ಯಾವುದೇ ನಾಗರಿಕತೆಯ ಅಳಿವು-ಉಳಿವು ಎನ್ನುವುದು ಜನಸಂಖ್ಯೆಯ ಸಮತೋಲನದಲ್ಲಿಯೇ ನಿಂತಿದೆ. ಜನಸಂಖ್ಯೆಯೆನ್ನುವುದು ‘ಸ್ಪೋಟ’ವಾದಾಗ ಅವುಗಳಿಗೆ ನಿಯಂತ್ರಣ ತರುವ ಪ್ರಯತ್ನವನ್ನು ಜಗತ್ತು ಸಾಮೂಹಿಕವಾಗಿಯೇ ಕೈಗೊಂಡಿದೆ ಮತ್ತು ಹಲವು ದೇಶಗಳಲ್ಲಿ ಇದು ಯಶಸ್ಸನ್ನೂ ಪಡೆದಿದೆ. ಆದರೆ ಇದೇ ಹೊತ್ತಿಗೆ ನಾಗರಿಕೆತೆಯ ಉಳಿವಿಗಾಗಿ ಬೇಕಾದ ಕನಿಷ್ಠ ಜನಸಂಖ್ಯೆಯ ಪ್ರಮಾಣವನ್ನೂ ಗಮನದಲ್ಲಿಟ್ಟುಕೊಳ್ಳುವುದು ಸಾರ್ವಕಾಲಿಕ ಅನಿವಾರ್ಯವಾಗಿದೆ. ಯಾವುದೇ ದೇಶ, ಪ್ರದೇಶ, ಸಮುದಾಯದಲ್ಲಿರುವ ಒಬ್ಬ ಹೆಣ್ಣು ತನ್ನ ಜೀವಿತಾವಧಿಯಲ್ಲಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಾಳೆ ಎನ್ನುವುದನ್ನು ಟಿ ಎಫ್ ಆರ್ ಎನ್ನಲಾಗುತ್ತದೆ. ಟಿ ಎಫ್ ಆರ್ 2.1 ಎಂದರೆ ಒಂದು ಹೆಣ್ಣು ಜೀವಿತಾವಧಿಯಲ್ಲಿ 2.1 (ಸರಾಸರಿ) ಮಕ್ಕಳಿಗೆ ಜನ್ಮ ನೀಡಿದರೆ ಮುಂದಿನ ತಲೆಮಾರುಗಳ ನಂತರವೂ ಆ ಸಮುದಾಯ, ನಾಗರಿಕತೆ ಜೀವಂತವಾಗಿರುತ್ತದೆ. ಇಲ್ಲದಿದ್ದರೆ ಅಳಿವಿನ ಅಂಚಿಗೆ ಸಾಗುತ್ತದೆ. ಇಲ್ಲಿವರೆಗೂ ಟಿ ಎಫ್ ಆರ್ 2.1 ಎನ್ನುವುದರ ಹಿಂದೆಯೇ ಜಗತ್ತಿನ ಅನೇಕ ದೇಶಗಳು, ನಾಗರಿಕೆಗಳು, ಸಮುದಾಯಗಳು ಓಡುತ್ತಿದ್ದವು. ಅದನ್ನು ತಲುಪುವುದೇ ಕಷ್ಟ ಎನ್ನಿಸುತ್ತಿತ್ತು. ಆದರೆ ಇತ್ತೀಚೆಗೆ ಪ್ರಕಟಗೊಂಡ ಸಂಶೋಧನಾ ವರದಿಯೊಂದು ಹೊಸ ವಿಚಾರವನ್ನು ಸಮಾಜದ ಮುಂದಿಟ್ಟಿದೆ. ಏನಿದು ಹೊಸ ಸಂಶೋಧನೆ? 6 ಮಂದಿ ಸಂಶೋಧಕರ ತಂಡ ನಡೆಸಿದ ‘Threshold fertility for the avoidance of extinction under critical conditions’’ ಎಂಬ ಸಂಶೋಧನಾ ವರದಿ ಇತ್ತೀಚೆಗೆ PLOS One ಅಂತರರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಇದುವರೆಗೂ ವೈಶ್ವಿಕವಾಗಿ ಗುರುತಿಸಲಾಗಿದ್ದ ಒಟ್ಟು ಫಲವತ್ತತೆಯ ದರ (Total Fertility Rate) ಪ್ರತಿ ಮಹಿಳೆಗೆ 2.1 ಎಂದು ಅಂದಾಜಿಸಲಾಗಿತ್ತು. ಆದರೆ ಒಟ್ಟು ಫಲವತ್ತತೆಯ ದರ 2.7 ಇರಬೇಕೆಂದು ಸಂಶೋಧನೆ ತಿಳಿಸಿದೆ. ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ಬಹುತೇಕ ಎಲ್ಲಾ ದೇಶಗಳು ಹಿಂದಿನ ಟಿಎಫ್‌ಆರ್ ದರಕ್ಕೆ(2.1) ತಕ್ಕಂತೆ ಪ್ರತಿಸ್ಥಾಪನೆ ಫಲವತ್ತತೆಯ ಮಟ್ಟವನ್ನೇ (Replacement Level Fertility) ತಲುಪಲು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ಖಿಈಖ 2.7 ಎನ್ನುವುದು ಮನುಕುಲಕ್ಕೇ ಎಚ್ಚರಿಕೆ ಗಂಟೆಯಂತೆ ಕಾಣುತ್ತಿದೆ. ವೈಶ್ವಿಕ ಸವಾಲು: ವಿಶ್ವದಾದ್ಯಂತ ಒಟ್ಟು ಫಲವತ್ತತೆಯ ಪ್ರಮಾಣದಲ್ಲಿ ಗಣನೀಯ ಕುಸಿತ ಆಗಿದೆ. ವಿಶ್ವದಲ್ಲಿ 1960ರಲ್ಲಿ 5.3 ಇದ್ದ ಟಿಎಫ್‌ಆರ್ 2023ರ ವೇಳೆಗೆ 2.3ಕ್ಕೆ ಇಳಿದಿತ್ತು. ಪ್ರಸ್ತುತ ಜಗತ್ತಿನ ಮೂರನೇ ಎರಡು ಭಾಗದ ಜನರು ಈ ರೀತಿ ಆರ್‌ಎಲ್‌ಎಫ್ ಮಟ್ಟಕ್ಕಿಂತ ಕಡಿಮೆ ಇರುವ ಭೂಭಾಗಗಳಲ್ಲೇ ನೆಲೆಸಿದ್ದಾರೆ. ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ಹಲವು ದೇಶಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ಎಲ್ಲಾ ಜಿ 7 ರಾಷ್ಟçಗಳೂ (ಇಟಲಿ 1.29, ಜಪಾನ್ 1.30, ಕೆನಡಾ 1.47, ಜರ್ಮನಿ 1.53, ಯುಕೆ 1.57, ಅಮೆರಿಕ 1.66, ಫ್ರಾನ್ಸ್ 1,79) ಕಡಿಮೆ ರಿಪ್ಲೇಸ್ಮೆಂಟ್ ದರವನ್ನು ಹೊಂದಿವೆ. ಫಲಿಸಲಿಲ್ಲ ಸರ್ಕಾರಿ ಪ್ರೋತ್ಸಾಹ: ಹೆಚ್ಚು ಮಕ್ಕಳನ್ನು ಹೊಂದುವುದಕ್ಕೆ ಸರ್ಕಾರಗಳ ಪ್ರೋತ್ಸಾಹದ ನಂತರವೂ ಟಿಎಫ್‌ಆರ್ ದರಕ್ಕೆ ಸಮತೋಲನವಾಗಿ ಆರ್‌ಎಲ್‌ಎಫ್ ಸುಧಾರಣೆ ಕಂಡಿಲ್ಲ ಎನ್ನುವುದು ಕಳವಳಕಾರಿ ಸಂಗತಿ. 