾರಣಕ್ಕಾಗಿಯೇ ಎನ್ನುವುದನ್ನು ಮರೆಯುವಂತಿಲ್ಲ. ಜಗತ್ತಿನಲ್ಲಿ ಹಲವು ದೇಶಗಳು ಸುಸಂಸ್ಕೃತಗೊAಡಿದ್ದು ಇಲ್ಲಿನ ಗುರುಗಳು ಅಲ್ಲಿಗೆ ಹೋಗಿ ಜ್ಞಾನದಾನ ಮಾಡಿದ ಕಾರಣಕ್ಕಾಗಿಯೇ ಎನ್ನುವುದು ಇತಿಹಾಸ. ಇತಿಹಾಸದ ಗತವೈಭವವನ್ನು ಮರುಕಳಿಸಲು, ಹಾಗೆಯೇ ಜಗತ್ತಿಗೆ ಭಾರತೀಯ ಶಿಕ್ಷಕರ ಕೊಡುಗೆಯ ಮಹತ್ವ ಜಗಜ್ಜಾಹೀರುಗೊಳಿಸಬೇಕಿದೆ. ಯುವಜನತೆ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ರಾಷ್ಟ್ರಸೇವೆಯಲ್ಲಿ ಮತ್ತೊಮ್ಮೆ ಭಾರತ ಜಗದ್ಗುರು ಭಾರತವಾಗಿ ಇಡೀ ಮನುಕುಲಕ್ಕೆ ದಾರಿದೀಪವಾಗಬೇಕಿದೆ.