1980ರಿಂದ ಯುರೋಪ್ ಹಾಗೂ ಏಷ್ಯಾದ ಕೆಲವು ಅಭಿವೃದ್ಧಿ ಹೊಂದಿದ ದೇಶಗಳ ಟಿಆರ್‌ಎಫ್, ಆರ್‌ಎಲ್‌ಎಫ್‌ಗಿಂತ ಕಡಿಮೆಯೇ ಇದೆ. ಇಲ್ಲಿ ಆರ್‌ಎಲ್‌ಎಫ್ ಹೆಚ್ಚಿಸುವಂತಹ ಯಾವ ಯೋಜನೆಗಳನ್ನು ಸರ್ಕಾರಗಳು ಕೈಗೊಂಡಿದ್ದವು, ಅವುಗಳು ಎಷ್ಟರ ಮಟ್ಟಿಗೆ ಪರಿಣಾಮಾತ್ಮಕವಾಗಿದ್ದವು ಎನ್ನುವುದರ ಅವಲೋಕನವೂ ಆಗಬೇಕಿದೆ. ಸರ್ಕಾರದ ಪ್ರೋತ್ಸಾಹವೂ ಟಿಎಫ್‌ಆರ್ ಹೆಚ್ಚಳಕ್ಕೆ ಸಹಕಾರಿಯಾಗಲಿಲ್ಲ ಎಂದರೆ ಪರಿಹಾರ ಏನು ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕಿದೆ. ಕಾಲಾಂತರದಲ್ಲಿ ಈ ರೀತಿಯ ಬದಲಾವಣೆಯು ಜನಸಂಖ್ಯೆ ಕಡಿಮೆಯಿರುವ, ಈಗಾಗಲೇ ಕುಗ್ಗುತ್ತಿರುವ ಕುಟುಂಬಗಳ ವಂಶವೃಕ್ಷವನ್ನು ಅಳಿಸಿಹಾಕಬಹುದು. ಹೆಚ್ಚಬೇಕು ಹೆಣ್ಣು ಮಕ್ಕಳ ಜನನ: ಹೆಣ್ಣು ಮಗುವಿನ ಜನನ ಹೆಚ್ಚಾದರೆ, ಆ ಮಗು ಸಂತಾನೋತ್ಪತ್ತಿಯ ವಯಸ್ಸನ್ನು ತಲುಪುವ ಮತ್ತು ಮಕ್ಕಳನ್ನು ಪಡೆಯುವ ಸಾಧ್ಯತೆ ಸಹಜವಾಗಿ ಹೆಚ್ಚಾಗುತ್ತವೆ. ಇದು ಕಾಲಾಂತರದಲ್ಲಿ ನೈಸರ್ಗಿಕವಾಗಿ ಒಟ್ಟು ಫಲವತ್ತತೆಯ ಪ್ರಮಾಣ ದರಕ್ಕೆ ಸರಿಯಾಗಿ ಪ್ರತಿಸ್ಥಾಪನೆಯ ಫಲವತ್ತತೆಯ ಮಟ್ಟವನ್ನು ಸ್ಥಿರವಾಗಿಟ್ಟುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ. ಅಳಿವಿನಂಚಿಗೆ ಸರಿಯಲಿದೆ ಸಾವಿರಾರು ಭಾಷೆಗಳು: ಟಿಎಫ್‌ಆರ್ ದರವು ನಿಗದಿತ ಆರ್‌ಎಲ್‌ಎಫ್ ದರಕ್ಕಿಂತ ಕುಸಿತ ಕಂಡರೆ ಅದು ಭಾಷೆಯ ಮೇಲೂ ಪರಿಣಾಮ ಬೀರಲಿದ್ದು, ಇರುವ 6,700ಕ್ಕೂ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಶೇ.40ರಷ್ಟು ಭಾಷೆಗಳು ಮುಂದಿನ ನೂರು ವರ್ಷಗಳಲ್ಲಿ ನಶಿಸಿಹೋಗುತ್ತವೆ. ಭಾಷೆಗಳ ನಾಶವು ಸಂಸ್ಕೃತಿ, ಕಲೆ, ಸಂಗೀತ ಮತ್ತು ಮೌಖಿಕ ಪರಂಪರೆಗಳ ಅವನತಿಗೂ ಕಾರಣವಾಗುತ್ತವೆ ಎನ್ನುವುದು ವರದಿಯಲ್ಲಿ ಉಲ್ಲೇಖಗೊಂಡಿದೆ. ಭಾರತದಲ್ಲಿ 1950ರಲ್ಲಿ 6.18 ಇದ್ದ ಫಲವತ್ತತೆಯ ದರವು 2023ರ ಹೊತ್ತಿಗೆ 1.9ಕ್ಕೆ ಇಳಿದಿತ್ತು. 2050ರಲ್ಲಿ 1.29 ಮತ್ತು 2100ರ ಹೊತ್ತಿಗೆ 1.04ಕ್ಕೆ ತಲುಪುತ್ತವೆ ಎಂದು ಅಂಕಿಅAಶಗಳು ಹೇಳುತ್ತವೆ. ಈ ಅಂಕಿಅAಶಗಳಾಧಾರಿತವಾಗಿ ಭಾರತದ ಭವಿಷ್ಯವನ್ನು ನಾವು ಗುರುತಿಸುವುದಾದರೆ ಸಂಶೋಧನೆ ತಿಳಿಸಿದ ಎಲ್ಲಾ ಸಮಸ್ಯೆಗಳೂ ಭಾರತದಲ್ಲಿ ಅತ್ಯಂತ ಆಘಾತಕಾರಿ ಪರಿಣಾಮ ಬೀರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಭಾರತದಲ್ಲಿ ಒಟ್ಟು ಫಲವತ್ತತೆಯ ಕುರಿತಾದ ಚರ್ಚೆಯಲ್ಲಿ ಪ್ರಮುಖವಾಗಿ ಎರಡು ಹೇಳಿಕೆಗಳನ್ನು ಗಮನಿಸಬಹುದು. 1. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ್ ಅವರು, "ಕುಸಿಯುತ್ತಿರುವ ಜನಸಂಖ್ಯೆಯು ಗಂಭೀರ ಕಳವಳಕಾರಿ ಸಂಗತಿ. ಒಂದು ಸಮಾಜದ ಒಟ್ಟು ಫಲವತ್ತತೆ ದರವು 2.1ಕ್ಕಿಂತ ಕಡಿಮೆಯಾದಾಗ, ಅದು ಅಳಿವಿನಂಚಿನಲ್ಲಿರುವ ಅಪಾಯವಿದೆ ಎಂದು ಜನಸಂಖ್ಯಾ ವಿಜ್ಞಾನವು ಸೂಚಿಸುತ್ತದೆ. ಇದರಿಂದಾಗಿ ಸಮಾಜದ ಕುಸಿತಕ್ಕೆ ಬಾಹ್ಯ ಸವಾಲುಗಳು ಬೇಕಾಗಿಲ್ಲ; ತನ್ನದೇ ಕಾರಣಕ್ಕೆ ಕುಸಿಯುತ್ತದೆ. ಆದ್ದರಿಂದ, 2.1ಕ್ಕಿಂತ ಹೆಚ್ಚಿನ ಫಲವತ್ತತೆ ದರವನ್ನು ನಮ್ಮ ಸಮಾಜ ಕಾಯ್ದುಕೊಳ್ಳುವುದು ಅತ್ಯಗತ್ಯ. ಹಾಗಾಗಿ ಪ್ರತಿ ದಂಪತಿ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು" ಎಂದು ಹೇಳಿದ್ದರು. ಆರೆಸ್ಸೆಸ್ ಸರಸಂಘಚಾಲಕರ ಹೇಳಿಕೆಯಂತೆಯೇ 2025ರ ಜನವರಿಯಲ್ಲಿ ಉತ್ತರಪ್ರದೇಶದ ಕುಂಭಮೇಳದಲ್ಲಿ ನಡೆದ ವಿಶ್ವ ಹಿಂದು ಪರಿಷದ್‌ನ ಕೇಂದ್ರೀಯ ಮಾರ್ಗದರ್ಶಕ ಮಂಡಲ ಸಭೆ, ಅನೇಕ ಮಠಾಧೀಶರುಗಳು, ಜಗದ್ಗುರುಗಳು, ಸಾಧು ಸಂತರೂ ಈ ನೆಲೆಗಟ್ಟಿನಲ್ಲೇ ಹೇಳಿಕೆಗಳನ್ನು ನೀಡಿದ್ದಾರೆ. 2. ಮೂರು ಮಕ್ಕಳನ್ನು ಪ್ರೋತ್ಸಾಹಿಸಿ ಆಂಧ್ರಪ್ರದೇಶವು ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರು ಗ್ರಾಮ ಪಂಚಾಯತ್, ಮಂಡಲ ಪ್ರಜಾ ಪರಿಷತ್ ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಭಾಗವಹಿಸುವಂತಿಲ್ಲ ಎಂಬ 1994ರ ನಿಯಮವನ್ನು ತಿದ್ದುಪಡಿ ಮಾಡಿದೆ. ತೆಲಂಗಾಣವೂ 2018ರ ತನ್ನ ಪಂಚಾಯತ್ ರಾಜ್ ಕಾಯಿದೆಯ ನಿಯಮಗಳನ್ನು ತಿದ್ದುಪಡಿ ಮಾಡಿದೆ. ತಮಿಳುನಾಡಿನಲ್ಲೂ ಜನಸಂಖ್ಯಾ ಆಧಾರಿತ ಲೋಕಸಭಾ ಕ್ಷೇತ್ರ ಪುನರ್‌ವಿಂಗಡಣೆ (ಡಿ-ಲಿಮಿಟೇಷನ್) ಕಾರಣವನ್ನು ನೀಡಿ ರಾಜ್ಯದ ಜನರು ಮೂರು ಮಕ್ಕಳನ್ನು ಹೊಂದಬೇಕು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕರೆ ನೀಡಿದ್ದಾರೆ. ಈ ಮೇಲಿನ ಎರಡೂ ಹೇಳಿಕೆಗಳಲ್ಲೂ ಇರುವ ಉದ್ದೇಶ ಸ್ಪಷ್ಟವಾಗಿಯೇ ಇದೆ. ಆರ್‌ಎಸ್‌ಎಸ್ ಸರಸಂಘಚಾಲಕರ ಮತ್ತು ಇತರೆ ಸಾಧು ಸಂತರ ಹೇಳಿಕೆಗಳು ಸಹಸ್ರಾರು ವರ್ಷಗಳಿಂದ ಜಗತ್ತಿನ ಕಲ್ಯಾಣಕ್ಕಾಗಿಯೇ ಶ್ರಮಿಸುತ್ತಿರುವ ನಾಗರಿಕತೆಯ ಉಳಿವಿನ ದೃಷ್ಟಿಯಿಂದ ಹೇಳಿರುವುದಾದರೆ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ರಾಜಕೀಯ ನಾಯಕರು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ತಮ್ಮ ಸ್ಥಾನಮಾನ ಮತ್ತು ಕ್ಷೇತ್ರವಾರು ವಿಂಗಡಣೆಯಾದಾಗ ಯಾವುದೋ ಕೆಲವು ಕ್ಷೇತ್ರಗಳು ಧರ್ಮ, ಮತ, ಜಾತಿ ಪ್ರಾಬಲ್ಯದ ಆಧಾರದ ಮೇಲೆ ರಚನೆಯಾಗದಂತೆ ಎಚ್ಚರಿಕೆಯನ್ನು ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಜನಸಂಖ್ಯೆ ಹೆಚ್ಚಾಗಬೇಕು ಎನ್ನುವುದು ಇಂದಿನ ಏಕಕಂಠವಾಗುತ್ತಿದೆ. ಕುಸಿಯಲು ಕಾರಣಗಳು ಆರ್ಥಿಕ ಕಾರಣ: ಇಂದಿನ ದಿನಮಾನಗಳಲ್ಲಿ ಹೆಚ್ಚಿರುವ ವಿದ್ಯಾಭ್ಯಾಸದ ಖರ್ಚಿನ ಕಾರಣಕ್ಕಾಗಿ ತಮ್ಮ ಇತರೆ ಜವಾಬ್ದಾರಿಗಳನ್ನು ನಿಭಾಯಿಸುವ ಸಲುವಾಗಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಯೋಜನೆಯನ್ನೇ ಕೈಬಿಡುತ್ತಾರೆ. ಒಂದು ವೇಳೆ ಇಬ್ಬರು ಅಥವಾ ಹೆಚ್ಚು ಮಕ್ಕಳನ್ನು ಹೊಂದುವ ಇಚ್ಛೆ ಇದ್ದರೂ ಆಕಸ್ಮಿಕವಾಗಿ ಬಂದೆರಗುವ ಸಾಲಬಾಧೆ, ಮನೆಮಂದಿಯ ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಅಸ್ಥಿರತೆಯು ಇಡೀ ಮನೆಯ ಆರ್ಥಿಕ ಶಿಸ್ತನ್ನೇ ಕದಡಿಬಿಡುತ್ತವೆ. ಇವುಗಳ ಜೊತೆಗೆ ಕಾಲಕಳೆದಂತೆ ಸಹಜವಾಗಿಯೇ ಹೆಚ್ಚುತ್ತಿರುವ ದಿನನಿತ್ಯದ ಜೀವನನಿರ್ವಹಣಾ ವೆಚ್ಚವು ತಮ್ಮ ಯೋಜನೆಯಂತೆ ಕಂಡ ಕನಸುಗಳಲ್ಲಿ ಹಲವನ್ನು ಕೈಬಿಡುವಂತೆ ಮಾಡಿಬಿಡುತ್ತವೆ. ವಿಭಕ್ತ ಕುಟುಂಬಗಳು: ಇಂದು ವೈಯಕ್ತಿಕ ಕಾರಣಗಳಿಗೋ ಅಥವಾ ಅನಿವಾರ್ಯ ಕಾರಣಗಳಿಗೋ ಮದುವೆಯಾದ ನವದಂಪತಿಯು ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುವುದು ರೂಢಿಯಾಗುತ್ತಿದೆ. ವಿಭಕ್ತ ಕುಟುಂಬಗಳಲ್ಲಿ ಹೆತ್ತ ಒಂದು ಮಗುವನ್ನೇ ಸಂಭಾಳಿಸುವುದು ಕಷ್ಟ. ಹಾಗಿರುವಾಗ ಮೂವರು ಮಕ್ಕಳನ್ನು ನೋಡಿಕೊಳ್ಳುವುದು ತೀರ ಅಸಂಭವ ಎನ್ನುವ ಭಾವನೆಯಿದೆ. ಕುಟುಂಬ ಕೇವಲ ಭಾವನೆಗಳಾಧಾರಿತವಾದದ್ದಲ್ಲ, ಕೌಟುಂಬಿಕ ಆರ್ಥಿಕತೆಯನ್ನು ಸಮರ್ಥವಾಗಿಟ್ಟುಕೊಳ್ಳಲು ಸಹಕಾರಿ ಎನ್ನುವುದು ಇನ್ನೂ ಮನವರಿಕೆಯಾಗಿಲ್ಲ. ಹೆಣ್ಣು ಭ್ರೂಣ ಹತ್ಯೆ: ಹೆಣ್ಣು ಭ್ರೂಣ ಹತ್ಯೆ ಎನ್ನುವುದು ಹಿಂದಿಗಿAತ ಸಾಕಷ್ಟು ಕಡಿಮೆಯಾಗಿದೆ. ಆದರೂ ಭ್ರೂಣಹತ್ಯೆಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಟಿಎಫ್‌ಆರ್ ಎನ್ನುವುದು ನೇರವಾಗಿ ಮಹಿಳೆಗೇ ಸಂಬAಧಿಸಿದ ವಿಚಾರವಾದ್ದರಿಂದ, ಹೆಣ್ಣು ಭ್ರೂಣ ಹತ್ಯೆಯು ಕೇವಲ ಒಂದು ಹೆಣ್ಣು ಮಗುವಿನ ಹತ್ಯೆಯಲ್ಲದೆ, ಇಡೀ ಮನುಕುಲದ ಅಳಿವಿಗೇ ಪ್ರಮುಖ ಕಾರಣವಾಗುತ್ತಿದೆ. ‘ವೋಕಿಸಂ’ ಪ್ರಭಾವ: ಪಾಶ್ಚಾತ್ಯರ ಅನುಸರಣೆಯ ಪ್ರಭಾವದಿಂದಾಗಿ ಮದುವೆಯ ಕುರಿತು ನಿರಾಸಕ್ತಿ, ‘ಮೈ ಬಾಡಿ, ಮೈ ಚಾಯ್ಸ್’, ‘ವಿವಾಹ ಒಂದು ಕಾಂಟ್ರ‍್ಯಾಕ್ಟ್, ಕಮಿಟ್ಮೆಂಟ್’, ‘ತಡವಾಗಿ ಮದುವೆ ಆಗುವುದೂ ಒಂದು ಟ್ರೆಂಡ್’ ಎಂಬAತಹ ಮನೋಭಾವ ಮೂಡಿದೆ. ವಿವಾಹವಾಗದಿದ್ದರೂ ತಮ್ಮ ಏಕಾಂಗಿತನವನ್ನು ಮರೆಯಲು ಹಾಗೂ ದೈಹಿಕ ತೃಷೆಯನ್ನು ತೀರಿಸಿಕೊಳ್ಳಲು ಈ ನೆಲದ ಸಂಸ್ಕೃತಿಗೆ ವಿರುದ್ಧವಾದ ‘ಲಿವಿಂಗ್ ಟುಗೆದರ್’, ‘ಫ್ರೆಂಡ್ಸ್ ವಿಥ್ ಬೆನಿಫಿಟ್ಸ್’, ‘ಒನ್ ನೈಟ್ ಸ್ಟಾö್ಯಂಡ್’, ಮುಂತಾದ ಆಧುನಿಕ ಸಂಬAಧಗಳ ಮೊರೆ ಹೋಗುತ್ತಿದ್ದಾರೆ. ಇವುಗಳ್ಯಾವುದೂ ಮಕ್ಕಳನ್ನು ಹೊಂದುವ ಉದ್ದೇಶವನ್ನು ಒಳಗೊಂಡಿಲ್ಲ ಎನ್ನುವುದು ಜನಸಂಖ್ಯೆಯ ಮುಂದುವರಿಕೆಗೆ ತೊಡಕಾಗಿವೆ. ಪರಿಹಾರವೇನು? ವಯಸ್ಸಾದವರ ಮತ್ತು ಕುಸಿಯುತ್ತಿರುವ ಕಾರ್ಮಿಕಶಕ್ತಿಯನ್ನೂ ಒಳಗೊಂಡು ಸರ್ವರನ್ನೂ ಬೆಂಬಲಿಸುವ ಆರ್ಥಿಕ ಬೆಳವಣಿಗೆಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ನೀತಿಗಳ ಮೇಲೆ ಭಾರತ ಗಮನ ಹರಿಸಬೇಕು. ಪ್ರತಿ ಕುಟುಂಬಕ್ಕೂ ಅಧಿಕವಾಗಿ ಆರ್ಥಿಕ ಹೊರೆಯಾಗುವುದು ಆರೋಗ್ಯ ಮತ್ತು ಮಕ್ಕಳ ಶಿಕ್ಷಣ. ಆದ್ದರಿಂದ ಈ ಎರಡು ಕ್ಷೇತ್ರಗಳಲ್ಲಿ ಕುಟುಂಬಕ್ಕೆ ಪೂರಕವಾದ ಸರ್ಕಾರದ ನೀತಿ-ನಿಯಮಗಳು ರೂಪುಗೊಳ್ಳಬೇಕು. ಆರ್‌ಎಲ್‌ಎಫ್‌ಗೆ ತಕ್ಕಂತೆ ಟಿಎಫ್‌ಆರ್ ಅನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು. ಎಲ್ಲದಕ್ಕಿಂತ ಮಿಗಿಲಾಗಿ ಜನಮಾನಸದ ಮಾನಸಿಕತೆ ಮೂರು ಮಕ್ಕಳನ್ನು ಹೊಂದುವುದಕ್ಕೆ ಸಿದ್ಧವಾಗಬೇಕು. ಅದಕ್ಕೆ ಪೂರಕವಾದ ವ್ಯವಸ್ಥೆ ರೂಪುಗೊಳ್ಳಬೇಕು. ಜನಸಂಖ್ಯೆ ವಿಪರೀತವಾದರೆ ಸೀಮಿತ ಸಂಪನ್ಮೂಲಗಳ ಹಂಚಿಕೆ ಹೇಗೆ? ಪ್ರಕೃತಿಯ ಶೋಷಣೆ ಆಗುವುದಿಲ್ಲವೇ? ಇಂತಹ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬೇಕಾಗುತ್ತದೆ.